ನವದೆಹಲಿ: ಭಾರತದಲ್ಲಿ ಈಗ ಆಡಳಿತಾರೂಢ ಸರ್ಕಾರದ ಬದಲಾವಣೆಯ ಅಗತ್ಯವಿದೆ, ಆದರೆ ಆ ಬದಲಾವಣೆ ಸಂವಿಧಾನಾತ್ಮಕ ಹಾಗೂ ಪ್ರಜಾಪ್ರಭುತ್ವದ ಚುನಾವಣಾ ಮಾರ್ಗದ ಮೂಲಕವೇ ನಡೆಯಲಿದೆ ಎಂದು ಖ್ಯಾತ ನಟ ಮತ್ತು ಸಾಮಾಜಿಕ ಹೋರಾಟಗಾರ ಪ್ರಕಾಶ್ ರೈ ಸ್ಪಷ್ಟಪಡಿಸಿದ್ದಾರೆ. ದೆಹಲಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ತಿರಂಗಾ ಮೆರವಣಿಗೆಗೂ ಮುನ್ನ ಸಿಜೆಪಿ ನಾಯಕರು, ಹೋರಾಟಗಾರರು ಹಾಗೂ ಪ್ರಮುಖ ನಾಯಕರ ಬಂಧನವನ್ನು ಖಂಡಿಸಿ ಮಾತನಾಡುವ ವೇಳೆ ಅವರು ಈ ಹೇಳಿಕೆ ನೀಡಿದ್ದಾರೆ.
ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಶಕ್ತಿ:
ಜನಸಾಮಾನ್ಯರ ಪ್ರತಿಭಟನೆಗಳಿಂದಾಗಿ ಸರ್ಕಾರಗಳೇ ಪತನಗೊಂಡ ನೆರೆಹೊರೆಯ ಬಾಂಗ್ಲಾದೇಶ ಮತ್ತು ನೇಪಾಳದ ಸನ್ನಿವೇಶಗಳನ್ನು ಭಾರತಕ್ಕೆ ಹೋಲಿಸುವುದನ್ನು ತಳ್ಳಿಹಾಕಿದ ಪ್ರಕಾಶ್ ರೈ, “ನಾವು ನೇಪಾಳ ಅಥವಾ ಬಾಂಗ್ಲಾದೇಶ ಅಲ್ಲ. ನಮಗೆ ಅಂಬೇಡ್ಕರ್, ಗಾಂಧಿ, ಭಗತ್ ಸಿಂಗ್ ನೀಡಿದ ಬಲವಾದ ಸಂವಿಧಾನವಿದೆ. ನಮಗೆ ಮತದಾನದ ಹಕ್ಕಿದೆ. ಮುಂದಿನ ಉತ್ತರ ಪ್ರದೇಶ ಚುನಾವಣೆಗಳಿಂದ ಹಿಡಿದು 2029ರ ಲೋಕಸಭಾ ಚುನಾವಣೆಯವರೆಗೆ ನಾವು ಪ್ರಜಾಸತ್ತಾತ್ಮಕವಾಗಿಯೇ ಈ ಅಧಿಕಾರ ಬದಲಾವಣೆಯನ್ನು ತರಲಿದ್ದೇವೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾಕಾರರ ಮೇಲಿನ ದೌರ್ಜನ್ಯಕ್ಕೆ ಆಕ್ರೋಶ:
ದೆಹಲಿಯ ಕನ್ನಾಟ್ ಪ್ಲೇಸ್ನಲ್ಲಿ ಹಮ್ಮಿಕೊಳ್ಳಲಾಗಿದ್ದ ‘ತಿರಂಗಾ ಯಾತ್ರೆ’ಗೂ ಮುನ್ನ ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ, ನೇಹಾ ಬೋರಾ ಸೇರಿದಂತೆ ಹಲವು ನಾಯಕರನ್ನು ವಶಕ್ಕೆ ಪಡೆದಿರುವುದನ್ನು ಪ್ರಶ್ನಿಸಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ‘ಹರ್ ಘರ್ ತಿರಂಗಾ’ ಅಭಿಯಾನವನ್ನು ನೆನಪಿಸಿದರು. “ದೇಶದ ಯುವಕರು ಕೈಯಲ್ಲಿ ರಾಷ್ಟ್ರಧ್ವಜ ಹಿಡಿದು ನಡೆಯಲು ಬಯಸಿದರೆ ಅವರನ್ನು ಏಕೆ ತಡೆಯಲಾಗುತ್ತಿದೆ? ಸರ್ಕಾರದೊಂದಿಗೆ ಮಾತುಕತೆಗೆ ಜಾಗವಿಲ್ಲದೆ ಕೇವಲ ಬಲಪ್ರಯೋಗದ ಮೂಲಕ ಪ್ರತಿಭಟನಾಕಾರರ ಧ್ವನಿ ಅಡಗಿಸಲು ನೋಡಿದರೆ, ಸರ್ಕಾರವನ್ನು ಕೆಳಗಿಳಿಸುವ ಬೇಡಿಕೆ ಇನ್ನಷ್ಟು ತೀವ್ರಗೊಳ್ಳುತ್ತದೆ” ಎಂದು ಅವರು ಎಚ್ಚರಿಸಿದರು.
ರಸ್ತೆಗಿಳಿದು ಶಾಂತಿಯುತ ಹೋರಾಟ ಮುಂದುವರಿಕೆ:
ನಾವು ಯಾವುದೇ ಶಸ್ತ್ರಾಸ್ತ್ರಗಳನ್ನು ಹಿಡಿದಿಲ್ಲ, ನಮಗೆ ಸಂವಿಧಾನ ಮತ್ತು ಪ್ರತಿಭಟಿಸುವ ಹಕ್ಕೇ ಅತಿದೊಡ್ಡ ಶಸ್ತ್ರ ಎಂದು ಪ್ರತಿಪಾದಿಸಿದ ಪ್ರಕಾಶ್ ರೈ, ರೈತ ಸಂಘಟನೆಗಳು ಹಾಗೂ ನಾಗರಿಕ ಸಮಾಜದ ಬೆಂಬಲದೊಂದಿಗೆ ಮುಂಬರುವ ದಿನಗಳಲ್ಲಿ ಈ ಹೋರಾಟ ಮತ್ತಷ್ಟು ತೀವ್ರಗೊಳ್ಳಲಿದೆ ಎಂದರು. ಮುಂಬರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ವಿರೋಧ ಪಕ್ಷಗಳು ಈ ಪೊಲೀಸ್ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಬೇಕೆಂದೂ ಅವರು ಮನವಿ ಮಾಡಿದರು.
ಇದನ್ನೂ ಓದಿ:ಮುಂಜಾಗೃತಾ ಕ್ರಮವಾಗಿCJP ಸಂಸ್ಥಾಪಕ ಅಭಿಜಿತ್ ದೀಪ್ಕೆ ಬಂಧನ, ಐಸಾ ಮುಖ್ಯಸ್ಥೆ ನೇಹಾ ಬೋರಾ ಬಿಡುಗಡೆ!



















