ಬೆಂಗಳೂರು : ಷೇರು ಮಾರುಕಟ್ಟೆಯಲ್ಲಿ ಭಾರಿ ಏರಿಳಿತ ಮುಂದುವರಿದಿದೆ. ಪ್ರಧಾನಿ ನರೇಂದ್ರ ಮೋದಿ ಅವರಂತೂ ಒಂದು ವರ್ಷದವರೆಗೆ ಚಿನ್ನ ಖರೀದಿಸಬೇಡಿ ಎಂದು ಕರೆ ಕೊಟ್ಟಿದ್ದಾರೆ. ಇಂತಹ ಸಂದರ್ಭದಲ್ಲಿ ಎಲ್ಲಿ ಹೂಡಿಕೆ ಮಾಡಬೇಕು ಎಂಬ ಗೊಂದಲ ಕಾಡುತ್ತಿರುತ್ತದೆ. ಆದರೆ, ಜನ ಹಣವನ್ನು ಹೂಡಿಕೆ ಮಾಡಲು ಪೋಸ್ಟ್ ಆಫೀಸ್ ನಲ್ಲೇ ಹತ್ತಾರು ಯೋಜನೆಗಳಿವೆ. ಇವು ಸುರಕ್ಷಿತ ಹಾಗೂ ನಿಶ್ಚಿತ ಆದಾಯವನ್ನೂ ತಂದುಕೊಂಡುತ್ತವೆ. ಅಂತಹ ಸುರಕ್ಷಿತ ಯೋಜನೆಗಳಲ್ಲಿ ಪೋಸ್ಟ್ ಆಫೀಸ್‌ನ ಮಾಸಿಕ ಆದಾಯ ಯೋಜನೆಯೂ (Post Office Monthly Income Scheme-MIS) ಒಂದಾಗಿದೆ.
ಅದರಲ್ಲೂ, ಮಾಸಿಕ ಆದಾಯ ಯೋಜನೆಯಲ್ಲಿ ಗಂಡ-ಹೆಂಡತಿ ಸೇರಿ ಜಂಟಿಯಾಗಿ ಖಾತೆ ತೆರೆದು, 15 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ, ಪ್ರತಿ ತಿಂಗಳು ಬಡ್ಡಿ ಆದಾಯವೇ 9,250 ರೂಪಾಯಿ ಲಭಿಸುತ್ತದೆ. ಇದು ಕೇಂದ್ರ ಸರ್ಕಾರದ ಯೋಜನೆಯಾಗಿರುವ ಕಾರಣ ಯಾವುದೇ ಭೀತಿ ಇರುವುದಿಲ್ಲ. ಹಾಗಾಗಿ, ಈ ಯೋಜನೆಯಲ್ಲಿ ಹೂಡಿಕೆ ಮಾಡುವುದು ತುಂಬ ಸುರಕ್ಷಿತವಾಗಿದೆ.
• ಪ್ರತಿ ತಿಂಗಳು 9,250 ರೂ. ಗಳಿಸುವುದು ಹೇಗೆ?
ಈ ಯೋಜನೆಯಲ್ಲಿ ಈಗ ಶೇ.7.40ರಷ್ಟು ವಾರ್ಷಿಕ ಬಡ್ಡಿದರ ನೀಡಲಾಗುತ್ತಿದೆ. ಜಂಟಿ ಖಾತೆಯಡಿ ಗರಿಷ್ಠ ಮಿತಿಯಾದ 15 ಲಕ್ಷ ರೂಪಾಯಿಯನ್ನು ನೀವು ಹೂಡಿಕೆ ಮಾಡಿದರೆ, ಅದರ ಲೆಕ್ಕಾಚಾರ ಹೀಗಿರುತ್ತದೆ.
ಒಟ್ಟು ಹೂಡಿಕೆ (ಜಂಟಿ ಖಾತೆ) 15 ಲಕ್ಷ ರೂಪಾಯಿ)
ವಾರ್ಷಿಕ ಬಡ್ಡಿದರ : 7.40%
ವರ್ಷಕ್ಕೆ ಸಿಗುವ ಒಟ್ಟು ಬಡ್ಡಿ : 1,11,000 ರೂ.
ಮಾಸಿಕ ಆದಾಯ (ಪ್ರತಿ ತಿಂಗಳು ಸಿಗುವ ಹಣ) : 9,250 ರೂ.
ಮಾಸಿಕ ಆದಾಯ ಯೋಜನೆಯಲ್ಲಿ ಹೂಡಿಕೆ ಮಾಡುವವರು ಇನ್ನೊಂದು ಅಂಶವನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ನೀವು ವೈಯಕ್ತಿಕವಾಗಿ (Single Account) ಗರಿಷ್ಠ 9 ಲಕ್ಷ ರೂಪಾಯಿವರೆಗೆ ಹೂಡಿಕೆ ಮಾಡಬಹುದಾಗಿದೆ. ಹೀಗೆ ಮಾಡಿದರೆ ನಿಮಗೆ ಪ್ರತಿ ತಿಂಗಳು 5,550 ರೂಪಾಯಿ ಬಡ್ಡಿ ಆದಾಯ ಪಡೆಯಬಹುದು. ಆದರೆ, ಜಂಟಿ ಖಾತೆ ತೆರೆದರೆ ಮಾತ್ರ 15 ಲಕ್ಷ ರೂಪಾಯಿವರೆಗೆ ಹೂಡಿಕೆ ಮಾಡಬಹುದಾಗಿದೆ.
ಮಾಸಿಕ ಆದಾಯ ಯೋಜನೆ ಅಡಿಯಲ್ಲಿ ಒಬ್ಬರೇ ಅಥವಾ ಗರಿಷ್ಠ ಮೂವರು ವಯಸ್ಕರು ಸೇರಿ ಜಂಟಿ ಖಾತೆಯನ್ನು ತೆರೆಯಬಹುದು. ಆದರೆ, ಪತಿ-ಪತ್ನಿ ಒಟ್ಟಾಗಿ ಹೂಡಿಕೆ ಮಾಡಲು ಇದು ಸೂಕ್ತವಾಗಿದೆ. ಈ ಯೋಜನೆಯ ಅವಧಿ 5 ವರ್ಷಗಳು. ಅಂದರೆ ನೀವು ಇಟ್ಟ ಠೇವಣಿ 5 ವರ್ಷಗಳವರೆಗೆ ಲಾಕ್ ಆಗಿರುತ್ತದೆ ಮತ್ತು ಪ್ರತಿ ತಿಂಗಳು ನಿಮ್ಮ ಖಾತೆಗೆ ಬಡ್ಡಿ ಹಣ ಜಮೆಯಾಗುತ್ತಿರುತ್ತದೆ.
ಇದನ್ನೂ ಓದಿ : ಬೌಲಿಂಗ್ ಕಡೆ ಗಮನಹರಿಸಿ, ಸ್ನ್ಯಾಪ್‌ಚಾಟ್ ನಿಲ್ಲಿಸಿ ; ಟೀಕೆಗೆ ಗುರಿಯಾದ ಅರ್ಷದೀಪ್ ಸಿಂಗ್!



















