ಕೊಚ್ಚಿ: ಮಹಿಳಾ ಕ್ರಿಕೆಟ್‌ನ ಬಹುನಿರೀಕ್ಷಿತ ‘ಮಹಿಳಾ ಪ್ರೀಮಿಯರ್ ಲೀಗ್’ (WPL) 2027ರ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆಗೆ ಕೇರಳದ ಕೊಚ್ಚಿ ನಗರವು ಸಂಪೂರ್ಣವಾಗಿ ಸಜ್ಜಾಗಿದೆ. ಬುಧವಾರ (ಅಕ್ಟೋಬರ್ 28) ಸಂಜೆ 5:30ಕ್ಕೆ ಕೊಚ್ಚಿಯ ಗ್ರ್ಯಾಂಡ್ ಹಯಾತ್ ಹೋಟೆಲ್‌ನಲ್ಲಿ ಈ ಅದ್ಧೂರಿ ಹರಾಜು ಪ್ರಕ್ರಿಯೆ ಆರಂಭವಾಗಲಿದ್ದು, ಐದು ಪ್ರಮುಖ ಫ್ರಾಂಚೈಸಿಗಳು ತಮ್ಮ ತಂಡಗಳನ್ನು ಬಲಪಡಿಸಲು ರಣತಂತ್ರ ರೂಪಿಸಿವೆ. ಇದೇ ಮೊದಲ ಬಾರಿಗೆ ಕೊಚ್ಚಿ ನಗರವು ಡಬ್ಲ್ಯುಪಿಎಲ್ ಹರಾಜಿಗೆ ಆತಿಥ್ಯ ವಹಿಸುತ್ತಿರುವುದು ಮತ್ತೊಂದು ವಿಶೇಷತೆಯಾಗಿದೆ.
2027ರ ಜನವರಿ 14 ರಿಂದ ಫೆಬ್ರವರಿ 7 ರವರೆಗೆ ನಡೆಯಲಿರುವ ಈ ಟೂರ್ನಿಗೆ, ತಮ್ಮ ತಂಡದಲ್ಲಿರುವ ಖಾಲಿ ಸ್ಥಾನಗಳನ್ನು ತುಂಬಲು ಮಾಲೀಕರು ತುದಿಗಾಲಲ್ಲಿ ನಿಂತಿದ್ದಾರೆ.ಈ ಬಾರಿಯ ಹರಾಜು ಕಣದಲ್ಲಿ ಒಟ್ಟು 146 ಆಟಗಾರರು ತಮ್ಮ ಅದೃಷ್ಟ ಪರೀಕ್ಷೆಗಿಳಿಯಲಿದ್ದಾರೆ. ಇದರಲ್ಲಿ 119 ಮಂದಿ ಭಾರತೀಯ ಆಟಗಾರರಾಗಿದ್ದರೆ, ಉಳಿದ 27 ಮಂದಿ ವಿದೇಶಿ ಆಟಗಾರರಾಗಿದ್ದಾರೆ. ಐದು ತಂಡಗಳಲ್ಲಿ ಒಟ್ಟು 27 ಸ್ಥಾನಗಳು ಮಾತ್ರ ಖಾಲಿ ಇದ್ದು, ಇದರಲ್ಲಿ 20 ಸ್ಥಾನಗಳು ಭಾರತೀಯರಿಗೆ ಹಾಗೂ 7 ಸ್ಥಾನಗಳು ವಿದೇಶಿ ಆಟಗಾರರಿಗೆ ಮೀಸಲಾಗಿವೆ. ಅತಿ ಹೆಚ್ಚು ಮೂಲಬೆಲೆ ಅಂದರೆ 50 ಲಕ್ಷ ರೂಪಾಯಿಗಳ ವಿಭಾಗದಲ್ಲಿ ಇಂಗ್ಲೆಂಡ್‌ನ ಸೋಫಿಯಾ ಡಂಕ್ಲಿ ಹಾಗೂ ಆಸ್ಟ್ರೇಲಿಯಾದ ಸೋಫಿ ಮೊಲಿನೆಕ್ಸ್ ಮಾತ್ರ ನೋಂದಾಯಿಸಿಕೊಂಡಿದ್ದಾರೆ. 15 ವರ್ಷದ ಕರ್ನಾಟಕದ ಉಮಾ ಕಾಶ್ವಿ ಹಾಗೂ ದೆಹಲಿಯ ಅನ್ಶು ನಗರ್ ಅತಿ ಕಿರಿಯ ಆಟಗಾರ್ತಿಯರಾಗಿ ಗುರುತಿಸಿಕೊಂಡಿದ್ದರೆ, 36 ವರ್ಷದ ಶ್ರೀಲಂಕಾದ ಚಾಮರಿ ಅತಪತ್ತು ಅತಿ ಹಿರಿಯ ಆಟಗಾರ್ತಿಯಾಗಿದ್ದಾರೆ.
ಫ್ರಾಂಚೈಸಿಗಳ ಬಳಿ ಉಳಿದಿರುವ ಹಣ
ಹರಾಜಿಗೆ ಮುನ್ನವೇ ಮುಂಬೈ ಇಂಡಿಯನ್ಸ್ ತಂಡವು ಯುಪಿ ವಾರಿಯರ್ಸ್‌ನಿಂದ ಅಮೆರಿಕದ ವೇಗಿ ತಾರಾ ನಾರಿಸ್ ಅವರನ್ನು ಟ್ರೇಡ್ ಮಾಡಿಕೊಂಡಿದೆ. ಇದರಿಂದಾಗಿ ಯುಪಿ ವಾರಿಯರ್ಸ್ ಬಳಿ ಅತಿ ಹೆಚ್ಚು, ಅಂದರೆ 3.65 ಕೋಟಿ ರೂಪಾಯಿಗಳ ಬೃಹತ್ ಮೊತ್ತ ಉಳಿದುಕೊಂಡಿದೆ. ಇದು ಅವರಿಗೆ ಹರಾಜಿನಲ್ಲಿ ಬೇಕಾದ ಆಟಗಾರರನ್ನು ಖರೀದಿಸಲು ಆರ್ಥಿಕ ಬಲ ನೀಡಿದೆ. ಗುಜರಾತ್ ಜೈಂಟ್ಸ್ ಬಳಿ 1.25 ಕೋಟಿ ರೂ., ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಬಳಿ 1.15 ಕೋಟಿ ರೂ., ಡೆಲ್ಲಿ ಕ್ಯಾಪಿಟಲ್ಸ್ ಬಳಿ 1.10 ಕೋಟಿ ರೂ. ಹಾಗೂ ಮುಂಬೈ ಇಂಡಿಯನ್ಸ್ ಬಳಿ ಕೇವಲ 1 ಕೋಟಿ ರೂ. (ಮೂಲತಃ 90 ಲಕ್ಷ) ಬಾಕಿ ಉಳಿದಿದೆ. ಮುಂಬೈ ಮತ್ತು ಯುಪಿ ತಂಡಗಳಲ್ಲಿ ತಲಾ ಏಳು ಸ್ಥಾನಗಳು ಖಾಲಿಯಿದ್ದರೆ, ಆರ್‌ಸಿಬಿ ಮತ್ತು ಡೆಲ್ಲಿ ತಂಡದಲ್ಲಿ ತಲಾ ಐದು ಹಾಗೂ ಗುಜರಾತ್ ತಂಡದಲ್ಲಿ ಮೂರು ಸ್ಥಾನಗಳು ಮಾತ್ರ ಬಾಕಿ ಇವೆ. ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಈ ಹರಾಜು ಪ್ರಕ್ರಿಯೆ ನೇರಪ್ರಸಾರವಾಗಲಿದ್ದು, ಜಿಯೋ ಹಾಟ್‌ಸ್ಟಾರ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಲಭ್ಯವಿರಲಿದೆ.
ಇದನ್ನೂ ಓದಿ:ಪವರ್‌ಪ್ಲೇ ಕಿಂಗ್ ಅಭಿಷೇಕ್ ಶರ್ಮಾ: ಪ್ರಸ್ತುತ ಟಿ20 ಕ್ರಿಕೆಟ್‌ನ ಅತ್ಯುತ್ತಮ ಆರಂಭಿಕ ಆಟಗಾರನೇ ಈ ಯುವತಾರೆ?


















