ಬೆಂಗಳೂರು : ಭಾರತ ಹಾಗೂ ಅಫ್ಘಾನಿಸ್ತಾನ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಅಂತಿಮ ಹಣಾಹಣಿಗೆ ಟೀಮ್ ಇಂಡಿಯಾ ಭರ್ಜರಿ ಸಿದ್ಧತೆ ನಡೆಸುತ್ತಿದ್ದು, ಮೂರನೇ ಪಂದ್ಯಕ್ಕಾಗಿ ಯುವ ವೇಗಿ ಹರ್ಷಿತ್ ರಾಣಾ ಅವರನ್ನು ಭಾರತೀಯ ತಂಡಕ್ಕೆ ಸೇರ್ಪಡೆಗೊಳಿಸಲಾಗಿದೆ.
ಗಾಯದ ಸಮಸ್ಯೆಯಿಂದ ಸುದೀರ್ಘ ಕಾಲ ಕ್ರಿಕೆಟ್‌ನಿಂದ ದೂರ ಉಳಿದಿದ್ದ ಈ ಯುವ ಪ್ರತಿಭೆ, ಮತ್ತೆ ಅಂತಾರಾಷ್ಟ್ರೀಯ ಪಂದ್ಯಗಳ ಮೂಲಕ ಕಣಕ್ಕಿಳಿಯಲು ಅಣಿಯಾಗಿದ್ದಾರೆ. ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ (CoE) ಪುನರ್ವಸತಿ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಅವರು, ಶನಿವಾರ ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿರುವ ಸರಣಿಯ ಕೊನೆಯ ಪಂದ್ಯಕ್ಕಾಗಿ ತಂಡದೊಂದಿಗೆ ಮುಖಾಮುಖಿಯಾಗಿದ್ದಾರೆ.
ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡು ಮತ್ತೆ ಮೈದಾನಕ್ಕೆ
ದಕ್ಷಿಣ ಆಫ್ರಿಕಾ ವಿರುದ್ಧ ನವಿ ಮುಂಬೈನಲ್ಲಿ ನಡೆದ ಅಭ್ಯಾಸ ಪಂದ್ಯದ ವೇಳೆ ಮಂಡಿ ಗಾಯಕ್ಕೆ ತುತ್ತಾಗಿದ್ದ ಹರ್ಷಿತ್ ರಾಣಾ, ಇದೀಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಬಿಸಿಸಿಐ ಗರಡಿಯಲ್ಲಿ ಕಠಿಣ ತರಬೇತಿ ಹಾಗೂ ವೈದ್ಯಕೀಯ ನಿಗಾದಲ್ಲಿ ಫಿಟ್‌ನೆಸ್ ಸಾಬೀತುಪಡಿಸಿದ ಬಳಿಕವಷ್ಟೇ ಅವರನ್ನು ಮರಳಿ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಸುದೀರ್ಘ ವಿರಾಮದ ನಂತರ ಅಂತಾರಾಷ್ಟ್ರೀಯ ತಂಡದ ವಾತಾವರಣಕ್ಕೆ ಅವರು ಹೊಂದಿಕೊಳ್ಳಲು ಹಾಗೂ ಮುಂಬರುವ ಮಹತ್ವದ ಸರಣಿಗಳಿಗೆ ಸಜ್ಜಾಗಲು ಈ ಪಂದ್ಯ ಅವರಿಗೆ ಅತ್ಯಮೂಲ್ಯ ವೇದಿಕೆಯಾಗಲಿದೆ.
ಟಿ20 ವಿಶ್ವಕಪ್ ಮತ್ತು ಐಪಿಎಲ್‌ನಿಂದ ವಂಚಿತರಾಗಿದ್ದ ರಾಣಾ
24 ವರ್ಷದ ಈ ಭರವಸೆಯ ಆಟಗಾರನ ಪಾಲಿಗೆ ಮಂಡಿ ಗಾಯವು ದೊಡ್ಡ ಹಿನ್ನಡೆಯನ್ನೇ ಉಂಟುಮಾಡಿತ್ತು. ಈ ಗಾಯದ ಪರಿಣಾಮವಾಗಿ ಅವರು 2026ರ ಟಿ20 ವಿಶ್ವಕಪ್ ಟೂರ್ನಿಯಿಂದ ಅಧಿಕೃತವಾಗಿ ಹೊರಗುಳಿಯಬೇಕಾಯಿತು. ಅಷ್ಟೇ ಅಲ್ಲದೆ, ಐಪಿಎಲ್ 2026ರ ಆವೃತ್ತಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಆಡುವ ಸುವರ್ಣಾವಕಾಶವನ್ನೂ ಅವರು ಕಳೆದುಕೊಂಡಿದ್ದರು. ಆದರೆ, ಅವರ ಅನುಪಸ್ಥಿತಿಯ ನಡುವೆಯೂ ಅದ್ಭುತ ಪ್ರದರ್ಶನ ನೀಡಿದ ಭಾರತ ತಂಡವು ಟಿ20 ವಿಶ್ವಕಪ್ ಟಾಯ್ಟಲ್ ಅನ್ನು ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು.
ಹಾರ್ದಿಕ್ ಪಾಂಡ್ಯಗೆ ಭವಿಷ್ಯದ ಬ್ಯಾಕಪ್ ಆಗುವತ್ತ ಚಿತ್ತ
ಮುಂಬರುವ ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗಳಿಗಾಗಿಯೂ ಭಾರತ ತಂಡದಲ್ಲಿ ಸ್ಥಾನ ಪಡೆದಿರುವ ಹರ್ಷಿತ್ ರಾಣಾ ಅವರನ್ನು ಟೀಮ್ ಮ್ಯಾನೇಜ್ಮೆಂಟ್ ಭವಿಷ್ಯದ ದೃಷ್ಟಿಕೋನದಲ್ಲಿ ನೋಡುತ್ತಿದೆ. ಸೀಮ್ ಬೌಲಿಂಗ್ ಆಲ್ರೌಂಡರ್ ಆಗಿ ನಿತೀಶ್ ಕುಮಾರ್ ರೆಡ್ಡಿ ಹಾಗೂ ಹರ್ಷಿತ್ ರಾಣಾ ಇಬ್ಬರನ್ನೂ ಏಕಕಾಲದಲ್ಲಿ ಬೆಳೆಸುವ ನಿಟ್ಟಿನಲ್ಲಿ ಬಿಸಿಸಿಐ ಯೋಜನೆ ರೂಪಿಸಿದೆ. ವೈಟ್-ಬಾಲ್ ಕ್ರಿಕೆಟ್‌ನಲ್ಲಿ ಹಾರ್ದಿಕ್ ಪಾಂಡ್ಯ ಅವರಿಗೆ ಸಮರ್ಥ ಬ್ಯಾಕಪ್ ಆಟಗಾರರಾಗಿ ಇವರಿಬ್ಬರನ್ನೂ ಸಿದ್ಧಪಡಿಸುವುದು ಭಾರತ ತಂಡದ ದೀರ್ಘಕಾಲೀನ ತಂತ್ರದ ಪ್ರಮುಖ ಭಾಗವಾಗಿದೆ.
ಯುವ ಆಟಗಾರರಿಗೆ ಮಣೆಹಾಕುವ ನಿರೀಕ್ಷೆ
ಈಗಾಗಲೇ ಮೊದಲೆರಡು ಪಂದ್ಯಗಳನ್ನು ಗೆದ್ದುಕೊಂಡಿರುವ ಭಾರತ ತಂಡವು, ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯಲ್ಲಿ 2-0 ಅಂತರದ ಅಜೇಯ ಮುನ್ನಡೆ ಕಾಯ್ದುಕೊಂಡಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲೂ ಯುವಕರೇ ತುಂಬಿರುವ ಟೀಮ್ ಇಂಡಿಯಾ ಎದುರಾಳಿಗಳ ಮೇಲೆ ಸಂಪೂರ್ಣ ಪ್ರಾಬಲ್ಯ ಮೆರೆದಿದೆ. ಮುಂದೆ ಬಿಡುವಿಲ್ಲದ ಕ್ರಿಕೆಟ್ ವೇಳಾಪಟ್ಟಿ ಇರುವುದರಿಂದ (ಐರ್ಲೆಂಡ್, ಇಂಗ್ಲೆಂಡ್ ಪ್ರವಾಸಗಳು ಹಾಗೂ ಏಷ್ಯನ್ ಗೇಮ್ಸ್), ಮೂರನೇ ಮತ್ತು ನಾಮಕಾವಸ್ತೆ ಪಂದ್ಯದಲ್ಲಿ ಪ್ರಮುಖ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿ, ಬೆಂಚ್ ಕಾಯುತ್ತಿರುವ ಭಾರತದ ಯುವ ಪಡೆಗೆ ಸಂಪೂರ್ಣ ಅವಕಾಶ ನೀಡುವತ್ತ ಮ್ಯಾನೇಜ್ಮೆಂಟ್ ಗಮನಹರಿಸುವ ಸಾಧ್ಯತೆ ದಟ್ಟವಾಗಿದೆ.
ಇದನ್ನೂ ಓದಿ : ಟೀಮ್ ಇಂಡಿಯಾಗೆ ಭಾರಿ ಆಘಾತ : ವಿಶ್ವಕಪ್‌ನಿಂದ ಸ್ಟಾರ್ ಬೌಲರ್ ಶ್ರೇಯಾಂಕ ಪಾಟೀಲ್ ಔಟ್!



















