ನವದೆಹಲಿ : ಶಿಕ್ಷಣ ಕ್ಷೇತ್ರ ಮತ್ತು ಸರ್ಕಾರಿ ಉದ್ಯೋಗಗಳ ನೇಮಕಾತಿ ಪರೀಕ್ಷೆಗಳಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ತಕ್ಷಣವೇ ತಡೆಗಟ್ಟದಿದ್ದರೆ ದೇಶಾದ್ಯಂತ ವಿದ್ಯಾರ್ಥಿಗಳ ಚಳವಳಿ ಇನ್ನಷ್ಟು ತೀವ್ರಗೊಳ್ಳಲಿದೆ ಮತ್ತು ತಾವು ಕೂಡ ಮತ್ತೆ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಯೋಗಗುರು ಬಾಬಾ ರಾಮ್ದೇವ್ ಅವರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ನೇರ ಎಚ್ಚರಿಕೆ ನೀಡಿದ್ದಾರೆ.
ಹರಿದ್ವಾರದ ಪತಂಜಲಿ ಯೋಗಪೀಠದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಶಾಲಾ-ಕಾಲೇಜುಗಳಲ್ಲಿ ಶಿಕ್ಷಕರು, ಕುಡಿಯುವ ನೀರು ಹಾಗೂ ಶೌಚಾಲಯದಂತಹ ಮೂಲಭೂತ ಸೌಕರ್ಯಗಳ ಅಭಾವ ಎದ್ದುಕಾಣುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ಪ್ರಸ್ತುತ ಪರೀಕ್ಷೆಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಸಾಮೂಹಿಕ ನಕಲು ಯಥೇಚ್ಛವಾಗಿ ನಡೆಯುತ್ತಿದ್ದು, ಸರ್ಕಾರಿ ಉದ್ಯೋಗಗಳ ಸಂದರ್ಶನದಲ್ಲಿ ಶೇಕಡಾ 99 ರಷ್ಟು ಭ್ರಷ್ಟಾಚಾರ ತಾಂಡವವಾಡುತ್ತಿದೆ. ಕೋಟಿ ಕೋಟಿ ಲಂಚ ನೀಡಿದ ಮೇಲಷ್ಟೇ ಉದ್ಯೋಗಗಳು ಸಿಗುತ್ತಿದ್ದು, ಜಾತಿ ಮತ್ತು ಧರ್ಮದ ಆಧಾರದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯುತ್ತಿರುವುದು ಸಂವಿಧಾನಕ್ಕೆ ಎಸಗುತ್ತಿರುವ ಅಪಚಾರವಾಗಿದೆ ಎಂದು ಅವರು ತೀವ್ರವಾಗಿ ವಾಗ್ದಾಳಿ ನಡೆಸಿದರು.
ಹೋರಾಟದ ಎಚ್ಚರಿಕೆ
ದೇಶದಲ್ಲಿ ನಡೆಯುತ್ತಿರುವ ಈ ಭಾರಿ ಅಕ್ರಮಗಳನ್ನು ಸರ್ಕಾರ ತಕ್ಷಣವೇ ಸರಿಪಡಿಸಬೇಕು. ಇಲ್ಲವಾದಲ್ಲಿ 2011 ರಲ್ಲಿ ದೆಹಲಿಯ ರಾಮ್ಲೀಲಾ ಮೈದಾನದಲ್ಲಿ ನಡೆಸಿದ್ದ ಮಾದರಿಯಲ್ಲೇ ತಾವು ಮತ್ತೊಮ್ಮೆ ಭ್ರಷ್ಟಾಚಾರದ ವಿರುದ್ಧ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಯೋಗಗುರು ಎಚ್ಚರಿಸಿದರು. ಯುವಜನತೆ ಮತ್ತು ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಅರಾಜಕತೆ ಅಥವಾ ಹಿಂಸಾಚಾರಕ್ಕೆ ಇಳಿಯಬಾರದು. ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಚೌಕಟ್ಟಿನಲ್ಲೇ ನಿಂತು ತಮ್ಮ ಹಕ್ಕುಗಳಿಗಾಗಿ ಹೋರಾಡಬೇಕು ಎಂದು ಅವರು ಮನವಿ ಮಾಡಿದರು.
ದ್ವೇಷದ ರಾಜಕೀಯಕ್ಕೆ ಖಂಡನೆ
ಇದೇ ವೇಳೆ ದೇಶದಲ್ಲಿ ಜಾತಿ ಮತ್ತು ಧರ್ಮಗಳ ಹೆಸರಿನಲ್ಲಿ ಬೆಳೆಯುತ್ತಿರುವ ದ್ವೇಷದ ವಾತಾವರಣವನ್ನು ರಾಮ್ದೇವ್ ಖಂಡಿಸಿದರು. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ, ದಲಿತ, ಆದಿವಾಸಿ ಹಾಗೂ ಹಿಂದೂ, ಮುಸ್ಲಿಂ, ಸಿಖ್, ಕ್ರಿಶ್ಚಿಯನ್ ಸೇರಿದಂತೆ ವಿವಿಧ ಸಮುದಾಯಗಳು ಪರಸ್ಪರ ಶತ್ರುಗಳಂತೆ ನಿಂತಿರುವುದು ಶೋಚನೀಯ ಸಂಗತಿ. ಭಾರತೀಯರು ತಮ್ಮತಮ್ಮಲ್ಲೇ ಕಾದಾಡುವುದನ್ನು ನಿಲ್ಲಿಸಬೇಕು. ‘ಒಡೆದು ಆಳುವ’ ಸಿದ್ಧಾಂತವನ್ನು ಕೊನೆಗಾಣಿಸಿ, ದೇಶದಲ್ಲಿ ದ್ವೇಷದ ಗೋಡೆಗಳನ್ನು ಕೆಡವಿ ಒಗ್ಗಟ್ಟಿನಿಂದ ಬಾಳಲು ಈ ಸ್ವಾತಂತ್ರ್ಯ ದಿನಾಚರಣೆಯಂದು ಪ್ರತಿಯೊಬ್ಬರೂ ಪ್ರತಿಜ್ಞೆ ಮಾಡಬೇಕು ಎಂದು ಕರೆ ನೀಡಿದರು.
ಇದನ್ನೂ ಓದಿ : ಹಳೆಯ ವಾಹನಗಳಿಗೆ ಇ10 ಪೆಟ್ರೋಲೇ ಇರಲಿ : ಎಥನಾಲ್ ಮಿಶ್ರಣದ ಬಗ್ಗೆ ಕೇಂದ್ರದ ಮುಖ್ಯ ಆರ್ಥಿಕ ಸಲಹೆಗಾರರ ಸಲಹೆ!


















