ನವದೆಹಲಿ: ಭಾರತೀಯ ಚುನಾವಣಾ ಆಯೋಗ ನಡೆಸಿದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಸರಿಸುಮಾರು 13 ಕೋಟಿಗೂ ಹೆಚ್ಚು ಹೆಸರುಗಳನ್ನು ಅಳಿಸಿಹಾಕಿರುವುದು ದೇಶಾದ್ಯಂತ ದೊಡ್ಡ ರಾಜಕೀಯ ಗದ್ದಲಕ್ಕೆ ಕಾರಣವಾಗಿದೆ. ಆದರೆ, ಈ ಪೈಕಿ ಎಷ್ಟು ಅರ್ಹ ಮತದಾರರ ಹೆಸರುಗಳನ್ನು ಅನಗತ್ಯವಾಗಿ ಕೈಬಿಡಲಾಗಿದೆ ಎಂಬ ಪ್ರಶ್ನೆಗೆ ಆರ್ಥಿಕ ತಜ್ಞ ಸುರ್ಜಿತ್ ಭಲ್ಲಾ ಅವರು ಸುದೀರ್ಘ ವಿಶ್ಲೇಷಣೆ ನಡೆಸಿ ಉತ್ತರ ನೀಡಿದ್ದಾರೆ. ಅವರ ಪ್ರಕಾರ, ತೆಗೆದುಹಾಕಲಾದ ಬಹುತೇಕ ಹೆಸರುಗಳು ಸೂಕ್ತ ಕಾರಣಗಳಿಂದಲೇ ಹೊರಬಿದ್ದಿವೆಯಾದರೂ, ಸುಮಾರು 70 ಲಕ್ಷ ಅರ್ಹ ಮತದಾರರ ಹೆಸರುಗಳು ಯಾವುದೇ ನಿರ್ದಿಷ್ಟ ಸ್ಪಷ್ಟನೆ ಇಲ್ಲದೆ ಪಟ್ಟಿಯಿಂದ ಹೊರಗುಳಿದಿವೆ.
13 ಕೋಟಿ ಹೆಸರುಗಳ ಹಿಂದಿನ ಅಸಲಿ ಸತ್ಯ
ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ, ಪರಿಷ್ಕರಣೆಯ ಮೂರು ಹಂತಗಳಲ್ಲಿ ಒಟ್ಟು 13.37 ಕೋಟಿ ಹೆಸರುಗಳನ್ನು ಕರಡು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಆದರೆ, ಇವುಗಳಲ್ಲಿ ಮೃತರ ಹೆಸರುಗಳು (2.8 ಕೋಟಿ), ಬೇರೆಡೆಗೆ ವಲಸೆ ಹೋದವರು (6.3 ಕೋಟಿ), ನಕಲಿ ಹೆಸರುಗಳು (1 ಕೋಟಿ) ಮತ್ತು ಪತ್ತೆಯಾಗದ ಮತದಾರರು (3 ಕೋಟಿ) ಸೇರಿದ್ದಾರೆ. ಹೀಗಾಗಿ, ರಾಜಕೀಯ ಪಕ್ಷಗಳು ಆರೋಪಿಸುತ್ತಿರುವಂತೆ 13 ಕೋಟಿಯೂ ಅರ್ಹ ಮತದಾರರಲ್ಲ; ಅದರಲ್ಲಿ ಹೆಚ್ಚಿನ ಭಾಗ ಸೂಕ್ತ ಕಾರಣಗಳಿಗಾಗಿ ನಡೆದ ‘ಸ್ವಚ್ಛತಾ ಪ್ರಕ್ರಿಯೆ’ ಎಂದು ಭಲ್ಲಾ ತಮ್ಮ ಲೇಖನದಲ್ಲಿ ಪ್ರತಿಪಾದಿಸಿದ್ದಾರೆ.
70 ಲಕ್ಷ ಹೆಸರುಗಳ ಲೆಕ್ಕಾಚಾರ ಹೇಗೆ?
ಭಾರತದ ಒಟ್ಟು ವಯಸ್ಕ ಜನಸಂಖ್ಯೆ, ಜನನ-ಮರಣಗಳ ದತ್ತಾಂಶ ಹಾಗೂ ಹಿಂದಿನ ನೋಂದಣಿ ಪ್ರಮಾಣಗಳನ್ನು ಆಧಾರವಾಗಿಟ್ಟುಕೊಂಡು ಸುರ್ಜಿತ್ ಭಲ್ಲಾ ಈ ಲೆಕ್ಕಾಚಾರ ಮಾಡಿದ್ದಾರೆ. ದೇಶದಲ್ಲಿ ಸುಮಾರು ಶೇ. 8.5 ರಷ್ಟು ವಯಸ್ಕರು ಸ್ವಯಂಪ್ರೇರಿತವಾಗಿ ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಳ್ಳುವುದಿಲ್ಲ ಎಂಬುದನ್ನು ಪರಿಗಣಿಸಿದರೆ, ಅಂತಿಮ ಪಟ್ಟಿಯಲ್ಲಿ ಸುಮಾರು 92.2 ಕೋಟಿ ಹೆಸರುಗಳು ಇರಬೇಕಿತ್ತು. ಆದರೆ, ಅಂತಿಮ ಪಟ್ಟಿ ಪ್ರಕಟಗೊಂಡ ಪ್ರಮುಖ 9 ರಾಜ್ಯಗಳ ದತ್ತಾಂಶವನ್ನು ಪರಿಶೀಲಿಸಿದಾಗ, ಸುಮಾರು 73 ಲಕ್ಷ ಹೆಸರುಗಳ ಕೊರತೆ ಕಂಡುಬಂದಿದೆ. ಇದರಲ್ಲಿ ಭಾರತೀಯ ನಾಗರಿಕರಲ್ಲದ ಸುಮಾರು 5 ಲಕ್ಷ ಜನರನ್ನು ಕಳೆದು ನೋಡಿದರೆ, ಅಂದಾಜು 70 ಲಕ್ಷ ಅರ್ಹ ಮತದಾರರು ಯಾವುದೇ ಸೂಕ್ತ ವಿವರಣೆ ಇಲ್ಲದೆ ಪಟ್ಟಿಯಿಂದ ಹೊರಗುಳಿದಿದ್ದಾರೆ ಎಂಬ ತೀರ್ಮಾನಕ್ಕೆ ಅವರು ಬಂದಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಗರಿಷ್ಠ ಪ್ರಭಾವ, ಬಿಹಾರದಲ್ಲಿ ಉಲ್ಟಾ ಚಿತ್ರಣ
ದೇಶದ ಒಟ್ಟಾರೆ ಸರಾಸರಿಗೆ ಹೋಲಿಸಿದರೆ ಪಶ್ಚಿಮ ಬಂಗಾಳ ರಾಜ್ಯದಲ್ಲಿ ಈ ಡಿಲೀಷನ್ ಪ್ರಮಾಣ ಹೆಚ್ಚಿದೆ. ಬಂಗಾಳ ಒಂದರಲ್ಲೇ ಸುಮಾರು 50 ಲಕ್ಷ ಅರ್ಹ ಮತದಾರರ ಹೆಸರುಗಳು ಸ್ಪಷ್ಟ ಕಾರಣವಿಲ್ಲದೆ ಪಟ್ಟಿಯಿಂದ ಕೈಬಿಡಲ್ಪಟ್ಟಿವೆ. ಇದು ರಾಜ್ಯದ ಒಟ್ಟು ವಯಸ್ಕ ಜನಸಂಖ್ಯೆಯ ಶೇ.6 ರಿಂದ 7 ರಷ್ಟಾಗುತ್ತದೆ. ಮತ್ತೊಂದೆಡೆ ಬಿಹಾರದಲ್ಲಿ ಚಿತ್ರಣ ತೀರಾ ಭಿನ್ನವಾಗಿದ್ದು, ಅಲ್ಲಿ ವಲಸೆ ಕಾರ್ಮಿಕರ ಹೆಸರುಗಳು ಇನ್ನೂ ಪಟ್ಟಿಯಲ್ಲೇ ಇರುವುದರಿಂದ ನಿರೀಕ್ಷಿತ ಪ್ರಮಾಣಕ್ಕಿಂತ 60 ಲಕ್ಷಕ್ಕೂ ಹೆಚ್ಚು ಹೆಸರುಗಳು ಪಟ್ಟಿಯಲ್ಲಿ ಕಾಯಂ ಆಗಿ ಉಳಿದುಕೊಂಡಿವೆ.
ಮತದಾರರ ಪಟ್ಟಿ ಸರಿಪಡಿಸುವ ಸವಾಲು
ಭಾರತದಂತಹ ಬೃಹತ್ ಮತ್ತು ವಲಸೆ ಕಾರ್ಮಿಕರು ಹೆಚ್ಚಿರುವ ದೇಶದಲ್ಲಿ ಮನೆ-ಮನೆಗೆ ತೆರಳಿ ಶೇ.100ರಷ್ಟು ನಿಖರವಾದ ಮತದಾರರ ಪಟ್ಟಿ ತಯಾರಿಸುವುದು ಸುಲಭದ ಮಾತಲ್ಲ. 2004 ಮತ್ತು 2014 ರ ಚುನಾವಣಾ ಪಟ್ಟಿಗಳಲ್ಲೂ ಜನಸಂಖ್ಯೆಗಿಂತ ಹೆಚ್ಚು ಹೆಸರುಗಳು ಕಂಡುಬಂದಿದ್ದವು. ಆದಾಗ್ಯೂ, ಪ್ರಸ್ತುತ ಜಾರಿಗೆ ತಂದಿರುವ ಕಠಿಣ ದಾಖಲೆಗಳ ನಿಯಮಗಳು ಮತ್ತು ಫಾರ್ಮ್ 6ರ ಹೊಸ ಷರತ್ತುಗಳು ಬಡ ಹಾಗೂ ವಲಸೆ ಮತದಾರರಿಗೆ ತೊಡಕಾಗಿವೆ ಎಂಬುದನ್ನು ಭಲ್ಲಾ ಒಪ್ಪಿಕೊಂಡಿದ್ದಾರೆ. ಈ ಪ್ರಕ್ರಿಯೆಯಲ್ಲಿ ಶೇ.87ರಷ್ಟು ಡಿಲೀಷನ್ ಸಮಂಜಸವಾಗಿದ್ದರೂ, ಕೈಬಿಡಲಾದ ಆ 70 ಲಕ್ಷ ಮತದಾರರ ಹಕ್ಕಿನ ಕುರಿತು ಆಡಳಿತ ಯಂತ್ರ ಸೂಕ್ತ ಗಮನಹರಿಸಬೇಕಿದೆ.



















