ಬೆಂಗಳೂರು : ಶಿಡ್ಲಘಟ್ಟ ಕಾಂಗ್ರೆಸ್ ಮುಖಂಡ ಪೌರಾಯುಕ್ತೆಗೆ ಧಮ್ಕಿ ಹಾಕಿದ ಪ್ರಕರಣ ರಾಜ್ಯದಲ್ಲಿ ಭಾರೀ ಸುದ್ದಿ ಮಾಡಿತ್ತು. ಇದೀಗ ಅಂತಹದ್ದೇ ಘಟನೆಯೊಂದು ಮರುಕಳಿಸಿದೆ. ಯಲಹಂಕ ಬಿಜೆಪಿ ಮುಖಂಡ ಸತೀಶ್ ಕಡತನಮಲೆ ಎಂಬುವವರು ಸರ್ಕಾರಿ ಕಚೇರಿಗೆ ನುಗ್ಗಿ ಅಧಿಕಾರಿಗೆ ಧಮ್ಕಿ ಹಾಕಿದ ಆರೋಪ ಕೇಳಿಬಂದಿದೆ.
ಈ ಸಂಬಂಧ ಸತೀಶ್ ವಿರುದ್ಧ ಪೊಲೀಸ್ ಠಾಣೆಗೆ ದೂರು ಸಹ ನೀಡಲಾಗಿದೆ. ಮಲ್ಲೇಶ್ವರಂನ ಸಹಕಾರ ಸಂಘ ಕಚೇರಿಗೆ ನುಗ್ಗಿ ದಾಂಧಲೆ ನಡೆಸಿದ ಬಿಜೆಪಿ ಮುಖಂಡ ಸತೀಶ್, ಸಿಬ್ಬಂದಿಗೆ ಧಮ್ಕಿ ಹಾಕಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಸಹಾಯಕ ನಿಬಂಧಕ ಪ್ರಕಾಶ್ ರಾವ್ ಅವರ ಕಚೇರಿ ಸಿಬ್ಬಂದಿಗೆ ಅವ್ಯಾಚ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾಗಿದೆ.
ಸರ್ಕಾರಿ ಅಧಿಕಾರಿ ಕಚೇರಿಯ ಸಿಬ್ಬಂದಿಗೆ ಬಿಜೆಪಿ ಮುಖಂಡ ಸತೀಶ್ ಅವರು ಕೆಟ್ಟ ಪದಗಳಿಂದ ನಿಂದಿಸಿದ್ದಾರೆ ಎನ್ನುವ ಆರೋಪವಿದ್ದು, ಕಚೇರಿಗೆ ನುಗ್ಗಿ ಗಲಾಟೆ ಮಾಡಿದ ದೃಶ್ಯಗಳು ಕೂಡ ಸಿಸಿಟಿವಿ ಹಾಗೂ ಮೊಬೈಲ್ನಲ್ಲಿ ಸೆರೆಯಾಗಿದೆ. ಈ ಬಗ್ಗೆ ಮಲ್ಲೇಶ್ವರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇತ್ತೀಚಿಗಷ್ಟೇ ಸತೀಶ್, ಹಾಲು ಉತ್ಪಾದಕರ ಸಂಘದ ನಿರ್ದೇಶಕ ಸ್ಥಾನದಿಂದ ಅನರ್ಹಗೊಂಡಿದ್ದರು. ಸದಸ್ಯತ್ವ ಸ್ಥಾನದಿಂದ ಅನರ್ಹಗೊಂಡ ಹಿನ್ನೆಲೆಯಲ್ಲಿ ಧಮ್ಕಿ ಹಾಕಿದ ಆರೋಪ ಕೇಳಿ ಬಂದಿದೆ. ಸದ್ಯ ಸಹಾಯಕ ನಿಬಂಧಕ ಪ್ರಕಾಶ್ ರಾವ್ ಅವರು ನೀಡಿದ ದೂರಿನ ಮೇಲೆ ಸತೀಶ್ ಕಡತನಮಲೆ ಮೇಲೆ ಕೇಸ್ ದಾಖಲಿಸಿ ಮಲ್ಲೇಶ್ವರಂ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಚಾಲಕನ ನಿಯಂತ್ರಣ ತಪ್ಪಿ ಗದ್ದೆಗೆ ಪಲ್ಟಿ ಹೊಡೆದ ಲಾರಿ!


















