ನವದೆಹಲಿ/ಬೆಂಗಳೂರು: ಬೆಂಗಳೂರು ಹೊರವಲಯದಲ್ಲಿರುವ ಆ್ಯಪಲ್ ಐಫೋನ್ ತಯಾರಕ ಸಂಸ್ಥೆಯಾದ ಫಾಕ್ಸ್‌ಕಾನ್ (Foxconn) ಘಟಕದ ತ್ವರಿತ ಬೆಳವಣಿಗೆಯ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ನಡುವೆ ಆಸಕ್ತಿದಾಯಕ ವಾಕ್ಸಮರ ನಡೆದಿದೆ. ಕರ್ನಾಟಕ ಸರ್ಕಾರವನ್ನು ರಾಹುಲ್ ಗಾಂಧಿ ಶ್ಲಾಘಿಸಿದ ಬೆನ್ನಲ್ಲೇ, ಇದು ಪ್ರಧಾನಿ ಮೋದಿಯವರ ‘ಮೇಕ್ ಇನ್ ಇಂಡಿಯಾ’ದ ಫಲ ಎಂದು ಹೇಳುವ ಮೂಲಕ ಕೇಂದ್ರ ಸಚಿವರು ಟಾಂಗ್ ನೀಡಿದ್ದಾರೆ.
ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಪೋಸ್ಟ್ ಮಾಡಿದ್ದ ಸಂಸದ ರಾಹುಲ್ ಗಾಂಧಿ, ಕರ್ನಾಟಕದಲ್ಲಿ ಫಾಕ್ಸ್‌ಕಾನ್ ಕಂಪನಿಯು ಕೇವಲ ಒಂಬತ್ತು ತಿಂಗಳಲ್ಲಿ 30,000 ಸಿಬ್ಬಂದಿಯನ್ನು ನೇಮಿಸಿಕೊಳ್ಳುವ ಮೂಲಕ ಭಾರತದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಕಾರ್ಖಾನೆಯಾಗಿ ಹೊರಹೊಮ್ಮಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್, ಯೋಜನೆಯ ಯಶಸ್ಸಿಗೆ ಕೇಂದ್ರದ ನೀತಿಗಳೇ ಕಾರಣ ಎಂದು ಪ್ರತಿಪಾದಿಸಿದ್ದಾರೆ.
ರಾಹುಲ್ ಗಾಂಧಿ ಹೇಳಿದ್ದೇನು?
ಸೋಮವಾರ ಫೇಸ್‌ಬುಕ್‌ನಲ್ಲಿ ಆಂಗ್ಲ ಸುದ್ದಿ ಮಾಧ್ಯಮವೊಂದರ ವರದಿಯ ಸ್ಕ್ರೀನ್‌ಶಾಟ್ ಹಂಚಿಕೊಂಡಿದ್ದ ರಾಹುಲ್ ಗಾಂಧಿ, “ಕೇವಲ 8-9 ತಿಂಗಳಲ್ಲಿ 30,000 ಸಿಬ್ಬಂದಿಯ ನೇಮಕಾತಿ ನಡೆದಿರುವುದು ಸಾಮಾನ್ಯ ಸಂಗತಿಯಲ್ಲ. ಅಲ್ಲದೆ, ಇದರಲ್ಲಿ ಶೇ.80ರಷ್ಟು ಮಹಿಳೆಯರೇ ಇರುವುದು ಮತ್ತು ಅವರಲ್ಲಿ ಬಹುತೇಕರು 19-24 ವಯಸ್ಸಿನವರಾಗಿರುವುದು ವಿಶೇಷ. ಇದು ಕೇವಲ ಅಂಕಿಅಂಶವಲ್ಲ, ಬದಲಿಗೆ ಉದ್ಯೋಗ ಸೃಷ್ಟಿಯಲ್ಲಿನ ಪರಿವರ್ತನೆಯಾಗಿದೆ,” ಎಂದು ಬಣ್ಣಿಸಿದ್ದರು. ಇಂತಹ ಬೃಹತ್ ಮಟ್ಟದ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವಲ್ಲಿ ಕರ್ನಾಟಕ ಮಾದರಿಯಾಗಿದೆ ಎಂದು ಅವರು ರಾಜ್ಯ ಸರ್ಕಾರವನ್ನು ಕೊಂಡಾಡಿದ್ದರು.
ಅಶ್ವಿನಿ ವೈಷ್ಣವ್ ಟಾಂಗ್
ರಾಹುಲ್ ಗಾಂಧಿಯವರ ಹೇಳಿಕೆಗೆ ಬುಧವಾರ ಟ್ವಿಟರ್ ಮೂಲಕ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, ಪರೋಕ್ಷವಾಗಿ ರಾಹುಲ್ ಅವರ ಕಾಲೆಳೆದಿದ್ದಾರೆ. “ಪ್ರಧಾನಿ ನರೇಂದ್ರ ಮೋದಿಯವರ ‘ಮೇಕ್ ಇನ್ ಇಂಡಿಯಾ’ ಕಾರ್ಯಕ್ರಮದ ಯಶಸ್ಸನ್ನು ಒಪ್ಪಿಕೊಂಡಿದ್ದಕ್ಕೆ ರಾಹುಲ್ ಗಾಂಧಿಯವರಿಗೆ ಧನ್ಯವಾದಗಳು. ನೀವು ಗಮನಿಸಿದಂತೆ, ಪ್ರಧಾನಿಯವರ ದೂರದೃಷ್ಟಿಯನ್ನು ಅನುಷ್ಠಾನಗೊಳಿಸುತ್ತಿರುವುದರಿಂದ ಭಾರತವು ಈಗ ‘ಉತ್ಪಾದನಾ ಆರ್ಥಿಕತೆ’ಯಾಗಿ ಬದಲಾಗುತ್ತಿದೆ,” ಎಂದು ಬರೆದುಕೊಂಡಿದ್ದಾರೆ.
ಭಾರತದಲ್ಲಿ ಆ್ಯಪಲ್ ಹವಾ
ತೈವಾನ್ ಮೂಲದ ಫಾಕ್ಸ್‌ಕಾನ್ ಕಂಪನಿಯು ಆ್ಯಪಲ್ ಸಾಧನಗಳ ಪ್ರಮುಖ ಗುತ್ತಿಗೆ ತಯಾರಕ ಸಂಸ್ಥೆಯಾಗಿದೆ. ಇತ್ತೀಚಿನ ಐಫೋನ್ 17 ಸೇರಿದಂತೆ ಹಲವು ಮಾಡೆಲ್‌ಗಳನ್ನು ಇದು ತಯಾರಿಸುತ್ತಿದ್ದು, ಆ್ಯಪಲ್ ತನ್ನ ಉತ್ಪಾದನಾ ನೆಲೆಯನ್ನು ಚೀನಾದಿಂದ ಭಾರತಕ್ಕೆ ವರ್ಗಾಯಿಸುವಲ್ಲಿ ಈ ಘಟಕ ಮಹತ್ತರ ಪಾತ್ರ ವಹಿಸುತ್ತಿದೆ.
ವರದಿಗಳ ಪ್ರಕಾರ, ಕಳೆದ 12 ತಿಂಗಳುಗಳಲ್ಲಿ ಭಾರತದಲ್ಲಿ ಸುಮಾರು 22 ಶತಕೋಟಿ ಡಾಲರ್ ಮೌಲ್ಯದ ಐಫೋನ್‌ಗಳನ್ನು ಜೋಡಣೆ ಮಾಡಲಾಗಿದೆ. ಪ್ರಸ್ತುತ ಜಾಗತಿಕ ಐಫೋನ್ ಉತ್ಪಾದನೆಯಲ್ಲಿ ಭಾರತದ ಪಾಲು ಶೇ.20ರಷ್ಟಿದೆ. ಬೆಂಗಳೂರು ಘಟಕವು ಸಂಪೂರ್ಣವಾಗಿ ಕಾರ್ಯಾಚರಣೆ ಆರಂಭಿಸಿದರೆ, ವರ್ಷಕ್ಕೆ ಸುಮಾರು 2 ಕೋಟಿ ಐಫೋನ್‌ಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಲಿದೆ ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ : ಚಿತ್ರದುರ್ಗ ಬಸ್ ದುರಂತ | ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ ಸಿದ್ಧರಾಮಯ್ಯ



















