ಬೆಂಗಳೂರು : ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದು ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟಾಚಾರದ ವಿರುದ್ಧ ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಆದಾಯ ಮೀರಿ ಆಸ್ತಿ ಗಳಿಕೆ ಆರೋಪದ ಹಿನ್ನೆಲೆ ಕಲಬುರಗಿ, ಚಿತ್ರದುರ್ಗ, ಧಾರವಾಡ ಮತ್ತು ರಾಯಚೂರು ಜಿಲ್ಲೆಗಳಲ್ಲಿ ವಿವಿಧ ಸರ್ಕಾರಿ ಭ್ರಷ್ಟ ಅಧಿಕಾರಿಗಳ ಮನೆ, ಕಚೇರಿ ಹಾಗೂ ಸಂಬಂಧಿತ ಆಸ್ತಿಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ಆರಂಭಿಸಿದ್ದಾರೆ. ಹಲವು ತಂಡಗಳಾಗಿ ಅಧಿಕಾರಿಗಳು ಶೋಧ ಕಾರ್ಯ ನಡೆಸುತ್ತಿದ್ದು, ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದು ಪರಿಶೀಲಿಸುತ್ತಿದ್ದಾರೆ.
ಕಲಬುರಗಿಯಲ್ಲಿ ಜೆಸ್ಕಾಂ ಎಇಇ ಅಮೃತರಾವ್ ಯಲಾಲ್ ಅವರಿಗೆ ಸೇರಿದ ಜಾಗೃತಿ ಕಾಲೋನಿಯ ಮನೆ, ಬಸವ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್, ಕೊತ್ತಂಬರಿ ಲೇಔಟ್‌ನಲ್ಲಿರುವ ಜೆಸ್ಕಾಂ ಕಚೇರಿ, ಚಿಂಚೋಳಿ ತಾಲೂಕಿನ ಸುಲೇಪೇಟ್ ಗ್ರಾಮದ ಮನೆ, ಪ್ಲಾಟಿನಂ ಸ್ಟುಡಿಯೋ, ನಂದೂರು ಇಂಡಸ್ಟ್ರಿಯಲ್ ಏರಿಯಾದ ಫ್ಲ್ಯಾಟ್ ಸೇರಿದಂತೆ ಒಟ್ಟು ಏಳು ಕಡೆ ಲೋಕಾಯುಕ್ತ ದಾಳಿ ನಡೆಸಿದೆ. 20ಕ್ಕೂ ಹೆಚ್ಚು ಎಕರೆ ಜಮೀನು ಹೊಂದಿರುವ ಆರೋಪವೂ ಕೇಳಿಬಂದಿದ್ದು, ಲೋಕಾಯುಕ್ತ ಎಸ್‌ಪಿ ಸಿದ್ದರಾಜು ನೇತೃತ್ವದಲ್ಲಿ ಅಧಿಕಾರಿಗಳು ಶೋಧ ಕಾರ್ಯ ನಡೆಸುತ್ತಿದ್ದಾರೆ.
ಚಿತ್ರದುರ್ಗದಲ್ಲಿ ಜಲಾನಯನ ಇಲಾಖೆಯ ಆರ್‌ಎಫ್‌ಒ ದುಗ್ಗಪ್ಪ ಹಾಗೂ ಬಬ್ಬೂರು ತೋಟಗಾರಿಕೆ ಕಾಲೇಜಿನ ಪ್ರಾಧ್ಯಾಪಕ ಶಂಕರ್ ಅವರಿಗೆ ಸೇರಿದ ಮನೆ, ಕಚೇರಿ ಸೇರಿದಂತೆ ಹಲವು ಕಡೆ ದಾಳಿ ನಡೆಸಲಾಗಿದೆ.
ಅದೇ ವೇಳೆ ಧಾರವಾಡದಲ್ಲಿ ಶಿವಮೊಗ್ಗ ಎಸಿಎಫ್ ಕಿರಣ್ ಅಂಗಡಿ ಅವರಿಗೆ ಸೇರಿದ ಐಷಾರಾಮಿ ಮನೆ, ಫಾರ್ಮ್ ಹೌಸ್, ಕೈಗಾರಿಕಾ ಪ್ರದೇಶದಲ್ಲಿರುವ ಫ್ಯಾಕ್ಟರಿ ಹಾಗೂ ಸಂಬಂಧಿಕರ ಮನೆ ಮೇಲೂ ಲೋಕಾಯುಕ್ತ ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದಾರೆ. ಅಧಿಕಾರಿಗಳು ಮನೆಯಲ್ಲಿ ಇಲ್ಲದಿದ್ದರೂ ಶೋಧ ಕಾರ್ಯ ಮುಂದುವರಿದಿದೆ ಎಂದು ತಿಳಿದುಬಂದಿದೆ.
ರಾಯಚೂರಿನಲ್ಲಿ ಕೆಬಿಜೆಎನ್‌ಎಲ್ ಇಇ ಬಸನಗೌಡ ಅವರಿಗೆ ಸೇರಿದ ಮನೆ, ಕಚೇರಿ, ಸಂಬಂಧಿಕರ ಮನೆಗಳು, ತೋಟದ ಮನೆ, ಪೆಟ್ರೋಲ್ ಬಂಕ್, ಬಾರ್ & ರೆಸ್ಟೋರೆಂಟ್, ಗೋದಾಮು ಸೇರಿದಂತೆ ಹಲವು ಕಡೆ ಲೋಕಾಯುಕ್ತ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಆದಾಯ ಮೀರಿ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ನಡೆದಿರುವ ಈ ರಾಜ್ಯವ್ಯಾಪಿ ಕಾರ್ಯಾಚರಣೆಯಲ್ಲಿ ವಿವಿಧ ಜಿಲ್ಲೆಗಳ ಲೋಕಾಯುಕ್ತ ಎಸ್‌ಪಿ, ಡಿವೈಎಸ್‌ಪಿ ಹಾಗೂ ಇತರ ಅಧಿಕಾರಿಗಳು ಭಾಗವಹಿಸಿದ್ದು, ಶೋಧ ಕಾರ್ಯ ಮುಂದುವರಿದಿದೆ.
ಇದನ್ನೂ ಓದಿ : ಪೊಲೀಸ್ ವಾಹನದಲ್ಲೇ ಗುಂಡು ಹೊಡೆದುಕೊಂಡು ಕಾನ್ಸ್‌ಟೇಬಲ್ ಆತ್ಮಹತ್ಯೆ


















