ಚೆನ್ನೈ : ತಮಿಳು ಚಿತ್ರರಂಗದ ಜನಪ್ರಿಯ ನಟ ಜೋಸೆಫ್ ವಿಜಯ್ ಅವರು ಏಕಾಏಕಿ ರಾಜಕೀಯಕ್ಕೆ ಎಂಟ್ರಿ ಕೊಟ್ಟು, ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಜಯ ಗಳಿಸಿ ಮುಖ್ಯಮಂತ್ರಿ ಗಾದಿಗೇರಿದ ಬೆನ್ನಲ್ಲೇ ಇದೀಗ ಮತ್ತೊಬ್ಬ ನಟ, ನಿರ್ದೇಶಕ ಧನುಷ್ ತಮ್ಮ ಅಭಿಮಾನಿಗಳಿಗೆ ನೀಡಿದ ಒಂದು ಕರೆ ಇದೀಗ ತಮಿಳುನಾಡು ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿದೆ. ಅಭಿಮಾನಿಗಳ ಒಗ್ಗಟ್ಟು ಮತ್ತು ಶಕ್ತಿಯು ಕೇವಲ ಸಿನಿಮಾ ಕಾರ್ಯಕ್ರಮಗಳಿಗೆ ಸೀಮಿತವಾಗದೆ ಸಮಾಜಸೇವೆಗೂ ಬಳಕೆಯಾಗಬೇಕು ಎಂಬ ಧನುಷ್ ಅವರ ಹೇಳಿಕೆಯು, ಅವರು ಶೀಘ್ರದಲ್ಲೇ ರಾಜಕೀಯ ರಂಗಪ್ರವೇಶ ಮಾಡಲಿದ್ದಾರೆಯೇ ಎಂಬ ವದಂತಿಗಳಿಗೆ ಕಾರಣವಾಗಿದೆ.
ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಲು ಕರೆ
ಭಾನುವಾರ ತಮ್ಮ ಅಭಿಮಾನಿಗಳು ಆಯೋಜಿಸಿದ್ದ ಬೃಹತ್ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದ ಧನುಷ್, “ಇಷ್ಟೊಂದು ಜನರು ಒಂದೇ ಕಡೆ ಸೇರಿದ್ದೀರಿ, ಈ ರೀತಿಯ ಒಗ್ಗಟ್ಟಿನಲ್ಲಿ ದೊಡ್ಡ ಶಕ್ತಿಯಿದೆ. ಈ ಶಕ್ತಿಗೆ ನಾವೊಂದು ಸ್ಪಷ್ಟ ಉದ್ದೇಶ ನೀಡಬೇಕಿದೆ. ಕೇವಲ ಆಡಿಯೋ ರಿಲೀಸ್ ಅಥವಾ ಅಭಿಮಾನಿಗಳ ಭೇಟಿಗೆ ಸೀಮಿತವಾಗದೆ, ನಿಮ್ಮ ಸುತ್ತಮುತ್ತಲಿನ ಜನರ ಹಾಗೂ ಕುಟುಂಬಗಳ ಅಗತ್ಯಗಳನ್ನು ಅರ್ಥಮಾಡಿಕೊಂಡು ಅವರಿಗೆ ನೆರವಾಗುವ ಸಮಾಜಸೇವಾ ಕಾರ್ಯಗಳಲ್ಲಿ ನಿರತರಾಗಿ. ಇದರಿಂದ ನನಗೆ ನಿಮ್ಮ ಬಗ್ಗೆ ಇನ್ನಷ್ಟು ಹೆಮ್ಮೆಯಾಗುತ್ತದೆ” ಎಂದು ಕರೆ ನೀಡಿದರು.
ಸಾಮಾಜಿಕ ಜಾಲತಾಣಗಳಲ್ಲಿ ಜೋರಾದ ಚರ್ಚೆ
ಧನುಷ್ ಅವರ ಈ ಭಾಷಣದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ, ದಳಪತಿ ವಿಜಯ್ ಅವರ ಹಾದಿಯಲ್ಲೇ ಧನುಷ್ ಕೂಡ ಹೊಸ ರಾಜಕೀಯ ಪಕ್ಷ ಕಟ್ಟಲಿದ್ದಾರೆ ಎಂಬ ಚರ್ಚೆಗಳು ಆರಂಭವಾಗಿವೆ. “ತಮಿಳುನಾಡಿಗೆ ಶಿಕ್ಷಣ, ಶಿಸ್ತು ಮತ್ತು ಧೈರ್ಯವಿರುವ ಧ್ವನಿಯ ಅಗತ್ಯವಿದೆ, ಧನುಷ್ ಅವರನ್ನು ರಾಜಕೀಯಕ್ಕೆ ಸ್ವಾಗತಿಸುತ್ತೇವೆ” ಎಂದು ಅಭಿಮಾನಿಗಳು ಎಕ್ಸ್ (ಟ್ವಿಟರ್) ಖಾತೆಯಲ್ಲಿ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.
ರಾಷ್ಟ್ರ ಪ್ರಶಸ್ತಿ ವಿವಾದಕ್ಕೆ ನಟನ ಸ್ಪಷ್ಟನೆ
ಇದೇ ಕಾರ್ಯಕ್ರಮದಲ್ಲಿ ತಮ್ಮ ಅಭಿನಯದ ‘ರಾಯನ್’ ಚಿತ್ರಕ್ಕೆ ಲಭಿಸಿದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯ ಕುರಿತಾದ ಟೀಕೆಗಳಿಗೂ ಧನುಷ್ ಪ್ರತಿಕ್ರಿಯಿಸಿದ್ದಾರೆ. 2024ರಲ್ಲಿ ‘ರಾಯನ್’ ಗಿಂತಲೂ ಉತ್ತಮ ತಮಿಳು ಸಿನಿಮಾಗಳಿದ್ದವು ಎಂಬುದನ್ನು ಒಪ್ಪಿಕೊಂಡ ನಟ, ಅದೇ ಸಮಯದಲ್ಲಿ ಒಬ್ಬ ತಮಿಳು ನಟ ಒಂದೇ ವರ್ಷದಲ್ಲಿ ಎರಡು ರಾಷ್ಟ್ರೀಯ ಪ್ರಶಸ್ತಿಗಳನ್ನು ತಾಯ್ನಾಡಿಗೆ ತಂದಿರುವುದನ್ನು ಎಲ್ಲರೂ ಸಂಭ್ರಮಿಸಬೇಕು ಎಂದು ಮನವಿ ಮಾಡಿದರು. ‘ಕ್ಯಾಪ್ಟನ್ ಮಿಲ್ಲರ್’ ಅಭಿನಯಕ್ಕಾಗಿ ವಿಶೇಷ ಪ್ರಶಸ್ತಿ ಹಾಗೂ ‘ರಾಯನ್’ ಚಿತ್ರಕ್ಕೆ ಅತ್ಯುತ್ತಮ ತಮಿಳು ಸಿನಿಮಾ ಪ್ರಶಸ್ತಿ ಧನುಷ್ ಪಾಲಾಗಿತ್ತು.
ಇದನ್ನೂ ಓದಿ : ವಿದ್ಯಾರ್ಥಿಗಳ ಮೇಲೆ AK-47 ಫೈರಿಂಗ್ : ಪೇದೆ ಅಮಾನತು.. ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ಆಕ್ರೋಶ!



















