ನವದೆಹಲಿ: ವಿಮಾನ ಪ್ರಯಾಣದ ವೇಳೆ ಸೌಂದರ್ಯವರ್ಧಕ ಸಾಧನಗಳನ್ನು ಬಹುತೇಕ ಮಂದಿ ಒಯ್ಯುತ್ತಾರೆ. ಅದು ಹಲವರಿಗೆ ಅತ್ಯಗತ್ಯ ವಸ್ತುವೂ ಹೌದು. ಆದರೆ, ರೇಜರ್‌ಗಳು ಮತ್ತು ಟ್ವೀಜರ್‌ಗಳಂತಹ ಚೂಪಾದ ವಸ್ತುಗಳನ್ನು ಹ್ಯಾಂಡ್ ಲಗೇಜ್ ಅಥವಾ ಕ್ಯಾಬಿನ್ ಬ್ಯಾಗ್‌ನಲ್ಲಿ ಕೊಂಡೊಯ್ಯಬಹುದೇ ಎಂಬ ಗೊಂದಲ ಅನೇಕ ಪ್ರಯಾಣಿಕರಲ್ಲಿರುತ್ತದೆ. ಇದಕ್ಕೆ ಸಂಬಂಧಿಸಿದಂತೆ ವಿಮಾನಯಾನ ಸುರಕ್ಷತಾ ನಿಯಮಗಳು ಇಲ್ಲಿವೆ.
ಟ್ವೀಜರ್‌ಗಳನ್ನು ಕೊಂಡೊಯ್ಯಬಹುದೇ?
ಹೌದು, ಹುಬ್ಬುಗಳನ್ನು ತಿದ್ದಲು ಬಳಸುವ ಚಿಮುಟ ಅಥವಾ ಟ್ವೀಜರ್‌ಗಳನ್ನು ಕ್ಯಾಬಿನ್ ಬ್ಯಾಗ್ ಹಾಗೂ ಚೆಕ್-ಇನ್ ಲಗೇಜ್ ಎರಡರಲ್ಲೂ ಕೊಂಡೊಯ್ಯಲು ಏರ್ ಇಂಡಿಯಾ ಸೇರಿದಂತೆ ಹಲವು ವಿಮಾನಯಾನ ಸಂಸ್ಥೆಗಳು ಅನುಮತಿ ನೀಡುತ್ತವೆ. ಇವು ಚೂಪಾದ ವಸ್ತುಗಳ ಪಟ್ಟಿಯಲ್ಲಿ ಬಂದರೂ, ಪ್ರಯಾಣಕ್ಕೆ ಅಪಾಯಕಾರಿಯಲ್ಲದ ವಸ್ತುಗಳೆಂದು ಪರಿಗಣಿಸಲಾಗಿದೆ.
ರೇಜರ್‌ಗಳ ಬಗೆಗಿನ ನಿಯಮವೇನು?
ರೇಜರ್‌ಗಳ ವಿಷಯದಲ್ಲಿ ನಿಯಮಗಳು ಸ್ವಲ್ಪ ಭಿನ್ನವಾಗಿವೆ:
ಡಿಸ್ಪೋಸಬಲ್ ಮತ್ತು ಸೇಫ್ಟಿ ರೇಜರ್: ಬ್ಲೇಡ್‌ಗಳು ಕಾರ್ಟ್ರಿಡ್ಜ್ ಒಳಗೆ ಸುರಕ್ಷಿತವಾಗಿ ಜೋಡಿಸಲ್ಪಟ್ಟಿರುವ ‘ಡಿಸ್ಪೋಸೇಬಲ್ ರೇಜರ್’ ಮತ್ತು ‘ಸೇಫ್ಟಿ ರೇಜರ್’ಗಳನ್ನು ಹ್ಯಾಂಡ್ ಲಗೇಜ್‌ನಲ್ಲಿ ಕೊಂಡೊಯ್ಯಬಹುದು. ಇವುಗಳಿಂದ ಅಪಾಯ ಕಡಿಮೆ ಎಂಬುದು ಇದರ ಹಿಂದಿನ ಕಾರಣ.
ಬಿಡಿ ಬ್ಲೇಡ್‌ಗಳು (Loose Blades): ಕಾರ್ಟ್ರಿಡ್ಜ್ ಇಲ್ಲದ ಬಿಡಿ ಬ್ಲೇಡ್‌ಗಳು ಅಥವಾ ರೇಜರ್ ಬ್ಲೇಡ್‌ಗಳನ್ನು ಹ್ಯಾಂಡ್ ಲಗೇಜ್‌ನಲ್ಲಿ ಕೊಂಡೊಯ್ಯುವಂತಿಲ್ಲ. ಇವುಗಳನ್ನು ಚೆಕ್-ಇನ್ ಲಗೇಜ್‌ನಲ್ಲಿ ಮಾತ್ರ ಇಡಬೇಕು.
ಮಹಿಳೆಯರ ಫೇಸ್ ರೇಜರ್: ಪ್ಲಾಸ್ಟಿಕ್ ಮೌಲ್ಡ್‌ನಲ್ಲಿ ಬ್ಲೇಡ್ ಫಿಕ್ಸ್ ಆಗಿರುವ ಮುಖದ ರೇಜರ್‌ಗಳನ್ನು (Face Razors) ಹ್ಯಾಂಡ್ ಲಗೇಜ್‌ನಲ್ಲಿ ಕೊಂಡೊಯ್ಯಬಹುದು.
ಎಲೆಕ್ಟ್ರಿಕ್ ಶೇವರ್‌ಗಳು
ಎಲೆಕ್ಟ್ರಿಕ್ ಶೇವರ್ ಮತ್ತು ಟ್ರಿಮ್ಮರ್‌ಗಳನ್ನು ಹ್ಯಾಂಡ್ ಲಗೇಜ್‌ನಲ್ಲಿ ಕೊಂಡೊಯ್ಯುವುದು ಕಡ್ಡಾಯ. ಇವುಗಳಲ್ಲಿ ಬ್ಯಾಟರಿ ಇರುವುದರಿಂದ, ಚೆಕ್-ಇನ್ ಲಗೇಜ್‌ನಲ್ಲಿ ಇಟ್ಟರೆ ವಿಮಾನದ ಕಾರ್ಗೋ ವಿಭಾಗದಲ್ಲಿ ಬೆಂಕಿ ಅನಾಹುತ ಸಂಭವಿಸುವ ಸಾಧ್ಯತೆ ಇರುತ್ತದೆ. ಹೀಗಾಗಿ, ಲ್ಯಾಪ್‌ಟಾಪ್ ಮತ್ತು ಪವರ್ ಬ್ಯಾಂಕ್‌ಗಳಂತೆಯೇ ಇವುಗಳನ್ನು ಕ್ಯಾಬಿನ್ ಬ್ಯಾಗ್‌ನಲ್ಲೇ ಇಟ್ಟುಕೊಳ್ಳಬೇಕು.
ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆ ವೇಳೆ ಗೊಂದಲ ತಪ್ಪಿಸಲು, ರೇಜರ್ ಮತ್ತು ಇತರೆ ಸಣ್ಣಪುಟ್ಟ ಗ್ರೂಮಿಂಗ್ ವಸ್ತುಗಳನ್ನು ಪಾರದರ್ಶಕ ಪ್ಲಾಸ್ಟಿಕ್ ಚೀಲದಲ್ಲಿ (Transparent Pouch) ಇಟ್ಟುಕೊಳ್ಳುವುದು ಉತ್ತಮ. ಅಲ್ಲದೆ, ಅಂತರರಾಷ್ಟ್ರೀಯ ಪ್ರಯಾಣದ ವೇಳೆ ಆಯಾ ದೇಶದ ಮತ್ತು ವಿಮಾನಯಾನ ಸಂಸ್ಥೆಯ ನಿಯಮಗಳನ್ನು ಮುಂಚಿತವಾಗಿ ಪರಿಶೀಲಿಸುವುದು ಸೂಕ್ತ.
ಇದನ್ನೂ ಓದಿ: ವಿಕ್ರಮ್-I ಎಂದರೇನು? ಪ್ರಧಾನಿ ಮೋದಿ ಅನಾವರಣಗೊಳಿಸಿದ ಭಾರತದ ಮೊದಲ ಖಾಸಗಿ ಬಾಹ್ಯಾಕಾಶ ರಾಕೆಟ್



















