ಭೂತಾನ್ನ ಗಾಸಾ ಜಿಲ್ಲೆಯಲ್ಲಿ ಹಿಮನದಿ ಸರೋವರವೊಂದು ಇದ್ದಕ್ಕಿದ್ದಂತೆ ಸ್ಫೋಟಗೊಂಡ ಪರಿಣಾಮ ಸೃಷ್ಟಿಯಾದ ಪ್ರವಾಹವು ಭಾರತದ ಈಶಾನ್ಯ ರಾಜ್ಯಗಳ ಮೇಲೆ ಪ್ರವಾಹದ ಆತಂಕ ಉಂಟುಮಾಡಿದೆ. ಘಟನೆಯಿಂದಾಗಿ ಭೂತಾನ್ನಲ್ಲಿ ಸೌರಶಕ್ತಿ ಚಾಲಿತ ನೀರಾವರಿ ಯೋಜನೆಗೆ ಹಾನಿಯಾಗಿದ್ದು, ಹೆದ್ದಾರಿ ಮಾರ್ಗದಲ್ಲಿ ಅವಶೇಷಗಳು ಬಿದ್ದು ಸಂಚಾರ ಬಂದ್ ಆಗಿದೆ. ಇದರ ಬೆನ್ನಲ್ಲೇ ಸಂಕೋಶ್ ನದಿಯಲ್ಲಿ ನೀರಿನ ಮಟ್ಟ ತೀವ್ರವಾಗಿ ಏರಿಕೆಯಾಗುವ ಸಾಧ್ಯತೆಯಿರುವುದರಿಂದ ಭಾರತ ಸರ್ಕಾರವು ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ರಾಜ್ಯಗಳ ಐದು ಜಿಲ್ಲೆಗಳಿಗೆ ಜಾಗರೂಕತೆಯ ಎಚ್ಚರಿಕೆ ನೀಡಿದೆ.
ಆಗ್ನೇಯ ಭೂತಾನ್ನ ಶಿಂತಾಫು ಸರೋವರದಲ್ಲಿ ನಿನ್ನೆ ಸಂಜೆ ಈ ಪ್ರವಾಹ ಸಂಭವಿಸಿದೆ. ಹಿಮನದಿಗಳು ಕರಗಿ ಉಂಟಾಗುವ ಸರೋವರದ ಪ್ರಾಕೃತಿಕ ತಡೆಗೋಡೆಗಳು ಮುರಿದಾಗ ಅಪಾರ ಪ್ರಮಾಣದ ನೀರು ಒಮ್ಮೆಗೆ ಹರಿದುಬರುತ್ತದೆ. ಇದನ್ನು ‘ಗ್ಲೇಶಿಯಲ್ ಲೇಕ್ ಔಟ್ಬರ್ಸ್ಟ್ ಫ್ಲಡ್’ ಅಂದರೆ ನೀರ್ಗಲ್ಲು ಸರೋವರ ಸ್ಫೋಟದಿಂದ ಉಂಟಾಗುವ ಪ್ರವಾಹ ಎಂದು ಕರೆಯಲಾಗುತ್ತದೆ. ಶಿಂತಾಫು ಸರೋವರವು ಭೂತಾನ್ನ ಅಪಾಯಕಾರಿ 17 ಹಿಮನದಿ ಸರೋವರಗಳ ಪಟ್ಟಿಯಲ್ಲಿದ್ದು, ಇದು ಪುನಾತ್ಸಾಂಗ್ಚು ನದಿ ಪಾತ್ರಕ್ಕೆ ಸೇರುತ್ತದೆ. ಈ ನದಿಯು ಭಾರತವನ್ನು ಪ್ರವೇಶಿಸುತ್ತಿದ್ದಂತೆ ಸಂಕೋಶ್ ನದಿ ಎಂಬ ಹೆಸರಿನಿಂದ ಹರಿಯುತ್ತದೆ.


















