ಕೋಲ್ಕತ್ತಾ : ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಅಧಿಕಾರ ಕಳೆದುಕೊಂಡ ಬೆನ್ನಲ್ಲೇ ಆ ಪಕ್ಷದ ಪ್ರಭಾವಿ ನಾಯಕ, ಫಾಲ್ಟಾ ಕ್ಷೇತ್ರದ ಮಾಜಿ ಅಭ್ಯರ್ಥಿ ಜಹಾಂಗೀರ್ ಖಾನ್‌ನನ್ನು ಪಶ್ಚಿಮ ಬಂಗಾಳ ವಿಶೇಷ ಕಾರ್ಯಪಡೆ (STF) ಪೊಲೀಸರು ಇಂಡೋ-ನೇಪಾಳ ಗಡಿಯಲ್ಲಿ ಇಂದು ಬಂಧಿಸಿದ್ದಾರೆ. ಮೇ 4ರಂದು ಚುನಾವಣಾ ಫಲಿತಾಂಶ ಪ್ರಕಟವಾದ ನಂತರ ಜಹಾಂಗೀರ್ ಖಾನ್ ವಿರುದ್ಧ ಐದು ಹೊಸ ಪ್ರಕರಣಗಳು ದಾಖಲಾಗಿದ್ದವು. ಈ ಹಿನ್ನೆಲೆಯಲ್ಲಿ ಅವರಿಗೆ ನೀಡಲಾಗಿದ್ದ ಮಧ್ಯಂತರ ರಕ್ಷಣೆಯನ್ನು ವಿಸ್ತರಿಸಲು ಕಲ್ಕತ್ತಾ ಹೈಕೋರ್ಟ್ ನಿರಾಕರಿಸಿದ ಬೆನ್ನಲ್ಲೇ ಈ ಬಂಧನ ನಡೆದಿದೆ.
ಸಿಂಗಂ- ಪುಷ್ಪ ಜಟಾಪಟಿ
ದಕ್ಷಿಣ 24 ಪರಗಣ ಜಿಲ್ಲೆಯ ಡೈಮಂಡ್ ಹಾರ್ಬರ್ ಸಂಸದ ಹಾಗೂ ಮಮತಾ ಬ್ಯಾನರ್ಜಿ ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿಯ ಅತ್ಯಂತ ಆಪ್ತನಾಗಿದ್ದ ಜಹಾಂಗೀರ್ ಖಾನ್, ಫಾಲ್ಟಾ ಪ್ರದೇಶದಲ್ಲಿ ತಮ್ಮದೇ ಆದ ಗುಂಪು ಕಟ್ಟಿಕೊಂಡು ಎಲ್ಲರನ್ನೂ ದಬಾಯಿಸುತ್ತಿದ್ದರು ಎಂದು ಸ್ಥಳೀಯರು ಆರೋಪಿಸಿದ್ದಾರೆ. ತೆಲುಗಿನ ಪ್ರಸಿದ್ಧ ಚಿತ್ರ ‘ಪುಷ್ಪ’ ಪಾತ್ರದಿಂದ ಪ್ರಭಾವಿತರಾಗಿದ್ದ ಖಾನ್, ತಮ್ಮನ್ನು ತಾವು ‘ಪುಷ್ಪ’ ಎಂದು ಕರೆದುಕೊಳ್ಳುತ್ತಿದ್ದರು. ಚುನಾವಣಾ ಸಂದರ್ಭದಲ್ಲಿ ಫಾಲ್ಟಾ ಕ್ಷೇತ್ರಕ್ಕೆ ವಿಶೇಷ ವೀಕ್ಷಕರಾಗಿ ಬಂದ ಉತ್ತರ ಪ್ರದೇಶ ಕೆಡರ್‌ನ, ಎನ್‌ಕೌಂಟರ್ ಸ್ಪೆಷಲಿಸ್ಟ್ ಖ್ಯಾತಿಯ ಐಪಿಎಸ್ ಅಧಿಕಾರಿ ಅಜಯ್ ಪಾಲ್ ಶರ್ಮಾ (ಸ್ಥಳೀಯವಾಗಿ ‘ಸಿಂಗಂ’ ಎಂದು ಕರೆಸಿಕೊಳ್ಳುವ ಅಧಿಕಾರಿ) ಖಾನ್‌ನ ಇಲಾಖೆಗೆ ಭೇಟಿ ನೀಡಿ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದರು. ಇದು ಇಬ್ಬರ ನಡುವಿನ ಪರೋಕ್ಷ ಜಟಾಪಟಿಗೆ ಕಾರಣವಾಗಿತ್ತು. ಆಗ ಖಾನ್ ಪ್ರತಿಕ್ರಿಯಿಸಿ, ”ಅವನು ಸಿಂಗಂ ಆಗಿದ್ದರೆ ನಾನು ಪುಷ್ಪ” ಎಂದು ಗುಡುಗಿದ್ದರು.
ಚುನಾವಣಾ ಅಕ್ರಮ- ಫಾಲ್ಟಾ ಟ್ವಿಸ್ಟ್
ಏಪ್ರಿಲ್ 29 ರಂದು ನಡೆದ ಎರಡನೇ ಹಂತದ ಮತದಾನದ ವೇಳೆ, ಇವಿಎಂ ಯಂತ್ರಗಳಲ್ಲಿ ಬಿಜೆಪಿ ಹಾಗೂ ಸಿಪಿಎಂ ಪಕ್ಷದ ಗುರುತು ಇರುವ ಗುಂಡಿಗೆ ಗಮ್ ಟೇಪ್ ಅಂಟಿಸಲಾಗಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿದ್ದವು. ಮತದಾನದಲ್ಲಿ ಅಕ್ರಮ ನಡೆದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಮತದಾನವನ್ನು ಸ್ಥಗಿತಗೊಳಿಸಿ, ಮೇ 21 ಕ್ಕೆ ಮರು ಮತದಾನವನ್ನು ನಿಗದಿಪಡಿಸಿತ್ತು. ಆದರೆ ಮೇ 21ರ ಸರಣಿ ಮತದಾನಕ್ಕೂ ಮುನ್ನವೇ ರಾಜ್ಯದ ಒಟ್ಟಾರೆ ಫಲಿತಾಂಶ ಪ್ರಕಟವಾಗಿ, 15 ವರ್ಷಗಳ ಟಿಎಂಸಿ ಆಡಳಿತ ಅಂತ್ಯಗೊಂಡು ಬಿಜೆಪಿ ಸರ್ಕಾರ ರಚಿಸಿತ್ತು.
ಈ ಮಧ್ಯೆ, ಮೇ 19ರಂದು ಜಹಾಂಗೀರ್ ಖಾನ್ ಅನಿರೀಕ್ಷಿತ ಟ್ವಿಸ್ಟ್ ನೀಡಿದ್ದ. ಹೊಸ ಮುಖ್ಯಮಂತ್ರಿ ಸುವೇಂದು ಅಧಿಕಾರಿಯವರು ರಾಜ್ಯದ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಘೋಷಿಸಿದ್ದಾರೆ, ಹಾಗಾಗಿ ಫಾಲ್ಟಾದ ಶಾಂತಿ ಮತ್ತು ಅಭಿವೃದ್ಧಿಗಾಗಿ ನಾನು ಚುನಾವಣಾ ಕಣದಿಂದ ಹಿಂದೆ ಸರಿಯುತ್ತಿದ್ದೇನೆ ಎಂದು ಘೋಷಿಸಿ ತನ್ನ ಕಚೇರಿಗೆ ಬೀಗ ಹಾಕಿ ನಾಪತ್ತೆಯಾಗಿದ್ದರು. ಇತ್ತ ಟಿಎಂಸಿ ಪಕ್ಷವು ಈ ನಿರ್ಧಾರಕ್ಕೂ ತಮಗೂ ಸಂಬಂಧವಿಲ್ಲ ಎನ್ನುತ್ತಾ, ಇದು ಬಿಜೆಪಿಯ ಬೆದರಿಕೆಯ ತಂತ್ರ ಎಂದು ಆರೋಪಿಸಿತ್ತು.
ಅಂತಿಮವಾಗಿ ಸೋಲು, ಈಗ ಬಂಧನ
ಮೇ 24 ರಂದು ನಡೆದ ಮತ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ದೇಬಾಂಶು ಪಾಂಡಾ ಅವರು ಸಿಪಿಎಂನ ಶಂಭು ನಾಥ್ ಕುರ್ಮಿ ವಿರುದ್ಧ ಒಂದು ಲಕ್ಷಕ್ಕೂ ಅಧಿಕ ಮತಗಳ ಭಾರಿ ಅಂತರದಿಂದ ಜಯಗಳಿಸಿದರು. ಆದರೆ ಕಣದಿಂದ ಹಿಂದೆ ಸರಿದಿದ್ದ ಜಹಾಂಗೀರ್ ಖಾನ್ ಕೇವಲ 8,000ಕ್ಕಿಂತ ಕಡಿಮೆ ಮತಗಳನ್ನು ಪಡೆದು ನಾಲ್ಕನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದರು. ಚುನಾವಣಾ ವಂಚನೆ ಮತ್ತು ಬೆದರಿಕೆ ಪ್ರಕರಣಗಳಲ್ಲಿ ಪೊಲೀಸರ ಕಣ್ಣು ತಪ್ಪಿಸಿ ಓಡಾಡುತ್ತಿದ್ದ ಈ ‘ಪುಷ್ಪ’ ಅಂತಿಮವಾಗಿ ದೇಶ ಬಿಟ್ಟು ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾಗ ಎಸ್‌ಟಿಎಫ್ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ.
ಇದನ್ನೂ ಓದಿ : ದಿಲ್ಲಿಯಲ್ಲಿ ತೃಣಮೂಲ ಬಂಡಾಯ ಸಂಸದರ ರಹಸ್ಯ ಸಭೆ : ಮಮತಾಗೆ ಬಿಗ್ ಶಾಕ್!



















