ಬೆಂಗಳೂರು: ಬೆಂಗಳೂರಿನ ಕೆಆರ್ ಸರ್ಕಲ್ ಸಿಗ್ನಲ್‌ನಲ್ಲಿ ಇಂದು ಬೆಳಿಗ್ಗೆ ಬಿಎಂಟಿಸಿಯ ಎರಡು ಬಸ್‌ಗಳ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಚಾಲಕ ಸೇರಿದಂತೆ ಐವರು ಗಾಯಗೊಂಡಿದ್ದಾರೆ. ಬಸ್‌ನಲ್ಲಿ ಸಿಲುಕಿದ್ದ ಯುವತಿಯನ್ನು ಅಗ್ನಿಶಾಮಕ ದಳ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಸುರಕ್ಷಿತವಾಗಿ ರಕ್ಷಿಸಿದ್ದಾರೆ.

ಕೆಆರ್ ಸರ್ಕಲ್ ಸಿಗ್ನಲ್‌ನಲ್ಲಿ ನಿಂತಿದ್ದ KA-01-AR-4163 ಸಂಖ್ಯೆಯ ವಾಯು ವಜ್ರ ಬಸ್‌ಗೆ, ಹಿಂಬದಿಯಿಂದ ಬಂದ KA-51-AJ-6163 ಸಂಖ್ಯೆಯ ಬಿಎಂಟಿಸಿಯ ಎಲೆಕ್ಟ್ರಿಕ್ ಬಸ್ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಎಲೆಕ್ಟ್ರಿಕ್ ಬಸ್‌ನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ವಜ್ರ ಬಸ್‌ನ ಹಿಂಭಾಗಕ್ಕೂ ಹಾನಿಯಾಗಿದೆ.
ಅಪಘಾತದ ವೇಳೆ ಯಾದಗಿರಿ ಮೂಲದ ಯುವತಿ ಬಸ್‌ನ ಸೀಟಿನ ಕೆಳಗೆ ಸಿಲುಕಿಕೊಂಡಿದ್ದು, ಮಾಹಿತಿ ತಿಳಿದ ತಕ್ಷಣ ಅಗ್ನಿಶಾಮಕ ದಳ, ಸಂಚಾರಿ ಪೊಲೀಸರು, ಎರಡು ಕ್ರೇನ್‌ಗಳು ಹಾಗೂ ಎರಡು ಆಂಬುಲೆನ್ಸ್‌ಗಳು ಸ್ಥಳಕ್ಕೆ ಧಾವಿಸಿದವು. ಕ್ರೇನ್ ಸಹಾಯದಿಂದ ಬಸ್‌ಗಳನ್ನು ಬೇರ್ಪಡಿಸಿ ಯುವತಿಯನ್ನು ಸುರಕ್ಷಿತವಾಗಿ ಹೊರತೆಗೆದು ಮಾರ್ಥಾಸ್ ಆಸ್ಪತ್ರೆಗೆ ದಾಖಲಿಸಲಾಯಿತು.
ಅಪಘಾತದಲ್ಲಿ ಬಸ್ ಚಾಲಕನ ತಲೆಗೆ ಗಂಭೀರ ಗಾಯಗಳಾಗಿದ್ದು, ಚಾಲಕ ಸೇರಿದಂತೆ ಐವರು ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆ ಕುರಿತು ಮಾತನಾಡಿದ ಕಂಡಕ್ಟರ್ ಆಶೀಪ್ ಪಟೇಲ್, ನಾನು ಟಿಕೆಟ್ ನೀಡುತ್ತಿದ್ದೆ. ಬಸ್ ಅತ್ತಿಬೆಲೆಗೆ ತೆರಳುತ್ತಿತ್ತು. ಅಪಘಾತ ಹೇಗೆ ಸಂಭವಿಸಿತು ಗೊತ್ತಾಗಲಿಲ್ಲ. ಚಾಲಕನಿಗೆ ತೀವ್ರ ಗಾಯವಾಗಿದೆ. ಯುವತಿಗೆ ಹೆಚ್ಚು ಗಾಯಗಳಾಗಿವೆ. ನನಗೂ ಗಾಯವಾಗಿದೆ ಎಂದು ತಿಳಿಸಿದ್ದಾರೆ.
ಅಪಘಾತದ ಪರಿಣಾಮ ಕೆಆರ್ ಸರ್ಕಲ್ ಸುತ್ತಮುತ್ತ ಕೆಲಕಾಲ ವಾಹನ ಸಂಚಾರ ದಟ್ಟಣೆ ಉಂಟಾಗಿದ್ದು, ಪೊಲೀಸರು ಸಂಚಾರವನ್ನು ಸುಗಮಗೊಳಿಸಿದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅಪಘಾತದ ನಿಖರ ಕಾರಣದ ಕುರಿತು ತನಿಖೆ ಮುಂದುವರಿಸಿದ್ದಾರೆ.



















