ಬೆಂಗಳೂರು: ದೀಪಾವಳಿ ಮತ್ತು ದಸರಾ ಹಬ್ಬದ ಶುಭ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಅಂಚೆ ಇಲಾಖೆಯ (India Post) ಲಕ್ಷಾಂತರ ನೌಕರರಿಗೆ ಸಿಹಿ ಸುದ್ದಿ ನೀಡಿದೆ. ಕೇಂದ್ರ ಸಂಪರ್ಕ ಸಚಿವಾಲಯದ ಅಡಿಯಲ್ಲಿರುವ ಅಂಚೆ ಇಲಾಖೆಯು ತನ್ನ ಅರ್ಹ ನೌಕರರಿಗೆ 60 ದಿನಗಳ ವೇತನಕ್ಕೆ ಸಮನಾದ ‘ಉತ್ಪಾದಕತೆ ಆಧಾರಿತ ಬೋನಸ್’ ಘೋಷಿಸಿದೆ. ರೈಲ್ವೆ ನೌಕರರ ಬೆನ್ನಲ್ಲೇ ಈಗ ಅಂಚೆ ಇಲಾಖೆ ನೌಕರರಿಗೂ ಬೋನಸ್ ಘೋಷಿಸಲಾಗಿದೆ.
ಹಬ್ಬದ ವೆಚ್ಚಗಳನ್ನು ನಿಭಾಯಿಸುವ ಮೂಲಕ ಸಂಭ್ರಮದಿಂದ ಹಬ್ಬಗಳನ್ನು ಆಚರಿಸಲು ಮತ್ತು ನೌಕರರ ಕಠಿಣ ಶ್ರಮವನ್ನು ಗುರುತಿಸಲು ಸರ್ಕಾರವು ಈ ನಿರ್ಧಾರ ತೆಗೆದುಕೊಂಡಿದೆ. ದೀಪಾವಳಿ ಹಬ್ಬಕ್ಕೂ ಮುನ್ನವೇ ಈ ಬೋನಸ್ ಮೊತ್ತ ನೌಕರರ ಖಾತೆಗೆ ಜಮೆಯಾಗಲಿದೆ.
ಯಾರಿಗೆಲ್ಲ ಸಿಗಲಿದೆ ಈ ಬೋನಸ್?
ಅಂಚೆ ಇಲಾಖೆಯ ವಿವಿದ ಹಂತಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರು ಈ ಬೋನಸ್ಗೆ ಅರ್ಹರಾಗಿರುತ್ತಾರೆ:
• ನಿರಂತರ ಸೇವೆಯಲ್ಲಿರುವ ನೌಕರರು: ಮಲ್ಟಿ-ಟಾಸ್ಕಿಂಗ್ ಸ್ಟಾಫ್, ಗ್ರೂಪ್ ‘ಸಿ’ ನೌಕರರು ಮತ್ತು ಗೆಜೆಟೆಡ್ ಅಲ್ಲದ ಗ್ರೂಪ್ ‘ಬಿ’ ಸಿಬ್ಬಂದಿ.
• ಗ್ರಾಮೀಣ ಡಾಕ್ ಸೇವಕರು: ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸುತ್ತಿರುವ ಗ್ರಾಮೀಣ ಡಾಕ್ ಸೇವಕರಿಗೆ ಬೋನಸ್ ನೀಡಲಾಗುತ್ತದೆ.
• ಪೂರ್ಣಾವಧಿ ಕೆಲಸ ಮಾಡುವ ತಾತ್ಕಾಲಿಕ ಉದ್ಯೋಗಿಗಳಿಗೂ ಬೋನಸ್ ಸಿಗಲಿದೆ.
ಬೋನಸ್ ಎಷ್ಟು ಸಿಗಲಿದೆ?
ವರದಿಯ ಪ್ರಕಾರ, ಬೋನಸ್ ಲೆಕ್ಕಾಚಾರಕ್ಕೆ ಮಾಸಿಕ ವೇತನದ ಗರಿಷ್ಠ ಮಿತಿಯನ್ನು 7 ಸಾವಿರ ರೂಪಾಯಿ ಎಂದು ನಿಗದಿಪಡಿಸಲಾಗಿದೆ. 60 ದಿನಗಳ ಬೋನಸ್ ಸೂತ್ರದ ಪ್ರಕಾರ ಅಂದರೆ, 7000×60÷30.4 ಲೆಕ್ಕಾಚಾರ ಮಾಡಲಾಗುತ್ತದೆ. ಇದರ ಪ್ರಕಾರ, ಅರ್ಹ ನೌಕರರೊಬ್ಬರಿಗೆ ಗರಿಷ್ಠ 13,816 ರೂಪಾಯಿವರೆಗೆ ಬೋನಸ್ ದೊರೆಯಲಿದೆ. ಗ್ರಾಮೀಣ ಡಾಕ್ ಸೇವಕರಿಗೆ ಅವರ ಟಿಆರ್ ಸಿಎ ಹಾಗೂ ತುಟ್ಟಿಭತ್ಯೆಯನ್ನು ಆಧರಿಸಿ ಲೆಕ್ಕಾಚಾರ ಮಾಡಲಾಗುತ್ತದೆ.
ಇದನ್ನೂ ಓದಿ:ರೇಷನ್ ಕಾರ್ಡ್ ಹೊಂದಿರುವವರಿಗೆ ಗುಡ್ ನ್ಯೂಸ್: ಇ-ಕೆವೈಸಿ ಗಡುವು ಮತ್ತೆ ವಿಸ್ತರಣೆ



















