ಬೆಂಗಳೂರು: ಕರ್ನಾಟಕವನ್ನು ಭಾರತದ ಕ್ವಾಂಟಮ್ ತಂತ್ರಜ್ಞಾನ ರಾಜಧಾನಿಯನ್ನಾಗಿ ರೂಪಿಸುವ ಉದ್ದೇಶದಿಂದ ಪ್ರಸ್ತಾವಿತ ಕ್ವಾಂಟಮ್ ಸಿಟಿಯನ್ನು ಇನ್ನಷ್ಟು ವಿಸ್ತೃತವಾಗಿ ಅಭಿವೃದ್ಧಿಪಡಿಸಲು ಹೆಚ್ಚುವರಿ ಜಾಗ ಮಂಜೂರು ಮಾಡುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಮಾಡಿರುವುದಾಗಿ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಅಜಯ್ ಧರ್ಮಸಿಂಗ್ ತಿಳಿಸಿದರು.
ಬೆಂಗಳೂರು ಟೆಕ್ ಸಮ್ಮಿಟ್ 2026ರ ಅಂಗವಾಗಿ ಗುರುವಾರ ಆಯೋಜಿಸಿದ್ದ ‘ಕರ್ನಾಟಕ ಕ್ವಾಂಟಮ್ ಸಿಟಿ: ಜಾಗತಿಕ ಕ್ವಾಂಟಮ್ ಆವಿಷ್ಕಾರ ಮತ್ತು ಸಂಶೋಧನಾ ಕೇಂದ್ರ ನಿರ್ಮಾಣ’ (Karnataka Quantum City: Building a Global Quantum Innovation and Research Hub) ದುಂಡುಮೇಜಿನ ಸಭೆಯಲ್ಲಿ ಅವರು ಮಾತನಾಡಿದರು. ವಿದೇಶಿ ರಾಯಭಾರ ಕಚೇರಿಗಳ ಪ್ರತಿನಿಧಿಗಳು, ಕ್ವಾಂಟಮ್ ತಂತ್ರಜ್ಞಾನ ಕಂಪನಿಗಳು, ಸಂಶೋಧನಾ ಸಂಸ್ಥೆಗಳು, ಕ್ವಾಂಟಮ್ ಟಾಸ್ಕ್ ಫೋರ್ಸ್ ಸದಸ್ಯರು ಹಾಗೂ ಹೂಡಿಕೆ ವಲಯದ ಪ್ರತಿನಿಧಿಗಳೊಂದಿಗೆ ಸಚಿವರು ಸಂವಾದ ನಡೆಸಿದರು.
ಹೆಸರಘಟ್ಟದಲ್ಲಿ 6.14 ಎಕರೆ ಮಂಜೂರು, ಹೆಚ್ಚುವರಿ ಜಾಗಕ್ಕೆ ಬೇಡಿಕೆ
ರಾಜ್ಯ ಸರ್ಕಾರ ಈಗಾಗಲೇ ಹೆಸರಘಟ್ಟದಲ್ಲಿ ಕ್ವಾಂಟಮ್ ಸಿಟಿಗಾಗಿ 6.14 ಎಕರೆ ಜಾಗವನ್ನು ಮಂಜೂರು ಮಾಡಿದ್ದು, ಕ್ವಾಂಟಮ್ ತಂತ್ರಜ್ಞಾನ ಕ್ಷೇತ್ರದ ಅಭಿವೃದ್ಧಿಗೆ ₹1,000 ಕೋಟಿ ಹೂಡಿಕೆಯ ಬದ್ಧತೆಯನ್ನು ಘೋಷಿಸಿದೆ. ಈಗಾಗಲೇ ಹಲವಾರು ಪ್ರಮುಖ ಕಂಪನಿಗಳು ಹಾಗೂ ವಿದೇಶಿ ಸಂಶೋಧನಾ ಮತ್ತು ಶೈಕ್ಷಣಿಕ ಸಂಸ್ಥೆಗಳು ಕ್ವಾಂಟಮ್ ಸಿಟಿಯೊಂದಿಗೆ ಸಹಭಾಗಿತ್ವಕ್ಕೆ ಆಸಕ್ತಿ ತೋರಿವೆ. ಈ ಹಿನ್ನೆಲೆಯಲ್ಲಿ ಭವಿಷ್ಯದ ಅಗತ್ಯಗಳಿಗೆ ತಕ್ಕಂತೆ ಯೋಜನೆಯನ್ನು ವಿಸ್ತರಿಸಲು ಹಾಗೂ ವಿಸ್ತೃತ ಮೂಲಸೌಕರ್ಯ ನಿರ್ಮಿಸಲು ಹೆಚ್ಚುವರಿ ಜಾಗದ ಅವಶ್ಯಕತೆಯಿದೆ ಎಂದು ಸಚಿವರು ವಿವರಿಸಿದರು. ಹೆಚ್ಚುವರಿ ಜಾಗದ ಮನವಿಗೆ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಜಾಗತಿಕ ಮಟ್ಟದ ಕ್ವಾಂಟಮ್ ಪರಿಸರ ವ್ಯವಸ್ಥೆ ನಿರ್ಮಿಸಲು ರಾಜ್ಯ ಸರ್ಕಾರ ಅಗತ್ಯ ಸಹಕಾರ ನೀಡಲಿದೆ ಎಂದು ಅವರು ಹೇಳಿದರು.
ಜಾಗತಿಕ ಪಾಲುದಾರರಿಗೆ ಹೂಡಿಕೆಗೆ ಆಹ್ವಾನ
ಸಭೆಯಲ್ಲಿ ಕ್ವಾಂಟಮ್ ಸಿಟಿಯ ಪರಿಕಲ್ಪನೆ, ಮೂಲಸೌಕರ್ಯ, ಅನುಷ್ಠಾನ ಯೋಜನೆ ಮತ್ತು ಕರ್ನಾಟಕದಲ್ಲಿ ಲಭ್ಯವಿರುವ ಸಂಶೋಧನೆ ಹಾಗೂ ಮಾನವ ಸಂಪನ್ಮೂಲ ಸಾಮರ್ಥ್ಯದ ಕುರಿತು ವಿವರಿಸಿದ ಡಾ. ಅಜಯ್ ಧರ್ಮಸಿಂಗ್, ಹೂಡಿಕೆ, ಸಂಶೋಧನೆ, ತಂತ್ರಜ್ಞಾನ ಅಭಿವೃದ್ಧಿ ಮತ್ತು ಜಾಗತಿಕ ಸಹಭಾಗಿತ್ವದ ಮೂಲಕ ಕ್ವಾಂಟಮ್ ಸಿಟಿಯಲ್ಲಿ ಪಾಲುದಾರರಾಗುವಂತೆ ಕಂಪನಿಗಳು ಮತ್ತು ಸಂಸ್ಥೆಗಳಿಗೆ ಆಹ್ವಾನ ನೀಡಿದರು. ಬೆಂಗಳೂರು ಈಗಾಗಲೇ ದೇಶದ ಪ್ರಮುಖ ಕ್ವಾಂಟಮ್ ತಂತ್ರಜ್ಞಾನ ಕ್ಲಸ್ಟರ್ಗಳಲ್ಲೊಂದಾಗಿ ಹೊರಹೊಮ್ಮಿದೆ. ಐಐಎಸ್ಸಿ ಸೇರಿದಂತೆ ವಿಶ್ವಮಟ್ಟದ ಸಂಶೋಧನಾ ಸಂಸ್ಥೆಗಳು, ಪರಿಣತ ಮಾನವ ಸಂಪನ್ಮೂಲ, ತಂತ್ರಜ್ಞಾನ ಕಂಪನಿಗಳು ಮತ್ತು ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆ ಕರ್ನಾಟಕದ ಶಕ್ತಿಯಾಗಿದ್ದು, ಇವುಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಗುರಿ ಹೊಂದಲಾಗಿದೆ ಎಂದರು.
ಕ್ವಾಂಟಮ್ ಸಿಟಿಯನ್ನು ಕೇವಲ ಕಟ್ಟಡ ಅಥವಾ ಮೂಲಸೌಕರ್ಯ ಯೋಜನೆಯಾಗಿ ನೋಡದೆ, ಸಂಶೋಧನಾ ಸಂಸ್ಥೆಗಳು, ಸ್ಟಾರ್ಟ್ಅಪ್ಗಳು, ಕೈಗಾರಿಕೆ, ಹೂಡಿಕೆದಾರರು, ಪ್ರತಿಭಾವಂತ ಮಾನವ ಸಂಪನ್ಮೂಲ ಹಾಗೂ ಜಾಗತಿಕ ತಂತ್ರಜ್ಞಾನ ಪಾಲುದಾರರನ್ನು ಸಂಪರ್ಕಿಸುವ ಸಮಗ್ರ ಸಂಶೋಧನಾ ಪರಿಸರ ವ್ಯವಸ್ಥೆಯನ್ನಾಗಿ ಅಭಿವೃದ್ಧಿಪಡಿಸಲಾಗುವುದು. ಕ್ವಾಂಟಮ್ ಕ್ಷೇತ್ರದಲ್ಲಿ ಸಂಶೋಧನೆಯಿಂದ ಉತ್ಪನ್ನ ಅಭಿವೃದ್ಧಿಗೆ, ಉತ್ಪನ್ನದಿಂದ ವಾಣಿಜ್ಯೀಕರಣಕ್ಕೆ ಹಾಗೂ ಅಲ್ಲಿಂದ ಜಾಗತಿಕ ಮಾರುಕಟ್ಟೆಗೆ ಸಾಗುವ ಸಂಪೂರ್ಣ ವ್ಯವಸ್ಥೆಯನ್ನು ಕರ್ನಾಟಕದಲ್ಲೇ ನಿರ್ಮಿಸುವುದು ಸರ್ಕಾರದ ಉದ್ದೇಶವಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.
ದುಂಡುಮೇಜಿನ ಸಭೆಯಲ್ಲಿ ಪಾಲ್ಗೊಂಡ ಗಣ್ಯರು
ಸಭೆಯಲ್ಲಿ ಜರ್ಮನಿಯ ಕಾನ್ಸುಲ್ ಜನರಲ್ ಡಾ. ಕ್ರಿಸ್ಟೋಫ್ ಡೋರ್ಷ್ಫೆಲ್ಟ್, ಜರ್ಮನಿಯ ಡೆಪ್ಯುಟಿ ಕಾನ್ಸುಲ್ ಜನರಲ್ ಆನೆಟ್ ಬೇಸ್ಲರ್, ಇಟಲಿ ಕಾನ್ಸುಲೇಟ್ ಜನರಲ್ನ ಪ್ರೊ. ಮಾರ್ಕೊ ರೆ, ಜೆಎನ್ಸಿಎಎಸ್ಆರ್ (JNCASR) ಅಧ್ಯಕ್ಷ ಪ್ರೊ. ನಾರಾಯಣ ಕೆ.ಎಸ್., ಐಐಐಟಿ ಧಾರವಾಡ ನಿರ್ದೇಶಕ ಪ್ರೊ. ಎಸ್.ಆರ್. ಮಹದೇವ ಪ್ರಸನ್ನ, ಮಾಜಿ ಡಿಆರ್ಡಿಒ ನಿರ್ದೇಶಕ ಕೆ.ಡಿ. ನಾಯಕ್, ಕ್ಯೂಇಟಿಸಿಐ (QETCI) ಸ್ಥಾಪಕಿ ಮತ್ತು ಸಿಇಒ ರೀನಾ ದಯಾಳ್, ಯುಎಸ್ಐಬಿಸಿಯ (USIBC) ಸ್ಟ್ರಾಟೆಜಿಕ್ ಟೆಕ್ನಾಲಜೀಸ್ ನಿರ್ದೇಶಕ ಡಾ. ಸುಮೀರ್, ಕ್ಯೂಎನ್ಯು ಲ್ಯಾಬ್ಸ್ನ (QNu Labs) ಸುನಿಲ್ ಗುಪ್ತಾ ಭಾಗವಹಿಸಿದ್ದರು. ಅಲ್ಲದೆ, ಇಸ್ರೇಲ್ ಇನ್ನೋವೇಶನ್ ಅಥಾರಿಟಿ, ಯು.ಎಸ್. ಚೇಂಬರ್ ಆಫ್ ಕಾಮರ್ಸ್, ಕ್ವಾಂಟಮ್ ಟಾಸ್ಕ್ ಫೋರ್ಸ್ ಸದಸ್ಯರು, ಕ್ಯೂಪಿಐಎಐ (QPIAI), ಅಮೆಜಾನ್ ವೆಬ್ ಸರ್ವೀಸಸ್, ಸೀಫಂಡ್ (Seafund) ಮತ್ತು ಐಐಎಸ್ಸಿ ಸೇರಿದಂತೆ ವಿವಿಧ ಸಂಶೋಧನಾ, ಕೈಗಾರಿಕಾ ಮತ್ತು ಹೂಡಿಕೆ ಸಂಸ್ಥೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.



















