ಬೆಂಗಳೂರು : ಬೆಂಗಳೂರಿನ ನೈಸ್ ರಸ್ತೆಯ ಸಮೀಪ ಅಪಘಾತಕ್ಕೀಡಾಗಿ ಬಿದ್ದಿದ್ದ ಅಪರಿಚಿತ ವ್ಯಕ್ತಿಯ ಮೃತದೇಹದ ಪ್ರಕರಣ ಇದೀಗ ಪೊಲೀಸರಿಗೆ ದೊಡ್ಡ ಕಗ್ಗಂಟಾಗಿ ಪರಿಣಮಿಸಿದೆ. ಮೃತನ ಗುರುತು ಪತ್ತೆ ಮಾಡಲು ಪೊಲೀಸರು ಹಲವು ದಿಕ್ಕುಗಳಲ್ಲಿ ತನಿಖೆ ನಡೆಸುತ್ತಿದ್ದರೂ ಇದುವರೆಗೆ ಯಾವುದೇ ಸ್ಪಷ್ಟ ಸುಳಿವು ಸಿಕ್ಕಿಲ್ಲ.
ಒಂದೂವರೆ ತಿಂಗಳ ಹಿಂದೆ ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಮೃತದೇಹ ಪತ್ತೆಯಾಗಿತ್ತು. ಸ್ಥಳೀಯರು ರಸ್ತೆಯ ಪಕ್ಕದಲ್ಲಿ ಭೀಕರ ಸ್ಥಿತಿಯಲ್ಲಿ ಬಿದ್ದಿದ್ದ ದೇಹವನ್ನು ಗಮನಿಸಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಮಾಹಿತಿ ಪಡೆದ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿ ಮೃತದೇಹವನ್ನು ವಶಕ್ಕೆ ಪಡೆದು ಸ್ಥಳಾಂತರ ಮಾಡಿದ್ದರು. ಬಳಿಕ ವೈದ್ಯರಿಂದ ಮೃತದೇಹದ ಪರಿಶೀಲನೆ ನಡೆಸಲಾಗಿದ್ದು, ಮೃತ ವ್ಯಕ್ತಿಯ ವಯಸ್ಸು ಸುಮಾರು 35 ರಿಂದ 40 ವರ್ಷಗಳ ನಡುವೆ ಇರಬಹುದು ಎಂದು ಅಂದಾಜಿಸಲಾಗಿದೆ.
ಮೃತದೇಹದ ಸ್ಥಿತಿ ಅತ್ಯಂತ ಭೀಕರವಾಗಿತ್ತು. ಸೊಂಟದ ಮೇಲ್ಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕೆಳಭಾಗದ ದೇಹ ಮಾತ್ರ ಬಹುತೇಕ ಹಾಗೆಯೇ ಉಳಿದಿತ್ತು. ಇದರಿಂದಾಗಿ ಮೃತನ ಗುರುತು ಪತ್ತೆ ಮಾಡುವುದು ಪೊಲೀಸರಿಗೆ ಮತ್ತಷ್ಟು ಸವಾಲಾಗಿ ಪರಿಣಮಿಸಿದೆ.
ಪ್ರಕರಣದ ಸುಳಿವು ಪತ್ತೆ ಮಾಡಲು ಕಳೆದ ಒಂದೂವರೆ ತಿಂಗಳಿನಿಂದ ಪೊಲೀಸರು ನಿರಂತರ ತನಿಖೆ ನಡೆಸುತ್ತಿದ್ದಾರೆ. ಅಪಘಾತದ ಸನ್ನಿವೇಶ ಹಾಗೂ ಮೃತನ ಗುರುತು ಕುರಿತು ಮಾಹಿತಿ ಸಂಗ್ರಹಿಸಲು ನೂರಾರು ಸಿಸಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಲಾಗಿದೆ.
ಇದರ ಜೊತೆಗೆ ನಗರದ ವಿವಿಧ ಪೊಲೀಸ್ ಠಾಣೆಗಳೊಂದಿಗೆ ಸಂಪರ್ಕ ಸಾಧಿಸಿರುವ ಅಧಿಕಾರಿಗಳು, ಇತ್ತೀಚಿನ ದಿನಗಳಲ್ಲಿ ದಾಖಲಾಗಿರುವ ನಾಪತ್ತೆ ಪ್ರಕರಣಗಳ ಮಾಹಿತಿಯನ್ನೂ ಪರಿಶೀಲಿಸುತ್ತಿದ್ದಾರೆ.
ಕೆಲವು ಅನುಮಾನಾಸ್ಪದ ವಾಹನಗಳನ್ನು ಪತ್ತೆಹಚ್ಚಿ ಅವುಗಳನ್ನೂ ಪರಿಶೀಲನೆಗೆ ಒಳಪಡಿಸಲಾಗಿದೆ. ಆದರೂ ಮೃತ ವ್ಯಕ್ತಿಯ ಗುರುತು ಹಾಗೂ ಅಪಘಾತದ ನಿಖರ ಕಾರಣ ಇನ್ನೂ ಬೆಳಕಿಗೆ ಬಂದಿಲ್ಲ.
ಎಲ್ಲಾ ರೀತಿಯ ಪ್ರಯತ್ನಗಳ ನಡುವೆಯೂ ಪ್ರಕರಣ ಇನ್ನೂ ಕಗ್ಗಂಟಾಗಿಯೇ ಉಳಿದಿದೆ. ಸದ್ಯ ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತಲೆಕೆಡಿಸಿಕೊಂಡು ತನಿಖೆಯನ್ನು ಮುಂದುವರಿಸಿದ್ದಾರೆ. ಒಂದೂವರೆ ತಿಂಗಳಾದರೂ ಅಪರಿಚಿತ ಮೃತದೇಹದ ಗುರುತು ಪತ್ತೆಯಾಗದಿರುವುದು ಹಾಗೂ ಅಪಘಾತದ ಹಿಂದಿನ ನಿಜಾಂಶ ಹೊರಬರದಿರುವುದು ಈ ಪ್ರಕರಣವನ್ನು ಇನ್ನಷ್ಟು ನಿಗೂಢವಾಗಿಸಿದೆ.
ಇದನ್ನೂ ಓದಿ : ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ – ರಾಜ್ಯದ ಹಲವು ಜಿಲ್ಲೆಗಳಲ್ಲಿ ಮೆಗಾ ರೇಡ್!



















