ಹಾಸನ : ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಪತ್ನಿ ಚೆನ್ನಮ್ಮ ಅವರ ಅಂತ್ಯಕ್ರಿಯೆಯು ಜಿಲ್ಲೆಯ ಮಾವಿನಕೆರೆ ರಂಗನಾಥಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿದ್ದು, ದೊಡ್ಡಗೌಡರ ಪ್ರೀತಿಯ ‘ಚಿನ್ನ’ಮ್ಮ ಮಣ್ಣಲ್ಲಿ ಮಣ್ಣಾಗಿದ್ದಾರೆ.
ಚೆನ್ನಮ್ಮನವರ ಅಂತಿಮ ದರ್ಶನಕ್ಕಾಗಿ ಅಂತ್ಯಕ್ರಿಯೆ ಸ್ಥಳಕ್ಕೆ ಸಾರ್ವಜನಿಕರು ದಂಡು ದಂಡಾಗಿ ಆಗಮಿಸಿದ್ದರು. ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಜನಸಾಗರದ ಮಧ್ಯೆ, ಪುತ್ರ ಹೆಚ್.ಡಿ. ಕುಮಾರಸ್ವಾಮಿ ಅವರು ತಾಯಿಯ ಮುಖವನ್ನು ನೋಡಿ ಭಾವುಕರಾಗಿ ಮುತ್ತಿಟ್ಟು ಅಂತಿಮ ವಿದಾಯ ಹೇಳಿದರು.
ಗಣ್ಯರು ಚೆನ್ನಮ್ಮನ ಪಾರ್ಥಿವ ಶರೀರಕ್ಕೆ ಅಂತಿಮ ಪುಷ್ಪನಮನ ಸಲ್ಲಿಸಿದ ಬಳಿಕ 3 ಸುತ್ತು ಕುಶಾಲತೋಪು ಸಿಡಿಸಿ ರಾಷ್ಟ್ರಗೀತೆ ನಮನದೊಂದಿಗೆ ಸರ್ಕಾರಿ ಗೌರವ ವಂದನೆ ಸಲ್ಲಿಸಲಾಯಿತು. 2 ನಿಮಿಷ ಮೌನಾಚರಣೆ ಸಲ್ಲಿಸಿದ ಬಳಿಕ ಮುಖ್ಯಮಂತ್ರಿ ಡಿಕೆಶಿವಕುಮಾರ್ ಅವರು ದೇವೇಗೌಡರ ಕುಟುಂಬಕ್ಕೆ ರಾಷ್ಟ್ರಧ್ವಜ ಹಸ್ತಾಂತರಿಸಿದರು. ಇದೇ ವೇಳೆ ಡಿಕೆ ಶಿವಕುಮಾರ್ ಅವರು ದೇವೇಗೌಡರ ಕಾಲಿಗೆ ನಮಸ್ಕರಿಸಿ ವಂದಿಸಿದರು.
ಬಳಿಕ ದೇಹ ಶುದ್ಧಿ ಕಾರ್ಯ ನಡೆಯಿತು. ದೇವೇಗೌಡರು ಮತ್ತು ಕುಟುಂಬಸ್ಥರಿಂದ ಪಾರ್ಥಿವ ಶರೀರಕ್ಕೆ ಅಂತಿಮ ಪೂಜಾ ವಿಧಿವಿಧಾನ ನೇರವೇರಿಸಲಾಯಿತು. ಇದೇ ವೇಳೆ ಅರ್ಚಕರ ತಂಡದಿಂದ ಸ್ತೋತ್ರ ಪಠಣ ಕಾರ್ಯವೂ ನಡೆದಿದ್ದು,ಮೂರು ಸುತ್ತು ಪಲ್ಲಕ್ಕಿ ಮೆರವಣಿಗೆ ನಡೆಸಿ ಒಕ್ಕಲಿಗ ಸಂಪ್ರದಾಯದಂತೆ ಅಂತಿಮ ಸಂಸ್ಕಾರ ನೆರವೇರಿಸಲಾಯಿತು.
ಹಿರಿಯ ಪುತ್ರ ಹೆಚ್.ಡಿ ರಮೇಶ್ ಅವರಿಂದ ಅಂತ್ಯಕ್ರಿಯೆ ಕಾರ್ಯವಿಧಾನ ನೆರವೇರಿತು. ಗುಂಡಿಯಲ್ಲಿ ಗಂಗಾಜಲ ಸಿಂಪಡಿಸಿ ಶುದ್ಧೀಕರಣ ನೆರವೇರಿಸಿದ ಬಳಿಕ ಪಲ್ಲಕ್ಕಿಯಲ್ಲಿ ಹೊತ್ತುತಂದ ಪಾರ್ಥಿವ ಶರೀರವನ್ನ ಇಳಿಸಿ, ಅಂತಿಕ್ರಿಯೆ ಮಾಡಲಾಯಿತು.
ಇದಕ್ಕೂ ಮುನ್ನ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ವಿ. ಸೋಮಣ್ಣ, ಶಿವರಾಜ್ ಸಿಂಗ್ ಚೌಹಾಣ್, ಸಿಎಂ ಡಿಕೆ ಶಿವಕುಮಾರ್, ಸಭಾಪತಿ ಬಸವರಾಜ ಹೊರಟ್ಟಿ, ಇಂಧನ ಸಚಿವ ಕೆ.ಜೆ ಜಾರ್ಜ್, ಆಹಾರ ಸಚಿವ ಕೆ.ಹೆಚ್ ಮುನಿಯಪ್ಪ, ಶಾಸಕರಾದ ಬಿ.ವೈ ವಿಜಯೇಂದ್ರ, ಬಿ.ವೈ ರಾಘವೇಂದ್ರ, ಡಾ. ನಿರ್ಮಲಾನಂದ ಸ್ವಾಮೀಜಿ, ನಂಜಾವಧೂತ ಶ್ರೀ, ರಂಭಾಪುರಿ ಶ್ರೀ ಸೇರಿದಂತೆ ಹಿರಿಯ ಹಾಗೂ ಕಿರಿಯ ಶಾಸಕರು, ಸಂಸದರು, ಪರಿಷತ್‌ನ ಸದಸ್ಯರು ಇತರ ಗಣ್ಯರು ಚೆನ್ನಮ್ಮ ಪಾರ್ಥಿವ ಶರೀರಕ್ಕೆಅಂತಿಮ ಪುಷ್ಪನಮನ ಸಲ್ಲಿಸಿದರು.
ಇದನ್ನೂ ಓದಿ : “ನಾನು ನಿನ್ ಜೊತೆ ಇರ್ಬೇಕೋ, ಬೇಡ್ವೋ?” – ಕಣ್ಣೀರು ತರಿಸುತ್ತೆ ದೇವೇಗೌಡ್ರು ಚೆನ್ನಮ್ಮಗೆ ಹೇಳಿದ ಕೊನೆ ಮಾತು!


















