ರಾಮನಗರ : ಜಿಲ್ಲೆಯ ಕನಕಪುರ ಕೆಎಸ್‌ಆರ್‌ಟಿಸಿ ಡಿಪೋದಲ್ಲಿ ಚಾಲಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದ್ದು, ಡಿಪೋ ಮ್ಯಾನೇಜರ್ ಹಾಗೂ ಅವರ ಸಹಚರರು ಚಾಲಕನನ್ನು ಡಿಪೋ ಆವರಣದಲ್ಲೇ ಅಟ್ಟಾಡಿಸಿಕೊಂಡು ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಚಾಲಕ ಶಿವಕುಮಾರ್ ಟ್ರಿಪ್ ಮುಗಿಸಿ ಡಿಪೋಗೆ ಬಂದ ವೇಳೆ ಡಿಪೋ ಮ್ಯಾನೇಜರ್ ಸಚಿನ್ ಹಾಗೂ ಅವರ ಸಹಚರರು ಜಗಳ ಆರಂಭಿಸಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ನಾಲ್ಕೈದು ಜನ ಸೇರಿ ಮನಸ್ಸೋ ಇಚ್ಛೆ ಹಲ್ಲೆ ನಡೆಸಿದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
ಹಲ್ಲೆಯ ವೇಳೆ ಶಿವಕುಮಾರ್ ಅವರನ್ನು ಡಿಪೋ ಆವರಣದಲ್ಲೇ ಅಟ್ಟಾಡಿಸಿಕೊಂಡು ಹೋಗಿ ಥಳಿಸಲಾಗಿದೆ. ಕೆಳಗೆ ಬಿದ್ದ ನಂತರವೂ ಕಾಲಿನಿಂದ ಒದ್ದು ಹಲ್ಲೆ ಮಾಡಲಾಗಿದೆ.
ಡಿಪೋದಲ್ಲಿ ನಡೆಯುತ್ತಿದೆ ಎನ್ನಲಾದ ಅವ್ಯವಹಾರ ಹಾಗೂ ಲಂಚಾವತಾರದ ಬಗ್ಗೆ ಪ್ರಶ್ನೆ ಮಾಡಿದ ಕಾರಣಕ್ಕೆ ಹಲ್ಲೆ ನಡೆಸಲಾಗಿದೆ ಎಂದು ಶಿವಕುಮಾರ್ ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಘಟನೆ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಂಡಿದೆ.
ಡಿಪೋ ಮ್ಯಾನೇಜರ್ ಸಚಿನ್, ಮುನಿಬಸವರಾಜು, ಕೆ.ಟಿ. ಕುಮಾರ್, ಶಿವಮೂರ್ತಿ ಹಾಗೂ ದೇವರಾಜ್ ವಿರುದ್ಧ ಹಲ್ಲೆ ಆರೋಪ ಕೇಳಿಬಂದಿದೆ. ಜಗಳ ಬಿಡಿಸಲು ಮುಂದಾದ ಟ್ರಾಫಿಕ್ ಕಂಟ್ರೋಲರ್ ಮೇಲೆಯೂ ಹಲ್ಲೆ ನಡೆಸಲಾಗಿದೆ ಎನ್ನಲಾಗಿದೆ. ಘಟನೆ ಸಂಬಂಧ ಕನಕಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಘಟನೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ.
ಇದನ್ನೂ ಓದಿ : ಬೆಂಗಳೂರಲ್ಲಿ ಡಿವೈಡರ್‌ಗೆ ಬೈಕ್ ಡಿಕ್ಕಿಯಾಗಿ ಇಬ್ಬರು ನರ್ಸಿಂಗ್ ವಿದ್ಯಾರ್ಥಿಗಳು ದುರ್ಮರಣ



















