ಅಹಮದಾಬಾದ್ : ಗುಜರಾತ್‌ನ ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಲಿವುಡ್ ಕ್ರೈಮ್ ಥ್ರಿಲ್ಲರ್ ಸಿನಿಮಾವನ್ನು ಹೋಲಿಸುವಂತಹ ರೋಚಕ ದರೋಡೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಅಹಮದಾಬಾದ್‌ನಿಂದ ಬೆಂಗಳೂರಿಗೆ ಸರಕು ಸಾಗಣೆ ವಿಮಾನದ ಮೂಲಕ ಸಾಗಣೆಯಾಗಬೇಕಿದ್ದ ಬರೋಬ್ಬರಿ 2.58 ಕೋಟಿ ರೂ. ಮೌಲ್ಯದ ಚಿನ್ನದ ಆಭರಣಗಳನ್ನು ವಿಮಾನ ನಿಲ್ದಾಣ ಹಾಗೂ ಏರ್‌ಲೈನ್ಸ್ ಸಿಬ್ಬಂದಿಯೇ ಸೇರಿ ಅತ್ಯಂತ ವ್ಯವಸ್ಥಿತವಾಗಿ ಲೂಟಿ ಮಾಡಿದ್ದಾರೆ. ಈ ಹೈಟೆಕ್ ದರೋಡೆಗೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೆ 8 ಮಂದಿ ಆರೋಪಿಗಳನ್ನು ಬಂಧಿಸಿದ್ದು, ಕೋಟ್ಯಂತರ ರೂಪಾಯಿ ನಗದು ಮತ್ತು ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಬೆಂಗಳೂರು ತಲುಪದ ಟೈಟನ್ ಕಂಪನಿಯ ಚಿನ್ನ
ಪ್ರಸಿದ್ಧ ‘ಟೈಟನ್’ ಕಂಪನಿಗಾಗಿ ತಯಾರಿಸಲಾಗಿದ್ದ ಸುಮಾರು 2.1 ಕೆಜಿ ತೂಕದ ಚಿನ್ನಾಭರಣಗಳಿದ್ದ ಒಟ್ಟು ಏಳು ಪಾರ್ಸೆಲ್‌ಗಳನ್ನು ಕಳೆದ ಏ.18ರಂದು ಅಕಾಸಾ ಏರ್ ಕಾರ್ಗೋ ಸೇವೆ ಮೂಲಕ ಅಹಮದಾಬಾದ್‌ನಿಂದ ಬೆಂಗಳೂರಿಗೆ ಕಳುಹಿಸಲು ಬುಕ್ ಮಾಡಲಾಗಿತ್ತು. ಆದರೆ, ಬೆಂಗಳೂರಿನಲ್ಲಿ ವಿಮಾನ ಇಳಿದಾಗ ಸುಮಾರು 13 ಕೆಜಿ ತೂಕದ ಒಂದು ಪ್ರಮುಖ ಪಾರ್ಸೆಲ್ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಈ ಕುರಿತು ತನಿಖೆ ಕೈಗೆತ್ತಿಕೊಂಡ ಪೊಲೀಸರು ವಿಮಾನ ನಿಲ್ದಾಣದ ಸುರಕ್ಷತಾ ವಲಯದಲ್ಲೇ ನಡೆದಿದ್ದ ದಗಾಬಾಜಿತನವನ್ನು ಕಂಡು ಬೆಚ್ಚಿಬಿದ್ದಿದ್ದಾರೆ.
ಏರ್‌ಲೈನ್ ಸಿಬ್ಬಂದಿಯೇ ಮಾಸ್ಟರ್ ಮೈಂಡ್ಸ್
ಡೆಪ್ಯುಟಿ ಕಮಿಷನರ್ ಆಫ್ ಪೊಲೀಸ್ ಅತುಲ್ ಬನ್ಸಾಲ್ ಅವರ ಪ್ರಕಾರ, ಈ ಇಡೀ ದರೋಡೆಯ ಹಿಂದಿನ ಮಾಸ್ಟರ್ ಮೈಂಡ್ ಅಕಾಸಾ ಏರ್ಲೈನ್ಸ್ ಸಂಸ್ಥೆಯ ಕ್ಲೀನಿಂಗ್ ಇನ್‌ಚಾರ್ಜ್ ರೋಷನ್ ಪಟೇಲ್ ಮತ್ತು ಅದೇ ಸಂಸ್ಥೆಯ ಸೆಕ್ಯೂರಿಟಿ ಇನ್‌ಚಾರ್ಜ್ ಜೈದ್ ಹಸನ್ ಅನ್ಸಾರಿ ಆಗಿದ್ದಾರೆ. ವಿಮಾನ ನಿಲ್ದಾಣದ ಅತಿ ಹೆಚ್ಚು ಭದ್ರತೆ ಇರುವ ವಲಯದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳು ಮತ್ತು ಸಿಬ್ಬಂದಿಯ ಮೈಮೇಲಿರುವ ಬಾಡಿ ಕ್ಯಾಮೆರಾಗಳ ಕಣ್ಣು ತಪ್ಪಿಸಿ ಚಿನ್ನವನ್ನು ಹೊರಸಾಗಿಸಲು ಈ ಇಬ್ಬರು ಸ್ಕೆಚ್ ಹಾಕಿದ್ದರು. ಇವರಿಗೆ ಜುನಾಗಢ್ ನಿವಾಸಿ ಸುಲ್ತಾನ್ ಸಾಮ ಎಂಬಾತ ಸಾಥ್ ನೀಡಿದ್ದ.
ಬಾಲಿವುಡ್ ಸಿನಿಮಾದಂತಹ ದರೋಡೆ ತಂತ್ರ
ಈ ಜಾಲವು ವಿಮಾನ ನಿಲ್ದಾಣದ ಭದ್ರತಾ ತಪಾಸಣೆಯನ್ನು ದಾಟಲು ಒಂದು ವಿಶಿಷ್ಟ ತಂತ್ರ ಹೂಡಿತ್ತು. ಆರೋಪಿಗಳಲ್ಲೊಬ್ಬನಾದ ಸಲೀಂ ಮೊಹಮ್ಮದ್ ಅನ್ಸಾರಿ, ಸಾಮಾನ್ಯ ಪ್ರಯಾಣಿಕನ ಸೋಗಿನಲ್ಲಿ ಅದೇ ಬೆಂಗಳೂರು ವಿಮಾನದ ಟಿಕೆಟ್ ಬುಕ್ ಮಾಡಿ ವಿಮಾನ ನಿಲ್ದಾಣದ ಒಳಗೆ ಪ್ರವೇಶಿಸಿದ್ದ. ಕಾರ್ಗೋ ಪಾರ್ಸೆಲ್‌ಗಳನ್ನು ವಿಮಾನದ ಸರಕು ಸಾಗಣೆ ವಿಭಾಗಕ್ಕೆ ಸಾಗಿಸುವಾಗ, ಲೋಡರ್ ಜಯೇಶ್ ಪರ್ಮಾರ್ ಎಂಬಾತನ ಸಹಾಯದಿಂದ ಚಿನ್ನವಿದ್ದ ಪಾರ್ಸೆಲ್ ಅನ್ನು ಮಾತ್ರ ಪ್ರತ್ಯೇಕಿಸಿ ಟ್ರಾಲಿಯಲ್ಲಿ ಬಚ್ಚಿಡಲಾಗಿತ್ತು. ನಂತರ ಈ ಚಿನ್ನವನ್ನು ಪ್ರಯಾಣಿಕನ ಸೋಗಿನಲ್ಲಿದ್ದ ಸಲೀಂಗೆ ಹಸ್ತಾಂತರಿಸಲಾಯಿತು. ವಿಮಾನ ನಿಲ್ದಾಣದ ಸಿಬ್ಬಂದಿಯೇ ಇದರಲ್ಲಿ ಭಾಗಿಯಾಗಿದ್ದರಿಂದ ಯಾವುದೇ ಕಟ್ಟುನಿಟ್ಟಿನ ತಪಾಸಣೆ ಇಲ್ಲದೆ ಚಿನ್ನವು ಸುಲಭವಾಗಿ ನಿಲ್ದಾಣದಿಂದ ಹೊರಹೋಗಿತ್ತು.
ಚಿನ್ನ ಕರಗಿಸಿ ಮಾರಾಟ:
ದರೋಡೆಯ ನಂತರ ಆರೋಪಿಗಳು ಚಿನ್ನವನ್ನು ಕರಗಿಸಿ ಅಹಮದಾಬಾದ್ ಮತ್ತು ರಾಜ್‌ಕೋಟ್‌ನ ವಿವಿಧ ಜ್ಯುವೆಲ್ಲರಿ ಅಂಗಡಿಗಳಲ್ಲಿ ಮಾರಾಟ ಮಾಡಿದ್ದರು. ಸದ್ಯ ಪೊಲೀಸರು ಚಿನ್ನ ಖರೀದಿಸಿದ ವ್ಯಾಪಾರಿಗಳು ಸೇರಿದಂತೆ ಎಂಟು ಜನರನ್ನು ಬಂಧಿಸಿದ್ದು, ಇನ್ನೂ ನಾಲ್ವರು ತಲೆಮರೆಸಿಕೊಂಡಿದ್ದಾರೆ. ಬಂಧಿತರಿಂದ ಒಟ್ಟು 69.24 ಲಕ್ಷ ರೂ.ನಗದು ಮತ್ತು 1.02 ಕೋಟಿ ರೂ. ಮೌಲ್ಯದ ಚಿನ್ನದ ಆಭರಣಗಳನ್ನು ಒಳಗೊಂಡಂತೆ ಒಟ್ಟು 1.72 ಕೋಟಿ ರೂ.ಗೂ ಅಧಿಕ ಮೌಲ್ಯದ ಸ್ವತ್ತನ್ನು ಜಪ್ತಿ ಮಾಡಲಾಗಿದೆ. ಲೂಟಿ ಮಾಡಿದ ಚಿನ್ನದ ಅತಿ ದೊಡ್ಡ ಪಾಲು ಸೆಕ್ಯೂರಿಟಿ ಇನ್‌ಚಾರ್ಜ್ ಜೈದ್ ಅನ್ಸಾರಿಗೆ ಸಂದಾಯವಾಗಿತ್ತು ಎಂದು ತಿಳಿದುಬಂದಿದೆ. ಇದಕ್ಕೂ ಮುನ್ನ ಮಾರ್ಚ್ ತಿಂಗಳಿನಲ್ಲಿ ಮೂರು ಬಾರಿ ಇದೇ ರೀತಿ ಕಳ್ಳತನಕ್ಕೆ ಯತ್ನಿಸಿ ವಿಫಲವಾಗಿದ್ದಾಗಿ ಆರೋಪಿಗಳು ಒಪ್ಪಿಕೊಂಡಿದ್ದು, ತನಿಖೆ ಮುಂದುವರಿದಿದೆ.
ಇದನ್ನೂ ಓದಿ : ತ್ವಿಷಾ ಸಾವಿನ ಬೆನ್ನಲ್ಲೇ ಸಿಸಿಟಿವಿ ಸಿಬ್ಬಂದಿಗೆ ಕರೆ, ಸಂತಾಪದ ನೆಪ : ನಿವೃತ್ತ ನ್ಯಾಯಾಧೀಶೆಗೆ ಬಿಗಿಗೊಂಡ ಪೊಲೀಸ್ ಉರುಳು!



















