ಚೆನ್ನೈ: ಕಳೆದ ಐದು ವರ್ಷಗಳಿಂದ ಸಾಮಾಜಿಕ ಜಾಲತಾಣದಲ್ಲಿ ಹಣಕಾಸು ಹಾಗೂ ಹೂಡಿಕೆ ಕುರಿತು ಸಲಹೆ ನೀಡುತ್ತಾ ಲಕ್ಷಾಂತರ ಹಿಂಬಾಲಕರನ್ನು ಹೊಂದಿದ್ದ 27 ವರ್ಷದ ಯುವ ಇನ್ಫ್ಲೂಯೆನ್ಸರ್ (Finance Influencer) ವಿ. ಹರೀಶ್, ಚೆನ್ನೈ ಸಮೀಪದ ಬಾಡಿಗೆ ವಿಲ್ಲಾದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾವಿಗೂ ಮುನ್ನ ವಿಡಿಯೋ ದಾಖಲಿಸಿರುವ ಹರೀಶ್, ಟೆಕ್ ಕಂಪನಿಯೊಂದರ ಸಿಇಒ ಜೇಸನ್ ಸ್ಯಾಮ್ಯುಯೆಲ್ ಅವರಿಂದ ತೀವ್ರ ಮಾನಸಿಕ ಕಿರುಕುಳ, ಸೈಬರ್ ಬೆದರಿಕೆ ಹಾಗೂ ಆದಾಯ ತೆರಿಗೆಗೆ ಸಂಬಂಧಿಸಿದ ಬೆದರಿಕೆಗಳನ್ನು ಎದುರಿಸಬೇಕಾಯಿತು ಎಂದು ಆರೋಪಿಸಿದ್ದಾರೆ. ಈ ಘಟನೆ ಸಾಮಾಜಿಕ ಜಾಲತಾಣ ವಲಯದಲ್ಲಿ ತೀವ್ರ ಆಘಾತ ಮೂಡಿಸಿದೆ.
ಖ್ಯಾತಿ ಮತ್ತು ಅರ್ಹತೆ ಕುರಿತು ಸೋಷಿಯಲ್ ಮೀಡಿಯಾದಲ್ಲಿ ವಿವಾದ
ಇನ್ಸ್ಟಾಗ್ರಾಮ್ ಮತ್ತು ಯೂಟ್ಯೂಬ್ನಲ್ಲಿ ‘ಫೈನಾನ್ಸ್ ವಿತ್ ಹರೀಶ್’ ಎಂಬ ಖಾತೆಯ ಮೂಲಕ ಜನಪ್ರಿಯತೆ ಗಳಿಸಿದ್ದ ಹರೀಶ್, ಹಣಕಾಸು ಸಲಹೆಗಳನ್ನು ನೀಡಲು ಕಾನೂನುಬದ್ಧ ಅರ್ಹತೆ ಹೊಂದಿದ್ದಾರೆಯೇ ಎಂಬ ಬಗ್ಗೆ ಕಳೆದ ಕೆಲವು ದಿನಗಳಿಂದ ಸಾರ್ವಜನಿಕವಾಗಿ ತೀವ್ರ ಚರ್ಚೆ ಹಾಗೂ ವಿವಾದಕ್ಕೆ ಗುರಿಯಾಗಿದ್ದರು. ಸೆಬಿ (SEBI) ಅಧಿಕೃತ ನೋಂದಾಯಿತ ಹೂಡಿಕೆ ಸಲಹೆಗಾರರ (RIA) ಪರವಾನಗಿ ಹೊಂದಿಲ್ಲದೆ ಹರೀಶ್ ಜನರಿಗೆ ತಪ್ಪು ಮಾರ್ಗದರ್ಶನ ನೀಡುತ್ತಿದ್ದಾರೆ ಎಂದು ಜೆಜುರಿಯಾ ಇಂಕ್ನ ಸಿಇಒ ಜೇಸನ್ ಸ್ಯಾಮ್ಯುಯೆಲ್ ಆರೋಪಿಸಿದ್ದರು. ಈ ಕುರಿತು ಅಕ್ಟೋಬರ್ 18ರಂದು ಇನ್ಸ್ಟಾಗ್ರಾಮ್, ಫೇಸ್ಬುಕ್ ಮತ್ತು ಯೂಟ್ಯೂಬ್ನಲ್ಲಿ ವಿಡಿಯೋಗಳು ಹಾಗೂ ಪೋಸ್ಟ್ಗಳನ್ನು ಹಂಚಿಕೊಂಡಿದ್ದ ಸ್ಯಾಮ್ಯುಯೆಲ್, ಹರೀಶ್ ಅವರನ್ನು ಸಾರ್ವಜನಿಕವಾಗಿ ತರಾಟೆಗೆ ತೆಗೆದುಕೊಂಡಿದ್ದರು. ಈ ಬೆಳವಣಿಗೆಯಿಂದಾಗಿ ಮೆಟಾ ಸಂಸ್ಥೆಯು ಹರೀಶ್ ಅವರ ಅಧಿಕೃತ ಖಾತೆಯನ್ನು ನಿಷೇಧಿಸಿತ್ತು. ನಂತರ ಅವರು ಹೊಸ ಖಾತೆ ಮೂಲಕ ವಿಡಿಯೋಗಳನ್ನು ಹಾಕಿದರೂ ಸಹ ಅವುಗಳನ್ನು ತೆಗೆದುಹಾಕಲಾಗಿತ್ತು.
3 ಕೋಟಿ ರೂ.ಗೆ ಬೇಡಿಕೆ, ಬೆದರಿಕೆ ಆರೋಪ
ತಮ್ಮ ಮಗನ ಸಾವಿಗೆ ಜೇಸನ್ ಸ್ಯಾಮ್ಯುಯೆಲ್ ಕಾರಣ ಎಂದು ಆರೋಪಿಸಿ ಹರೀಶ್ ಅವರ ತಂದೆ ಕನತೂರು ಪೊಲೀಸ್ ಠಾಣೆಗೆ ಅಧಿಕೃತ ದೂರು ನೀಡಿದ್ದಾರೆ. ಸ್ಯಾಮ್ಯುಯೆಲ್ ತನ್ನ ಮಗನಿಗೆ 3 ಕೋಟಿ ರೂಪಾಯಿ ನೀಡುವಂತೆ ಹಣದ ಬೇಡಿಕೆ ಇಟ್ಟಿದ್ದರು. ಪುದುಚೇರಿ ಮುಖ್ಯಮಂತ್ರಿ ಮತ್ತು ಶಾಸಕರ ಪರಿಚಯವಿದೆ ಎಂದು ಹೇಳಿ ಅವರನ್ನು ಬೆದರಿಸಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. “ನಿಮ್ಮ ಪೋಷಕರನ್ನು ಪುದುಚೇರಿಯಲ್ಲಿ ನೋಡಿಕೊಳ್ಳಲೇ? ಅವರನ್ನು ನೇಣು ಹಾಕುತ್ತೇನೆ” ಎಂದು ಸ್ಯಾಮ್ಯುಯೆಲ್ ಬೆದರಿಕೆ ಹಾಕಿದ್ದರು ಎಂದು ಹರೀಶ್ ತಂದೆ ಆರೋಪಿಸಿದ್ದಾರೆ. ಮರಣಪೂರ್ವ ವಿಡಿಯೋದಲ್ಲಿ ಮಾತನಾಡಿರುವ ಹರೀಶ್, ಐದು ವರ್ಷಗಳ ತಮ್ಮ ಪರಿಶ್ರಮ ಮುಕ್ತಾಯವಾಗಿದ್ದು, ಆದಾಯ ತೆರಿಗೆ ಹೆಸರಿನಲ್ಲಿ ಜೈಲಿಗೆ ಹಾಕಿಸುವುದಾಗಿ, ಹಣ ನೀಡುವಂತೆ ನನಗೆ ಬೆದರಿಸಲಾಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದರುರೆ. ಯಾರನ್ನೂ ದೂಷಿಸಬೇಡಿ ಆದರೆ ಈ ವಿಡಿಯೋವನ್ನು ಜನರಿಗೆ ತಲುಪಿಸಿ ಎಂದು ಅವರು ಮನವಿ ಮಾಡಿದ್ದರು.
ಆರೋಪ ತಳ್ಳಿಹಾಕಿದ ಟೆಕ್ ಸಿಇಒ ಜೇಸನ್ ಸ್ಯಾಮ್ಯುಯೆಲ್
ಹರೀಶ್ ಅವರ ದುರಂತ ಸಾವಿಗೆ ತೀವ್ರ ಸಂತಾಪ ಸೂಚಿಸಿರುವ ಜೆಜುರಿಯಾ ಇಂಕ್ ಸಿಇಒ ಜೇಸನ್ ಸ್ಯಾಮ್ಯುಯೆಲ್, ತಮ್ಮ ಮೇಲಿನ ಸೈಬರ್ ಬೆದರಿಕೆ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಹರೀಶ್ ಅವರು ಸೆಬಿ ಪರವಾನಗಿ ಇಲ್ಲದೆ ಹಣಕಾಸು ಸಲಹೆಗಳನ್ನು ನೀಡುತ್ತಿರುವುದನ್ನು ಹಾಗೂ ಮ್ಯೂಚುವಲ್ ಫಂಡ್ಸ್ ಅಸೋಸಿಯೇಷನ್ (AMFI) ನೋಂದಣಿಯನ್ನು ಇತ್ತೀಚೆಗಷ್ಟೇ ಪಡೆದಿರುವುದನ್ನು ಮಾತ್ರ ತಾವು ಪ್ರಶ್ನಿಸಿದ್ದೆ ಎಂದು ಅವರು ‘ಎಕ್ಸ್’ (ಟ್ವಿಟರ್) ಪೋಸ್ಟ್ನಲ್ಲಿ ಸ್ಪಷ್ಟಪಡಿಸಿದ್ದಾರೆ. ಸದ್ಯ ಕನತೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೃತ ಹರೀಶ್ ಅವರ ತಂದೆಯ ದೂರು ಮತ್ತು ಎಲೆಕ್ಟ್ರಾನಿಕ್ ಸಾಕ್ಷ್ಯಗಳ ಆಧಾರದ ಮೇಲೆ ತೀವ್ರ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ:ಫ್ರಾನ್ಸ್ ಗಲಭೆ: ಕೋಟ್ಯಂತರ ಮೌಲ್ಯದ ಐಷಾರಾಮಿ ವಸ್ತುಗಳ ಲೂಟಿ, ಬೀದಿಗಳಲ್ಲಿ ಕಡಿಮೆ ಬೆಲೆಗೆ ಮಾರಾಟ!



















