ಉಡುಪಿ : ಪರಿಶಿಷ್ಟ ಜಾತಿ ಒಳ ಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರ ವಿನಾಕಾರಣ ಗೊಂದಲ ನಿರ್ಮಿಸುತ್ತಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಆರೋಪಿಸಿದ್ದಾರೆ. ನಾಗಮೋಹನ ದಾಸ ವರದಿಯನ್ನು ಕೂಡ ಸರ್ಕಾರ ಸ್ವೀಕರಿಸಿಲ್ಲ ಎಂದು ಟೀಕಿಸಿದ ಅವರು, ಎಲ್ಲರನ್ನೂ ಸಂತೈಸುವ ಪ್ರಯತ್ನದಲ್ಲಿ ಸಮಾಜದಲ್ಲಿ ಗೊಂದಲ ಉಂಟುಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಒತ್ತಡ ಹೆಚ್ಚಾದರೆ ವಿಶೇಷ ಸಚಿವ ಸಂಪುಟ ಸಭೆ ಕರೆಯುತ್ತೇವೆ ಎಂದು ಮುಖ್ಯಮಂತ್ರಿ ಹೇಳುತ್ತಾರೆ, ಆದರೆ ಅದನ್ನು ಬಿಟ್ಟರೆ ಯಾವುದೇ ಸ್ಪಷ್ಟ ಕ್ರಮ ಕೈಗೊಂಡಿಲ್ಲ, ವಿರಳ ಅಲೆಮಾರಿ ಸಮುದಾಯಗಳಿಗೆ ಅನ್ಯಾಯವಾಗುತ್ತಿದ್ದು, ಅವರಿಗೆ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.
ಪರಿಶಿಷ್ಟ ಜಾತಿಯ ಒಳ ಮೀಸಲಾತಿ ವಿಚಾರದಲ್ಲಿ ಗೊಂದಲ ಮಾಡಬಾರದು, ಸದಾಶಿವ ಆಯೋಗ ಮತ್ತು ನಾಗಮೋಹನ ದಾಸ ಆಯೋಗಗಳ ವರದಿಯನ್ನು ಸರಿಯಾಗಿ ಪರಿಶೀಲಿಸಿ ಅಲೆಮಾರಿಗಳಾಗಿ ತಿರುಗುವ ಕಡುಬಡವರಿಗೆ ನ್ಯಾಯ ಕೊಡಬೇಕು, ಮುಖ್ಯಮಂತ್ರಿಗಳು ದಿಟ್ಟ ನಿರ್ಧಾರ ತೆಗೆದುಕೊಂಡು ಅಲೆಮಾರಿಗಳಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಇದೇ ವೇಳೆ ಖರ್ಗೆ ಅವರು ಪ್ರಧಾನಿ ಭಯೋತ್ಪಾದಕ ಎಂದು ಹೇಳಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕರ್ನಾಟಕದಿಂದ ಮೇಲೆದ್ದು ಬಂದ ಖರ್ಗೆ ಅವರ ಬಗ್ಗೆ ನಮಗೆ ಗೌರವ ಇದೆ. ಆದರೆ ಅವರು ಈ ಹಿಂದೆ ಸಂಘ ಪರಿವಾರವನ್ನು ಸರ್ಪಕ್ಕೆ ಹೋಲಿಸಿದ ಹೇಳಿಕೆ ಸರಿಯಲ್ಲ. ನೆಹರು ಆರ್‌ಎಸ್‌ಎಸ್‌ಗೆ ಪಥಸಂಚಲನಕ್ಕೆ ಆಹ್ವಾನ ನೀಡಿದ್ದನ್ನು ಮರೆತಿದ್ದಾರೆ, ಸಮುದಾಯಗಳ ಮತ ಪಡೆಯಲು ಈ ರೀತಿಯ ಹೇಳಿಕೆಗಳನ್ನು ಪದೇಪದೇ ಕೊಡಲಾಗುತ್ತಿದೆ. ಇದೀಗ ಪ್ರಧಾನಮಂತ್ರಿಯನ್ನು ಭಯೋತ್ಪಾದಕ ಎಂದು ಕರೆಯಲಾಗಿದೆ. ಧರ್ಮ ಕೇಳಿ ಗುಂಡಿಟ್ಟು ಪೆಹಲ್ಗಾಮ್ನಲ್ಲಿ ಕೊಂದವರು ಇವರಿಗೆ ಭಯೋತ್ಪಾದಕರಂತೆ ಕಾಣಲಿಲ್ಲವೇ ಎಂದು ಪ್ರಶ್ನಿಸಿದರು.
ರಾಷ್ಟ್ರಭಕ್ತ ಕೆಂಗಲ್ ಹನುಮಂತಯ್ಯ ಕಟ್ಟಿದ ವಿಧಾನಸೌಧದಲ್ಲಿ ಪಾಕಿಸ್ತಾನಕ್ಕೆ ಜೈಕಾರ ಹಾಕಿದವರು ಭಯೋತ್ಪಾದಕರಲ್ಲವೇ? ಕುಕ್ಕರ್‌ನಲ್ಲಿ ಬಾಂಬ್ ಇಟ್ಟವರು ಇವರ ಬಂಧುಗಳೇ ಎಂದು ಆರೋಪಿಸಿದರು. ಜಗತ್ತಿನಲ್ಲಿ ಗೌರವ ಪಡೆದ, ಧರ್ಮ ಮೀರಿ ರಾಷ್ಟ್ರಧರ್ಮ ಪಾಲಿಸುತ್ತಿರುವ ಪ್ರಧಾನಿಯನ್ನು ಭಯೋತ್ಪಾದಕ ಎಂದು ಕರೆಯುವುದು ಖಂಡನೀಯ, ಖರ್ಗೆ ಅವರ ಹಿರಿತನಕ್ಕೆ ಇದು ಶೋಭೆಯಲ್ಲ. ಕರ್ನಾಟಕದಿಂದ ಬಂದ ಹಿರಿಯ ರಾಜಕಾರಣಿ ಅಸಂಬದ್ಧವಾಗಿ ಮಾತನಾಡಿರುವುದು ತಪ್ಪು. ದೇಶದ ಜನತೆಗೆ ಕ್ಷಮೆ ಕೇಳಬೇಕು ಎಂದು ಕೋಟ ಶ್ರೀನಿವಾಸ ಪೂಜಾರಿ ಆಗ್ರಹಿಸಿದರು.
ಇದನ್ನೂ ಓದಿ : ಅಟಲ್ ಸೇತುವೆಯಿಂದ ಗೇಟ್‌ವೇ ಆಫ್ ಇಂಡಿಯಾವರೆಗೆ 17 ಕಿ.ಮೀ. ಈಜಿ ಅಚ್ಚರಿ ಮೂಡಿಸಿದ ಬಾಲಕ!


















