ದಾವಣಗೆರೆ : ಆಡಳಿತಾರೂಢ ಕಾಂಗ್ರೆಸ್ ಹಾಗೂ ಪ್ರತಿಪಕ್ಷ ಬಿಜೆಪಿ ನಡುವೆ ತೀವ್ರ ಜಿದ್ದಾಜಿದ್ದಿಗೆ ಕಾರಣವಾಗಿದ್ದ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ, ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗ ಸಮರ್ಥ್ ಶಾಮನೂರು ಕೊನೆಗೂ ಗೆಲುವು ದಾಖಲಿಸಿದ್ದಾರೆ.
ನಗರದ ಡಿಆರ್‌ಆರ್ ಕಾಲೇಜಿನಲ್ಲಿ ಇಂದು ಮತ ಎಣಿಕೆ ನಡೆದಿದ್ದು, ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸ ಕರಿಯಪ್ಪ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಅವರು 4,500 ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಪಡೆದಿದ್ದಾರೆ.
ದಾವಣಗೆರೆಯಲ್ಲಿ ಹಿರಿಯ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಉಪ ಚುನಾವಣೆ ನಡೆದಿತ್ತು. ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯದ ಅಭ್ಯರ್ಥಿಗೆ ಕಾಂಗ್ರೆಸ್ ಟಿಕೆಟ್ ನೀಡಬೇಕೆಂಬ ಒತ್ತಾಯ ಕೇಳಿಬಂದಿತ್ತು. ಆದರೆ, ನಾನಾ ಕಸರತ್ತು ನಡೆಸಿ ಮೊಮ್ಮಗ ಸಮರ್ಥ ಶಾಮನೂರು ಅವರಿಗೆ ಟಿಕೆಟ್ ಪಡೆಯಲು ಕುಟುಂಬ ಯಶಸ್ವಿಯಾಗಿತ್ತು. ಇದರಿಂದ ಸ್ಥಳೀಯ ಮುಸ್ಲಿಂ ಮುಖಂಡರು ರಾಜ್ಯ ಕಾಂಗ್ರೆಸ್ ನಾಯಕರ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಬಳಿಕ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಭಿನ್ನಮತ ಶಮನಗೊಳಿಸುವಲ್ಲಿ ಯಶಸ್ವಿಯಾಗಿದ್ದರು.
ಮತ್ತೊಂದೆಡೆ ಈ ಕ್ಷೇತ್ರ ಹುಟ್ಟಿದಾಗಿನಿಂದ ಖಾತೆಯನ್ನೇ ತೆರೆಯದ ಬಿಜೆಪಿ, ಸಾಮಾನ್ಯ ಕ್ಷೇತ್ರದಲ್ಲಿ ಎಸ್‌ಟಿ ಸಮುದಾಯಕ್ಕೆ ಸೇರಿದ ಸಾಮಾನ್ಯ ವ್ಯಕ್ತಿಯನ್ನು ಕಣಕ್ಕಿಳಿಸಿ ಪ್ರಯೋಗಕ್ಕೆ ಇಳಿದಿತ್ತು. ಹಿಂದುಳಿದ ವರ್ಗಗಳ ಮತಗಳ ಮೇಲೆ ಕಣ್ಣಿಟ್ಟು ಕಮಲ ಅರಳಿಸಲು ನಡೆಸಿದ ಪ್ರಯೋಗ ಇದೀಗ ವಿಫಲವಾಗಿದೆ.
ಇದನ್ನೂ ಓದಿ : ಬಾಗಲಕೋಟೆ ಬೈ ಎಲೆಕ್ಷನ್‌ನಲ್ಲಿ ಉಮೇಶ್ ಮೇಟಿಗೆ ಭರ್ಜರಿ ಗೆಲುವು – ‘ಕೈ’ ಕಾರ್ಯಕರ್ತರಿಂದ ಸಂಭ್ರಮಾಚರಣೆ



















