ಕಲಬುರಗಿ : ಪೊಲೀಸ್ ವಾಹನದಲ್ಲೇ ಗುಂಡು ಹೊಡೆದುಕೊಂಡು ಕಾನ್ಸ್‌ಟೇಬಲ್ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ನಗರದ ಜಗತ್ ವೃತ್ತದ ಬಳಿ ನಡೆದಿದೆ.
ಜೇವರ್ಗಿ ತಾಲೂಕಿನ ನರಿಬೋಳ ಗ್ರಾಮದ ನಿವಾಸಿ ಹಾಗೂ ಸಿಎಆರ್ (CAR) ಕಾನ್ಸ್‌ಟೇಬಲ್ ಆಗಿದ್ದ ಶಿವಕುಮಾರ್ ಮೃತ ದುರ್ದೈವಿ. ನಿನ್ನೆ ನಗರದ ವಿವಿಧ ಭಾಗಗಳಲ್ಲಿ ಮುಖ್ಯಮಂತ್ರಿ ಆಗಮಿಸಿದ್ದ ಹಿನ್ನೆಲೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಅದರಂತೆ ಶಿವಕುಮಾರ್ ಕೂಡ ಇತರ ಪೊಲೀಸರೊಂದಿಗೆ ಬಂದೋಬಸ್ತ್ ಕರ್ತವ್ಯ ನಿರ್ವಹಿಸುತ್ತಿದ್ದರು.
ಇದೇ ವೇಳೆ ಪೊಲೀಸ್ ವಾಹನದಲ್ಲಿದ್ದ 303 ರೈಫಲ್‌ನಿಂದ ಎದೆಗೆ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗುಂಡಿನ ಸದ್ದು ಕೇಳುತ್ತಿದ್ದಂತೆ ಸ್ಥಳದಲ್ಲಿದ್ದ ಪೊಲೀಸರು ತಕ್ಷಣವೇ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಆದರೆ ಅಷ್ಟರಲ್ಲೇ ಶಿವಕುಮಾರ್ ಮೃತಪಟ್ಟಿದ್ದರು.
ಮಾಹಿತಿ ತಿಳಿಯುತ್ತಿದ್ದಂತೆ ನಗರ ಪೊಲೀಸ್ ಕಮೀಷನರ್ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಎಲ್ಲಾ ಆಯಾಮಗಳಿಂದ ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ : ಫುಟ್‌ಪಾತ್ ತೆರವು ಕಾರ್ಯಾಚರಣೆ ವಿರುದ್ಧ ಸಿಡಿದೆದ್ದ ಬೀದಿ ಬದಿ ವ್ಯಾಪಾರಿಗಳು – ಇಂದು ಬೃಹತ್ ಪ್ರತಿಭಟನೆ!


















