ಬೆಂಗಳೂರು : ನಟಿ, ಬಿಗ್‌ಬಾಸ್ ಕನ್ನಡ ಸೀಸನ್ 8ರ ಸ್ಪರ್ಧಿ ದಿವ್ಯಾ ಸುರೇಶ್ ಅವರಿಗೆ ಭಾನುವಾರ ತಡರಾತ್ರಿ ನಗರದ ಕನಕಪುರ ರಸ್ತೆಯಲ್ಲಿ ಕೆಟ್ಟ ಅನುಭವವಾಗಿದೆ. ಈ ಕುರಿತ ವೀಡಿಯೋವನ್ನು ನಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಮಹಿಳೆಯರಿಗೆ ಬೆಂಗಳೂರು ಎಷ್ಟು ಸುರಕ್ಷಿತ ಎಂದು ಪ್ರಶ್ನೆ ಎತ್ತಿದ್ದಾರೆ. ಜೊತೆಗೆ ಬೆಂಗಳೂರು ಪೊಲೀಸರನ್ನು ಟ್ಯಾಗ್ ಮಾಡಿ ಇನ್‌ಸ್ಟಾಗ್ರಾಮ್‌ನಲ್ಲಿ ಸ್ಟೋರಿ ಹಾಕಿದ್ದಾರೆ.
ಆಗಿದ್ದೇನು?
ಭಾನುವಾರ ರಾತ್ರಿ ಸುಮಾರು 11:30ರ ವೇಳೆಗೆ ದಿವ್ಯಾ ಸುರೇಶ್ ತಮ್ಮ ತಂಗಿ ಜೊತೆ ರಸ್ತೆಯಲ್ಲಿ ನಡೆದುಕೊಂಡು ಕಾರಿನತ್ತ ಹೋಗುತ್ತಿದ್ದರು. ಈ ವೇಳೆ ವಿಕೃತ ಯುವಕನೊಬ್ಬ ಅವರನ್ನೇ ಹಿಂಬಾಲಿಸಲು ಆರಂಭಿಸಿದ್ದಾನೆ. ಅಷ್ಟೇ ಅಲ್ಲದೆ, ಅವರ ಎದುರಲ್ಲೇ ಅಸಭ್ಯವಾಗಿ ತನ್ನ ಖಾಸಗಿ ಅಂಗಗಳನ್ನು ಮುಟ್ಟಿಕೊಳ್ಳುತ್ತಾ ಅಸಭ್ಯವಾಗಿ ವರ್ತಿಸಿದ್ದಾನೆ.

ಇದರಿಂದ ಆತಂಕಕ್ಕೆ ಒಳಗಾದ ನಟಿ ಮತ್ತು ಅವರ ತಂಗಿ ತಕ್ಷಣವೇ ಓಡಿ ಹೋಗಿ ಕಾರಿನೊಳಗೆ ಕುಳಿತು ಡೋರ್ ಲಾಕ್ ಮಾಡಿಕೊಂಡಿದ್ದಾರೆ. ಆದರೆ, ಕಾರಿನ ಗಾಜು ಹಾಕಿದ್ದರೂ ಸಹ ಆ ಕಾಮುಕ ಕಾರಿನ ಬಳಿಯೇ ನಿಂತು ತನ್ನ ನೀಚತನವನ್ನು ಮುಂದುವರಿಸಿದ್ದಾನೆ. ಈ ವೇಳೆ ಆ ರಸ್ತೆಯಲ್ಲಿ ಬಂದ ಬೈಕ್ ಸವಾರನೊಬ್ಬ ಆತನನ್ನು ತರಾಟೆಗೆ ತೆಗೆದುಕೊಂಡು ಬೈದರೂ, ಆತ ಮಾತ್ರ ತನ್ನ ವಿಕೃತ ಚಾಳಿಯನ್ನು ನಿಲ್ಲಿಸಿಲ್ಲ.
ಈ ಇಡೀ ಘಟನೆಯ ವಿಡಿಯೋ ತುಣುಕನ್ನು ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ದಿವ್ಯಾ ಸುರೇಶ್, “ಮಹಿಳೆಯರು ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ಕೀಳು ಮಟ್ಟದ ಅನುಭವಗಳನ್ನು ಎದುರಿಸಬೇಕಾಗಿರುವುದು ನಿಜಕ್ಕೂ ದುಃಖಕರ ಸಂಗತಿ” ಎಂದು ಬೇಸರ ಹೊರಹಾಕಿದ್ದಾರೆ.
ಆರೋಪಿಯ ಮುಖ ಸ್ಪಷ್ಟವಾಗಿ ಕಾಣುವ ವಿಡಿಯೋವನ್ನು ಪೋಸ್ಟ್ ಮಾಡಿರುವ ನಟಿ, ಬೆಂಗಳೂರು ಸಿಟಿ ಪೊಲೀಸ್ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯನ್ನು ಟ್ಯಾಗ್ ಮಾಡಿದ್ದಾರೆ. ಮಹಿಳೆಯರಿಗೆ ರಕ್ಷಣೆ ಇಲ್ಲದಂತೆ ಮಾಡುತ್ತಿರುವ ಇಂತಹ ವಿಕೃತ ಮನಸ್ಸಿನ ಆರೋಪಿಯನ್ನು ತಕ್ಷಣವೇ ಬಂಧಿಸಿ, ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ – 21 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ.. ಮೂವರು ವಿದೇಶಿಗರ ಬಂಧನ!



















