ಬೆಂಗಳೂರು : ದಕ್ಷಿಣ ಕೊರಿಯಾದ ಟೆಕ್ ದೈತ್ಯ ಸ್ಯಾಮ್‌ಸಂಗ್, ತನ್ನ ಮುಂಬರುವ ಬಹುನಿರೀಕ್ಷಿತ ‘ಗ್ಯಾಲಕ್ಸಿ ಎಸ್27’ (Samsung Galaxy S27) ಸರಣಿಯ ಸ್ಮಾರ್ಟ್‌ಫೋನ್‌ಗಳಲ್ಲಿ ಯಾವುದೇ ಪ್ರಮುಖ ಹಾರ್ಡ್‌ವೇರ್ ಬದಲಾವಣೆಗಳನ್ನು ಪರಿಚಯಿಸುವ ಸಾಧ್ಯತೆಯಿಲ್ಲ ಎಂಬ ಮಾಹಿತಿ ಹೊರಬಿದ್ದಿದೆ.
ಈ ವರ್ಷದ ಆರಂಭದಲ್ಲಿ ಬಿಡುಗಡೆಯಾಗಿದ್ದ ಗ್ಯಾಲಕ್ಸಿ ಎಸ್26 ಸ್ಮಾರ್ಟ್‌ಫೋನ್‌ಗಳಲ್ಲಿದ್ದ ಕ್ಯಾಮೆರಾ ಹಾಗೂ ಡಿಸ್‌ಪ್ಲೇ ತಂತ್ರಜ್ಞಾನವನ್ನೇ ಮುಂದಿನ ಪೀಳಿಗೆಯ ಎಸ್27 ಮಾಡೆಲ್‌ಗಳಲ್ಲಿಯೂ ಬಳಸಲು ಕಂಪನಿ ತೀರ್ಮಾನಿಸಿದೆ ಎನ್ನಲಾಗಿದೆ. ದಕ್ಷಿಣ ಕೊರಿಯಾದ ಟಿಪ್ಸ್‌ಟರ್ ಆಗಿರುವ ‘ಲ್ಯಾನ್ಜುಕ್’ (Lanzuk) ನೇವರ್ ಬ್ಲಾಗ್‌ನಲ್ಲಿ ಈ ಬಗ್ಗೆ ಸುಳಿವು ನೀಡಿದ್ದಾರೆ.
ಕ್ಯಾಮೆರಾ ವಿನ್ಯಾಸದಲ್ಲಿ ಬದಲಾವಣೆ ಇಲ್ಲ
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್22 ಸರಣಿಯಿಂದ ಈವರೆಗೂ ತನ್ನ ರೆಗ್ಯುಲರ್ ಮಾಡೆಲ್‌ಗಳಿಗೆ ಒಂದೇ ರೀತಿಯ ಕ್ಯಾಮೆರಾ ಸೆಟ್‌ಅಪ್ ಅನ್ನು ಬಳಸುತ್ತಾ ಬಂದಿದೆ. ಗ್ಯಾಲಕ್ಸಿ ಎಸ್26 ಸರಣಿಯಲ್ಲಿಯೂ 50 ಮೆಗಾಪಿಕ್ಸೆಲ್ ಪ್ರೈಮರಿ ಸೆನ್ಸರ್, 10 ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್ ಜೊತೆಗೆ 3x ಆಪ್ಟಿಕಲ್ ಜೂಮ್ ಹಾಗೂ 12 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ ಕ್ಯಾಮೆರಾಗಳನ್ನು ನೀಡಲಾಗಿತ್ತು. ಇದೀಗ ಎಸ್27 ಸರಣಿ ಕೂಡ ಇದೇ ಕ್ಯಾಮೆರಾ ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಲಿದ್ದು, ಸತತ ಆರನೇ ವರ್ಷವೂ ಒಂದೇ ಕ್ಯಾಮೆರಾ ಸೆಟ್‌ಅಪ್ ಅನ್ನು ಉಳಿಸಿಕೊಂಡಂತಾಗುತ್ತದೆ ಎಂದು ವರದಿ ಹೇಳಿದೆ. ಕ್ಯಾಮೆರಾಗಳಲ್ಲಿ ಕ್ರಾಂತಿಕಾರಿ ಬದಲಾವಣೆ ನಿರೀಕ್ಷಿಸಿದ್ದ ಛಾಯಾಗ್ರಹಣ ಪ್ರಿಯರಿಗೆ ಹಾಗೂ ಗ್ರಾಹಕರಿಗೆ ಇದು ಕೊಂಚ ಮಟ್ಟಿನ ನಿರಾಸೆಯನ್ನಂತೂ ತರುವುದರಲ್ಲಿ ಅನುಮಾನವಿಲ್ಲ.
ಕಡಿಮೆ ವೆಚ್ಚದ ಡಿಸ್‌ಪ್ಲೇ ಬಳಕೆ ಬಗ್ಗೆ ಒಲವು
ಕ್ಯಾಮೆರಾ ಜೊತೆಗೆ ಡಿಸ್‌ಪ್ಲೇ ವಿಷಯದಲ್ಲೂ ದೊಡ್ಡ ಬದಲಾವಣೆಗಳು ನಡೆಯುತ್ತಿಲ್ಲ ಎಂಬುದು ಸದ್ಯದ ಮಾಹಿತಿ. ಸ್ಮಾರ್ಟ್‌ಫೋನ್ ಉತ್ಪಾದನಾ ವೆಚ್ಚವನ್ನು ತಗ್ಗಿಸುವ ಉದ್ದೇಶದಿಂದ, ಸ್ಯಾಮ್‌ಸಂಗ್ ತನ್ನದೇ ಆದ ಸ್ಯಾಮ್‌ಸಂಗ್ ಡಿಸ್‌ಪ್ಲೇ ಪ್ಯಾನೆಲ್‌ಗಳನ್ನು ಬಳಸುವ ಬದಲು ಬಿಒಇ (BOE) ಸಂಸ್ಥೆಯ ಪ್ಯಾನೆಲ್‌ಗಳನ್ನು ಖರೀದಿಸಲು ಒಲವು ತೋರುತ್ತಿದೆ ಎಂದು ಹೇಳಲಾಗಿದೆ. 6.3-ಇಂಚಿನ ಡಿಸ್‌ಪ್ಲೇ ಜೊತೆಗೆ 120Hz ರಿಫ್ರೆಶ್ ರೇಟ್ ಬೆಂಬಲ ಇರುವ ಸಾಧ್ಯತೆಗಳಿವೆ. ಪೂರೈಕೆ ಸರಪಳಿಯಲ್ಲಿ ಡಿಸ್‌ಪ್ಲೇ ಸಂಬಂಧಿ ಯಾವುದೇ ದೊಡ್ಡ ಚಟುವಟಿಕೆಗಳು ಕಂಡುಬರದಿರುವುದು ಈ ವದಂತಿಗೆ ಪುಷ್ಟಿ ನೀಡಿದೆ.
ಪ್ರೊಸೆಸರ್ ಹಾಗೂ ಬ್ಯಾಟರಿಯ ನಿರೀಕ್ಷೆಗಳು
ಸ್ಮಾರ್ಟ್‌ಫೋನ್ ಹಾರ್ಡ್‌ವೇರ್ ಬದಲಾವಣೆಗಳನ್ನು ಹೊರತುಪಡಿಸಿ, ಮುಂಬರುವ ಎಸ್27 ಮಾಡೆಲ್‌ಗಳು ಸ್ಯಾಮ್‌ಸಂಗ್‌ನ ಹೊಚ್ಚಹೊಸ ಎಕ್ಸಿನಾಸ್ 2600 ಪ್ರೊಸೆಸರ್ ಜೊತೆಗೆ ಕೆಲಸ ಮಾಡುವ ನಿರೀಕ್ಷೆಯಿದೆ. ಈ ಫೋನ್ ಇತ್ತೀಚೆಗೆ ‘GSMA’ ಡೇಟಾಬೇಸ್‌ನಲ್ಲಿ SM-S952U ಮಾಡೆಲ್ ನಂಬರ್‌ನೊಂದಿಗೆ ಕಾಣಿಸಿಕೊಂಡಿದ್ದು, ಇದು ಆಂಡ್ರಾಯ್ಡ್ 17 ಆಧಾರಿತ One UI 9.0 ನೊಂದಿಗೆ ಬರಲಿದೆ. ಇನ್ನು ಬ್ಯಾಟರಿ ವಿಭಾಗದಲ್ಲಿ 4,300mAh ಸಾಮರ್ಥ್ಯದ ಬ್ಯಾಟರಿ ಜೊತೆಗೆ 25W ವೈರ್ಡ್ ಫಾಸ್ಟ್ ಚಾರ್ಜಿಂಗ್ ಮತ್ತು 20W ವೈರ್‌ಲೆಸ್ ಚಾರ್ಜಿಂಗ್ ಬೆಂಬಲವಿರಲಿದೆ. ಮುಂಬರುವ ವರ್ಷದ ಆರಂಭದಲ್ಲಿ ಗ್ಯಾಲಕ್ಸಿ ಎಸ್27 ಸರಣಿಯು, ಎಸ್27 ಪ್ಲಸ್, ಪ್ರೊ ಹಾಗೂ ಅಲ್ಟ್ರಾ ಮಾಡೆಲ್‌ಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡುವ ಸಾಧ್ಯತೆಗಳಿವೆ.
ಇದನ್ನೂ ಓದಿ : ಕಾಂಪ್ಯಾಕ್ಟ್ SUV ವಿಭಾಗದಲ್ಲಿ ಹೊಸ ಸಂಚಲನ : ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾದ ‘ಮಹೀಂದ್ರಾ ವಿಷನ್ S’



















