ದಕ್ಷಿಣ ಕನ್ನಡ : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ದೇವರ ದರ್ಶನ ಸಮಯದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದ್ದು, ಭಕ್ತರಿಗೆ ಇದೀಗ ಹೆಚ್ಚುವರಿ ಒಂದು ಗಂಟೆಯ ದರ್ಶನ ಅವಕಾಶ ಲಭ್ಯವಾಗಿದೆ.
ಈ ಮೊದಲು ಪ್ರತಿ ನಿತ್ಯ ಮಧ್ಯಾಹ್ನ 1.30ರಿಂದ 3.30ರ ವರೆಗೆ ದೇವರ ದರ್ಶನವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುತ್ತಿತ್ತು. ಆದರೆ ಭಕ್ತರ ಅನುಕೂಲಕ್ಕಾಗಿ ಇದೀಗ ಮಧ್ಯಾಹ್ನ 2ರಿಂದ 3ರ ವರೆಗೆ ಮಾತ್ರ ದರ್ಶನವನ್ನು ತಾತ್ಕಾಲಿಕವಾಗಿ ಬಂದ್ ಮಾಡುವಂತೆ ನಿರ್ಧರಿಸಲಾಗಿದೆ. ಇದರೊಂದಿಗೆ ಪ್ರತಿ ದಿನ ಭಕ್ತರಿಗೆ ಮಧ್ಯಾಹ್ನ ಇನ್ನೊಂದು ಗಂಟೆ ಹೆಚ್ಚುವರಿ ದರ್ಶನದ ಅವಕಾಶ ದೊರಕಿದೆ. ದೇವಸ್ಥಾನದ ಆಡಳಿತ ಮಂಡಳಿಯ ನಿರ್ಣಯದ ಮೇರೆಗೆ ಈ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಯಾತ್ರಾ ಕ್ಷೇತ್ರಗಳಲ್ಲಿ ಒಂದಾದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ರಾಜ್ಯದ ವಿವಿಧ ಭಾಗಗಳಷ್ಟೇ ಅಲ್ಲದೆ ಹೊರರಾಜ್ಯಗಳಿಂದಲೂ ಸಾವಿರಾರು ಭಕ್ತರು ಆಗಮಿಸುತ್ತಾರೆ. ವಿಶೇಷವಾಗಿ ಸರ್ಪಸಂಸ್ಕಾರ, ಆಶ್ಲೇಷ ಬಲಿ ಸೇರಿದಂತೆ ವಿವಿಧ ಸೇವೆಗಳಿಗಾಗಿ ಪ್ರತಿದಿನ ಭಕ್ತರ ದಟ್ಟಣೆ ಹೆಚ್ಚುತ್ತಿದ್ದು, ಈ ಹಿನ್ನೆಲೆಯಲ್ಲಿ ದರ್ಶನ ಸಮಯ ವಿಸ್ತರಣೆ ಮಹತ್ವದ ನಿರ್ಧಾರವಾಗಿದೆ.
ಇದನ್ನೂ ಓದಿ : ಪೊಲೀಸ್ ಕಾನ್ಸ್ಟೇಬಲ್ ಹೃದಯಾಘಾತದಿಂದ ಸಾವು!


















