ಬೆಂಗಳೂರು : ಜನರು ಸಾರ್ವಜನಿಕ ವಲಯದ ಅಂದರೆ, ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಲ್ಲಿ ಹಣ ಠೇವಣಿ ಇರಿಸುವುದು, ಹೂಡಿಕೆ ಮಾಡುವುದು (ಎಫ್ ಡಿ, ಪಿಪಿಎಫ್ ಇತ್ಯಾದಿ) ಯಾವಾಗಲೂ ಸುರಕ್ಷಿತ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಕಳೆದ ಎಂಟು ವರ್ಷಗಳಲ್ಲಿಯೇ ಬ್ಯಾಂಕ್ ಆಫ್ ಬರೋಡಾ ಸೇರಿ ಹಲವು ಬ್ಯಾಂಕ್ ಗಳ ರೈಟ್ ಆಫ್ (Write-Off- ವಸೂಲಾಗದ ಸಾಲವನ್ನು ಬ್ಯಾಲೆನ್ಸ್ ಶೀಟ್ ನಿಂದ ತೆಗೆದುಹಾಕುವುದು ಅಥವಾ ಮರೆಮಾಚುವುದು) ಪ್ರಮಾಣವು ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಇದರಿಂದಾಗಿ ಸಾರ್ವಜನಿಕರ ಹಣವು ಇನ್ನಷ್ಟು ಸುರಕ್ಷಿತ ಎನಿಸಿದೆ.
ಬ್ಯಾಂಕ್ ಆಫ್ ಬರೋಡಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಇಂಡಿಯನ್ ಓವರ್ಸೀಸ್ ಬ್ಯಾಂಕ್ ಹಾಗೂ ಇಂಡಿಯನ್ ಬ್ಯಾಂಕ್ ಗಳ ರೈಟ್ ಆಫ್ ಪ್ರಮಾಣವು 8 ವರ್ಷಗಳಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಅಂದರೆ, ಬ್ಯಾಂಕುಗಳು ಉದ್ಯಮಿಗಳಿಗೆ ನೀಡಿರುವ ಸಾಲವನ್ನು ವಸೂಲಿ ಮಾಡುತ್ತಿವೆ ಹಾಗೂ ಕಡಿಮೆ ಪ್ರಮಾಣದಲ್ಲಿ ಮಾತ್ರ ರೈಟ್ ಆಫ್ ಮಾಡುತ್ತಿವೆ ಎಂಬುದು ಬೆಳವಣಿಗೆಯ ಅರ್ಥ.
ಹೀಗೆ, ಬ್ಯಾಂಕ್ ಗಳ ರೈಟ್ ಆಫ್ ಪ್ರಮಾಣವು ಕಡಿಮೆಯಾಗಿದೆ ಎಂದರೆ ಸಾರ್ವಜನಿಕರಿಗೆ ಹಲವು ರೀತಿಯಲ್ಲಿ ಲಾಭವಾಗುತ್ತದೆ. ಮೊದಲನೆಯದಾಗಿ, ಬ್ಯಾಂಕುಗಳು ಉದ್ಯಮಿಗಳಿಗೆ ನೀಡಿದ ಸಾಲವು ವಸೂಲಾಗುತ್ತಿದೆ ಎಂದು ಅರ್ಥ. ಹಾಗೆಯೇ, ಬೇಕಾಬಿಟ್ಟಿಯಾಗಿ ಸಾಲ ನೀಡುತ್ತಿಲ್ಲ ಎಂಬುದೂ ತಿಳಿಯುತ್ತದೆ. ಇದರಿಂದಾಗಿ ಈ ಬ್ಯಾಂಕ್ ಗಳಲ್ಲಿ ಜನ ಹೂಡಿಕೆ ಮಾಡಿದರೆ, ಠೇವಣಿ ಇಟ್ಟರೆ, ಅವರ ಹಣವು ಸುರಕ್ಷಿತವಾಗಿರುತ್ತದೆ ಎಂಬುದೇ ಪ್ರಮುಖ ಲೆಕ್ಕಾಚಾರ.
ಸಾಲ ವಸೂಲಾತಿ ಹೆಚ್ಚಾಗಿ, ಬೇಕಾಬಿಟ್ಟಿಯಾಗಿ ಸಾಲ ನೀಡುತ್ತಿಲ್ಲ ಎಂದಾದರೆ, ಆ ಬ್ಯಾಂಕುಗಳು ಆರ್ಥಿಕವಾಗಿ ಸೃದೃಢವಾಗುತ್ತಿವೆ. ಮುಂದಿನ ದಿನಗಳಲ್ಲಿ ಅವು ಎಂದಿಗೂ ದಿವಾಳಿಯಾಗುವುದಿಲ್ಲ. ಇದರಿಂದಾಗಿ, ಸಾರ್ವಜನಿಕರು ಯಾವುದೇ ಹಿಂಜರಿಕೆ ಇಲ್ಲದೆ ಇಂತಹ ಬ್ಯಾಂಕ್ ಗಳಲ್ಲಿ ಠೇವಣಿ ಇರಿಸಬಹುದು ಹಾಗೂ ಹೂಡಿಕೆ ಮಾಡಬಹುದಾಗಿದೆ. ಅಷ್ಟಕ್ಕೂ, ರೈಟ್ ಆಫ್ ಎಂದರೆ ಸಾಲ ಮನ್ನಾ ಅಲ್ಲ. ಬ್ಯಾಲೆನ್ಸ್ ಶೀಟ್ ನಿಂದ ವಸೂಲಾಗದ ಸಾಲವನ್ನು ತೆಗೆದುಹಾಕಲಾಗುತ್ತದೆ. ಹಾಗೆಯೇ, ಸಾಲ ವಸೂಲಾತಿ ಪ್ರಕ್ರಿಯೆ ಮುಂದುವರಿದಿರುತ್ತದೆ.
ಇದನ್ನೂ ಓದಿ : ಇಂದು ಜೂ.NTRಗೆ ಹುಟ್ಟುಹಬ್ಬದ ಸಂಭ್ರಮ – ಬಹುನಿರೀಕ್ಷಿತ ‘ಡ್ರ್ಯಾಗನ್’ ಫಸ್ಟ್ ಗ್ಲಿಂಪ್ಸ್ ಔಟ್!


















