ಮೀರತ್ : ಪತಿಯೊಂದಿಗೆ ಏಕಾಂತವಾಗಿ ಕಳೆಯಬೇಕಾಗಿದ್ದ ತಮ್ಮ ಮಧುಚಂದ್ರದ (ಹನಿಮೂನ್) ಪ್ರವಾಸಕ್ಕೆ ಇಡೀ ಕುಟುಂಬವನ್ನೇ ಕರೆದುಕೊಂಡು ಬಂದ ಪತಿಯ ನಡೆಗೆ ಬೇಸತ್ತ ನವವಿವಾಹಿತೆ ಈಗ ವಿಚ್ಛೇದನಕ್ಕಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದಾಳೆ. ಉತ್ತರಪ್ರದೇಶದಲ್ಲಿ ಇಂಥದ್ದೊಂದು ಘಟನೆ ನಡೆದಿದ್ದು, ಸದ್ಯ ಈ ದಂಪತಿಯ ಸಂಸಾರ ಕಲಹ ಕೌಟುಂಬಿಕ ಸಲಹಾ ಕೇಂದ್ರದಲ್ಲಿ ಸಂಧಾನದ ಹಂತದಲ್ಲಿದೆ.
ಮ್ಯಾಟ್ರಿಮೋನಿಯಲ್ ವೆಬ್‌ಸೈಟ್ ಮೂಲಕ ಪರಿಚಯವಾಗಿದ್ದ ಮೀರತ್ ಜಿಲ್ಲೆಯ ರಾಮರಾಜ್ ಎಂಬಲ್ಲಿನ ಪದವೀಧರ ಯುವತಿ ಹಾಗೂ ಸಿಂಗಾಪುರದಲ್ಲಿ ಹಾಸ್ಪಿಟಾಲಿಟಿ ಮ್ಯಾನೇಜ್‌ಮೆಂಟ್ ಮುಗಿಸಿ ದೆಹಲಿಯ ಪಟೇಲ್ ನಗರದಲ್ಲಿ ನೆಲೆಸಿರುವ ಯುವಕನ ಮದುವೆ ಇತ್ತೀಚೆಗೆ ನೆರವೇರಿತ್ತು. ಮದುವೆಯ ನಂತರ ಯುವತಿಯು ತನ್ನ ಪತಿಯೊಂದಿಗೆ ಪ್ರವಾಸಕ್ಕೆ ಹೋಗಿ ಪರಸ್ಪರ ಅರ್ಥಮಾಡಿಕೊಳ್ಳುವ ಮತ್ತು ಹೊಸ ಜೀವನಕ್ಕೆ ಭದ್ರ ಬುನಾದಿ ಹಾಕುವ ಸುಂದರ ಕನಸು ಕಂಡಿದ್ದಳು.
ಆದರೆ, ಪತಿಯು ಆಕೆಯ ಅನುಮತಿಯಿಲ್ಲದೆ ತನ್ನ ತಂದೆ-ತಾಯಿ, ಅಕ್ಕ ಮತ್ತು ಸಹೋದರನನ್ನು ಹನಿಮೂನ್‌ಗೆ ಜೊತೆಯಲ್ಲೇ ಕರೆದುಕೊಂಡು ಹೋಗಿದ್ದಾನೆ. ಇಬ್ಬರೇ ಕಳೆಯಬೇಕಾಗಿದ್ದ ಖಾಸಗಿ ಸಮಯ ಇಡೀ ಕುಟುಂಬದ ಪ್ರವಾಸವಾಗಿ ಬದಲಾದ್ದರಿಂದ ಪತ್ನಿ ತೀವ್ರ ಆಘಾತಕ್ಕೆ ಒಳಗಾಗಿದ್ದಾಳೆ.
ಇದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ ಪತಿ
ಕುಟುಂಬಸ್ಥರ ಸಮ್ಮುಖದಲ್ಲೇ ಇರಬೇಕಾಗಿ ಬಂದಿದ್ದರಿಂದ ತನಗೆ ಪತಿಯೊಂದಿಗೆ ಮುಕ್ತವಾಗಿ ಮಾತನಾಡಲು ಅಥವಾ ಸಮಯ ಕಳೆಯಲು ಸಾಧ್ಯವಾಗಲಿಲ್ಲ ಎಂದು ಯುವತಿ ಆಪ್ತ ಸಮಾಲೋಚಕರ ಮುಂದೆ ಅಳಲು ತೋಡಿಕೊಂಡಿದ್ದಾಳೆ. ಇದೇ ವಿಷಯವಾಗಿ ಇಬ್ಬರ ನಡುವೆ ಆರಂಭವಾದ ಸಣ್ಣ ಜಗಳ ತಾರಕಕ್ಕೇರಿ ವಿಚ್ಛೇದನದ ಹಂತಕ್ಕೆ ಬಂದು ತಲುಪಿದೆ. ಆದರೆ ಪತಿಯ ವಾದವೇ ಬೇರೆ. ತನ್ನ ಕುಟುಂಬದವರೆಲ್ಲರೂ ಸಂತೋಷವಾಗಿರಲಿ ಎಂಬ ಒಳ್ಳೆಯ ಉದ್ದೇಶದಿಂದಲೇ ಎಲ್ಲರನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗಿದ್ದಾಗಿ ಆತ ಸಮರ್ಥಿಸಿಕೊಂಡಿದ್ದಾನೆ. ಇದರಲ್ಲಿ ಯಾವುದೇ ತಪ್ಪು ಅಥವಾ ಅನುಚಿತ ವರ್ತನೆ ಇಲ್ಲ ಎಂದು ಆತ ವಾದಿಸುತ್ತಿರುವುದು ಇಬ್ಬರ ನಡುವಿನ ಬಿರುಕನ್ನು ಮತ್ತಷ್ಟು ಹೆಚ್ಚಿಸಿದೆ.
ಸಂಧಾನದ ಮೂರು ಸುತ್ತುಗಳು ವಿಫಲ
ದಂಪತಿಯ ನಡುವಿನ ಈ ತೀವ್ರ ಭಿನ್ನಾಭಿಪ್ರಾಯವನ್ನು ಬಗೆಹರಿಸಲು ಕೌಟುಂಬಿಕ ಸಲಹಾ ಕೇಂದ್ರದಲ್ಲಿ ಈಗಾಗಲೇ ಮೂರು ಸುತ್ತಿನ ಕೌನ್ಸೆಲಿಂಗ್ ನಡೆಸಲಾಗಿದೆ. ಆದಾಗ್ಯೂ, ಇಬ್ಬರೂ ತಮ್ಮ ನಿಲುವುಗಳಿಂದ ಹಿಂದೆ ಸರಿಯಲು ಸಿದ್ಧರಿಲ್ಲದ ಕಾರಣ ಯಾವುದೇ ಸಕಾರಾತ್ಮಕ ಫಲಿತಾಂಶ ಬಂದಿಲ್ಲ. ಸಲಹಾ ಕೇಂದ್ರದ ಅಧಿಕಾರಿಗಳು ದಂಪತಿಗೆ ತಮ್ಮ ಭವಿಷ್ಯದ ಬಗ್ಗೆ ಯೋಚಿಸಲು ಮತ್ತಷ್ಟು ಕಾಲಾವಕಾಶ ನೀಡಿದ್ದಾರೆ. ಒಂದು ವೇಳೆ ಈ ಬಿಕ್ಕಟ್ಟು ಹೀಗೆಯೇ ಮುಂದುವರಿದರೆ, ಮಧುಚಂದ್ರದ ವಿವಾದ ಅಧಿಕೃತವಾಗಿ ವಿಚ್ಛೇದನ ಪ್ರಕ್ರಿಯೆಗೆ ದಾರಿಯಾಗುವ ಎಲ್ಲಾ ಲಕ್ಷಣಗಳು ಇವೆ.
ಇದನ್ನೂ ಓದಿ : ಇಸ್ರೇಲ್‌ನ ಪ್ರಮುಖ ನಗರದಲ್ಲಿ ತಲೆಎತ್ತಲಿದೆ ಛತ್ರಪತಿ ಶಿವಾಜಿ ಮಹಾರಾಜರ ಭವ್ಯ ಮೂರ್ತಿ: ಇದು ಸ್ನೇಹದ ಸಂಕೇತ!



















