ನವದೆಹಲಿ : ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಸೋಲಿನ ಬೆನ್ನಲ್ಲೇ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದಲ್ಲಿ ಮೂಡಿರುವ ಬಿರುಕು ದಿನಕಳೆದಂತೆ ದೊಡ್ಡದಾಗುತ್ತಾ ಸಾಗುತ್ತಿದೆ. ಇತ್ತ ಪಕ್ಷದ ಅಧಿನಾಯಕಿ ಮಮತಾ ಬ್ಯಾನರ್ಜಿ ಅವರು ಬಿಜೆಪಿಯನ್ನು ಎದುರಿಸಲು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಿಪಕ್ಷಗಳ ‘ಇಂಡಿಯಾ’ (INDIA) ಒಕ್ಕೂಟದ ನಾಯಕರೊಂದಿಗೆ ಮಹತ್ವದ ಸಭೆ ನಡೆಸುತ್ತಿದ್ದರೆ, ಅತ್ತ ಅವರದ್ದೇ ಪಕ್ಷದ ಕನಿಷ್ಠ 10 ಬಂಡಾಯ ಸಂಸದರು ಬಿಜೆಪಿ ನಾಯಕರೊಂದಿಗೆ ಗೌಪ್ಯ ಸಭೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಬಿಜೆಪಿ ನಾಯಕರ ಮನೆಯಲ್ಲಿ ಸಭೆ
ದಿಲ್ಲಿಯಲ್ಲಿರುವ ಬಿಜೆಪಿ ಹಿರಿಯ ನಾಯಕ ಭೂಪೇಂದ್ರ ಯಾದವ್ ಅವರ ನಿವಾಸದಲ್ಲಿ ಈ ರಹಸ್ಯ ಸಭೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ವಿಶೇಷವೆಂದರೆ ಮಮತಾ ಬ್ಯಾನರ್ಜಿ ಅವರು ವಿಪಕ್ಷಗಳ ಸಭೆ ನಡೆಸುತ್ತಿರುವ ಸ್ಥಳದಿಂದ ಕೇವಲ ಒಂದು ಕಿಲೋಮೀಟರ್ ದೂರದಲ್ಲೇ ಈ ಬಂಡಾಯ ನಾಯಕರ ಸಭೆ ನಡೆದಿರುವುದು ಅಚ್ಚರಿ ಮೂಡಿಸಿದೆ. ಈ ಸಭೆಯಲ್ಲಿ ತೃಣಮೂಲ ಪಕ್ಷದ ಪ್ರಮುಖ ಸಂಸದರಾದ ಶತಬ್ದಿ ರಾಯ್, ಕಾಕೋಲಿ ಘೋಷ್ ದಸ್ತಿದಾರ್, ಅಬು ತಾಹೇರ್ ಖಾನ್, ಖಲೀಲುರ್ ರಹಮಾನ್, ಅಸಿತ್ ಕುಮಾರ್ ಮಾಲ್, ಅರೂಪ್ ಚಕ್ರವರ್ತಿ, ಕಾಲಿಪದ ಸೋರೆನ್, ಜಗದೀಶ್ ಚಂದ್ರ ಬರ್ಮಾ ಬಸುನಿಯಾ, ಪ್ರಸೂನ್ ಬ್ಯಾನರ್ಜಿ ಮತ್ತು ಶರ್ಮಿಳಾ ಸರ್ಕಾರ್ ಭಾಗವಹಿಸಿದ್ದಾರೆ. ಇವರೊಂದಿಗೆ ಈಗಾಗಲೇ ಪಕ್ಷ ತೊರೆದಿರುವ ಸುಖೇಂದು ಶೇಖರ್ ರಾಯ್ ಮತ್ತು ಶಾಸಕ ಅಕ್ರುಜ್ಜಮಾನ್ ಕೂಡ ಉಪಸ್ಥಿತರಿದ್ದರು ಎನ್ನಲಾಗಿದೆ.
ಮುಂಬೈನಿಂದ ದಿಲ್ಲಿಗೆ ಅನಿರೀಕ್ಷಿತ ಪಯಣ
ಪಕ್ಷದೊಳಗಿನ ಆಂತರಿಕ ಅಸಮಾಧಾನದ ತೀವ್ರತೆ ಎಷ್ಟು ಗಾಢವಾಗಿದೆ ಎಂದರೆ, ಹಿರಿಯ ಸಂಸದರೊಬ್ಬರು ನಿನ್ನೆ ಸಂಜೆ ಮುಂಬೈನಿಂದ ಕೋಲ್ಕತ್ತಾಗೆ ಪ್ರಯಾಣಿಸುವಾಗ ದಿಲ್ಲಿಯಲ್ಲಿ ಅನಿರೀಕ್ಷಿತವಾಗಿ ತಂಗಿದ್ದಾರೆ. ಕೋಲ್ಕತ್ತಾ ಸುತ್ತಮುತ್ತಲಿನ ಜಿಲ್ಲೆಯನ್ನು ಪ್ರತಿನಿಧಿಸುವ ಈ ಸಂಸದರು, ದಿಲ್ಲಿಯಲ್ಲಿದ್ದ ಕೆಲವೇ ಗಂಟೆಗಳ ಅವಧಿಯಲ್ಲಿ ಯಾರಿಗೂ ಅನುಮಾನ ಬಾರದಂತೆ ಕೆಲವು ಪ್ರಮುಖ ವ್ಯಕ್ತಿಗಳನ್ನು ರಹಸ್ಯವಾಗಿ ಭೇಟಿಯಾಗಿದ್ದಾರೆ ಎಂದು ಮೂಲಗಳು ಬಹಿರಂಗಪಡಿಸಿವೆ. ಪ್ರಸ್ತುತ ಟಿಎಂಸಿಯ ಒಟ್ಟು 41 ಸಂಸದರ ಪೈಕಿ ಕನಿಷ್ಠ 20 ಸಂಸದರು ಬಿಜೆಪಿ ಜೊತೆ ಸಂಪರ್ಕದಲ್ಲಿದ್ದು, ಪಕ್ಷಾಂತರಕ್ಕೆ ಸಜ್ಜಾಗುತ್ತಿದ್ದಾರೆ ಎಂಬ ವರದಿಗಳ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ನಾಯಕತ್ವಕ್ಕೆ ಬಹಿರಂಗ ಸವಾಲು
ಚುನಾವಣಾ ಸೋಲಿನ ನಂತರ ಪಕ್ಷದೊಳಗಿನ ಭಿನ್ನಮತ ಕೇವಲ ದಿಲ್ಲಿಯ ಸಭೆಗಳಿಗೆ ಸೀಮಿತವಾಗಿಲ್ಲ. ಶಾಸಕ ರಿತಬ್ರತಾ ಬ್ಯಾನರ್ಜಿ ನೇತೃತ್ವದ ಬಂಡಾಯ ಬಣಕ್ಕೆ ಪಕ್ಷದ 80 ಶಾಸಕರ ಪೈಕಿ ಸುಮಾರು 60 ಶಾಸಕರು ಬೆಂಬಲ ನೀಡುತ್ತಿದ್ದು, ಅವರು ಪಕ್ಷದ ಸರಣಿ ಕಾರ್ಯಕ್ರಮಗಳಿಂದ ದೂರ ಉಳಿಯುವ ಮೂಲಕ ತಮ್ಮ ಪ್ರತಿರೋಧ ದಾಖಲಿಸುತ್ತಿದ್ದಾರೆ. ಇದರೊಂದಿಗೆ, ದಶಕಗಳಿಂದ ಮಮತಾ ಬ್ಯಾನರ್ಜಿ ಅವರನ್ನು ಅತ್ಯಂತ ಗೌರವದಿಂದ ‘ದೀದಿ’ (ಅಕ್ಕ) ಎಂದು ಕರೆಯುತ್ತಿದ್ದ ನಾಯಕರು, ಈಗ ಅವರ ಹೆಸರನ್ನೇ ಹಿಡಿದು ಸಂಬೋಧಿಸಲು ಶುರುಮಾಡಿದ್ದಾರೆ.
ಕ್ರೀಡಾ ಹಿನ್ನೆಲೆಯುಳ್ಳ ಸಂಸದರೊಬ್ಬರು ಈ ರೀತಿಯಾಗಿ ಮಮತಾ ಹೆಸರನ್ನು ನೇರವಾಗಿ ಬಳಸುವ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ. ಮತ್ತೊಂದೆಡೆ, ಉತ್ತರ 24 ಪರಗಣ ಜಿಲ್ಲೆಯ ಪ್ರಭಾವಿ ಸಂಸದರೊಬ್ಬರು ಕಳೆದ 24 ಗಂಟೆಗಳಿಂದ ತಮ್ಮ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದರೆ, ಚಿತ್ರರಂಗದಿಂದ ರಾಜಕೀಯಕ್ಕೆ ಬಂದಿರುವ ಮತ್ತೊಬ್ಬ ಸಂಸದರು ಮತ್ತು ಉತ್ತರ ಬಂಗಾಳದ ಇಬ್ಬರು ನಾಯಕರು ಸದ್ದಿಲ್ಲದೆ ಪಕ್ಷದಿಂದ ದೂರ ಸರಿಯುತ್ತಿದ್ದಾರೆ. ಈ ಎಲ್ಲಾ ವಿದ್ಯಮಾನಗಳು ಸದ್ಯ ಮಮತಾ ಬ್ಯಾನರ್ಜಿ ಅವರಿಗೆ ತಲೆನೋವಾಗಿ ಪರಿಣಮಿಸಿದ್ದು, ಬಂಗಾಳ ರಾಜಕೀಯದಲ್ಲಿ ಮತ್ತೊಂದು ದೊಡ್ಡ ರಾಜಕೀಯ ಧ್ರುವೀಕರಣದ ಮುನ್ಸೂಚನೆ ನೀಡುತ್ತಿವೆ.
ಇದನ್ನೂ ಓದಿ : ಪೋಕ್ಸೋ ಕೇಸ್ ಸಂತ್ರಸ್ತೆಯ ತಾಯಿಯಿಂದ ಲಂಚ ಸ್ವೀಕಾರ – ‘ಲೋಕಾ’ ಬಲೆಗೆ ಬಿದ್ದ ASI, ಕಾನ್ಸ್‌ಟೇಬಲ್


















