ಗುಂಟೂರು: ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಚಿಲುವೂರು ಗ್ರಾಮದಲ್ಲಿ ನಾಗರಿಕ ಸಮಾಜವೇ ತಲೆತಗ್ಗಿಸುವಂತಹ ಘನಘೋರ ಕೃತ್ಯವೊಂದು ಬೆಳಕಿಗೆ ಬಂದಿದೆ. ವಿವಾಹೇತರ ಸಂಬಂಧದ ವ್ಯಾಮೋಹಕ್ಕೆ ಬಿದ್ದ ಮಹಿಳೆಯೊಬ್ಬಳು, ತನ್ನ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಅತ್ಯಂತ ಕ್ರೂರವಾಗಿ ಹತ್ಯೆ ಮಾಡಿದ್ದಾಳೆ. ಅಷ್ಟೇ ಅಲ್ಲದೆ, ಹತ್ಯೆಯ ನಂತರ ಯಾವುದೇ ಪಶ್ಚಾತ್ತಾಪವಿಲ್ಲದೆ ಪತಿಯ ಶವದ ಪಕ್ಕದಲ್ಲೇ ಕುಳಿತು ರಾತ್ರಿಯಿಡೀ ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೋಗಳನ್ನು ವೀಕ್ಷಿಸುವ ಮೂಲಕ ವಿಕೃತ ಮೆರೆದಿದ್ದಾಳೆ. ಈ ಘಟನೆಗೆ ಸಂಬಂಧಿಸಿದಂತೆ ಆರೋಪಿ ಮಹಿಳೆ ಲಕ್ಷ್ಮಿ ಮಾಧುರಿ ಮತ್ತು ಆಕೆಯ ಪ್ರಿಯಕರ ಗೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಿರಿಯಾನಿಯಲ್ಲಿ ನಿದ್ರೆ ಮಾತ್ರೆ
ಕೊಲೆಯಾದ ವ್ಯಕ್ತಿಯನ್ನು ಈರುಳ್ಳಿ ವ್ಯಾಪಾರಿ ಲೋಕಂ ಶಿವ ನಾಗರಾಜು (46) ಎಂದು ಗುರುತಿಸಲಾಗಿದೆ. ಪೊಲೀಸರ ತನಿಖೆಯ ಪ್ರಕಾರ, ಆರೋಪಿ ಲಕ್ಷ್ಮಿ ಮಾಧುರಿ ಕಳೆದ ಕೆಲವು ಸಮಯದಿಂದ ಹೈದರಾಬಾದ್‌ನಲ್ಲಿ ಕೆಲಸ ಮಾಡುತ್ತಿದ್ದ ಗೋಪಿ ಎಂಬಾತನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು. ಈ ವಿಷಯ ಪತಿ ನಾಗರಾಜುಗೆ ತಿಳಿದು ದಂಪತಿಗಳ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಪತಿಯನ್ನು ದಾರಿಯಿಂದ ತಪ್ಪಿಸಲು ನಿರ್ಧರಿಸಿದ ಮಾಧುರಿ, ಆತನ ಹತ್ಯೆಗೆ ಮಾಸ್ಟರ್ ಪ್ಲಾನ್ ರೂಪಿಸಿದ್ದಳು. ಅದರಂತೆ ಘಟನೆ ನಡೆದ ರಾತ್ರಿ ಪತಿಗೆ ಪ್ರೀತಿಯಿಂದ ಬಿರಿಯಾನಿ ತಯಾರಿಸಿ ನೀಡಿದ್ದಾಳೆ. ಆದರೆ ಆ ಬಿರಿಯಾನಿಯಲ್ಲಿ ಪ್ರಿಯಕರ ಗೋಪಿ ತಂದುಕೊಟ್ಟಿದ್ದ ಸುಮಾರು ಮೂರು ಸ್ಟ್ರಿಪ್‌ಗಳಷ್ಟು ನಿದ್ರೆ ಮಾತ್ರೆಗಳನ್ನು ಪುಡಿ ಮಾಡಿ ಬೆರೆಸಿದ್ದಳು.

ಉಸಿರುಗಟ್ಟಿಸಿ ಹತ್ಯೆ; ಶವದ ಪಕ್ಕದಲ್ಲೇ ವಿಕೃತ ವರ್ತನೆ
ಬಿರಿಯಾನಿ ಸೇವಿಸಿದ ನಾಗರಾಜು ಗಾಢ ನಿದ್ರೆಗೆ ಜಾರುತ್ತಿದ್ದಂತೆ, ಮಾಧುರಿ ತನ್ನ ಪ್ರಿಯಕರ ಗೋಪಿಯನ್ನು ಮನೆಗೆ ಕರೆಸಿಕೊಂಡಿದ್ದಾಳೆ. ಅರೆನಿದ್ರೆಯಲ್ಲಿದ್ದ ನಾಗರಾಜು ಮೇಲೆ ಗೋಪಿ ಕುಳಿತುಕೊಳ್ಳುತ್ತಿದ್ದಂತೆ, ಮಾಧುರಿ ದಿಂಬಿನಿಂದ ಪತಿಯ ಮುಖವನ್ನು ಒತ್ತಿ ಹಿಡಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ. ಮರಣೋತ್ತರ ಪರೀಕ್ಷೆಯಲ್ಲಿ ನಾಗರಾಜು ಅವರ ಎದೆಯ ಮೂಳೆಗಳು ಮುರಿದಿರುವುದು ಮತ್ತು ಶ್ವಾಸಕೋಶಕ್ಕೆ ಹಾನಿಯಾಗಿರುವುದು ಪತ್ತೆಯಾಗಿದೆ. ಪತಿ ಮೃತಪಟ್ಟಿದ್ದಾನೆ ಎಂದು ಖಚಿತಪಡಿಸಿಕೊಂಡ ನಂತರ ಗೋಪಿ ಅಲ್ಲಿಂದ ಪರಾರಿಯಾಗಿದ್ದಾನೆ. ಆದರೆ ಮಾಧುರಿ ಮಾತ್ರ ಮನೆಯಲ್ಲೇ ಉಳಿದು, ಮೃತ ದೇಹದ ಪಕ್ಕದಲ್ಲೇ ಕುಳಿತು ರಾತ್ರಿಯಿಡೀ ಅಶ್ಲೀಲ ವಿಡಿಯೋಗಳನ್ನು ನೋಡುತ್ತಾ ಕಾಲ ಕಳೆದಿದ್ದಾಳೆ. ಈ ಅಂಶವು ಆಕೆಯ ಮೊಬೈಲ್‌ನ ಫೋರೆನ್ಸಿಕ್ ತನಿಖೆಯಿಂದ ಬಹಿರಂಗವಾಗಿದ್ದು, ತನಿಖಾಧಿಕಾರಿಗಳನ್ನೇ ಬೆಚ್ಚಿಬೀಳಿಸಿದೆ.
ಹೃದಯಾಘಾತದ ನಾಟಕವಾಡಿದರೂ ಸಿಕ್ಕಿಬಿದ್ದ ಆರೋಪಿಗಳು
ಮರುದಿನ ಮುಂಜಾನೆ ನಾಲ್ಕು ಗಂಟೆಯ ಸುಮಾರಿಗೆ ಮಾಧುರಿ ನೆರೆಹೊರೆಯವರನ್ನು ಕರೆದು, ತನ್ನ ಪತಿಗೆ ಇದ್ದಕ್ಕಿದ್ದಂತೆ ಹೃದಯಾಘಾತವಾಗಿದ್ದು ಮೃತಪಟ್ಟಿದ್ದಾರೆ ಎಂದು ನಂಬಿಸಲು ಯತ್ನಿಸಿದ್ದಾಳೆ. ಆದರೆ ನಾಗರಾಜು ಅವರ ದೇಹದ ಮೇಲೆ ಗಾಯದ ಗುರುತುಗಳು ಮತ್ತು ಕಿವಿಯ ಬಳಿ ರಕ್ತದ ಕಲೆಗಳನ್ನು ಗಮನಿಸಿದ ನಾಗರಾಜು ಅವರ ತಂದೆ ಮತ್ತು ಸ್ನೇಹಿತರಿಗೆ ಅನುಮಾನ ಬಂದಿದೆ. ತಕ್ಷಣವೇ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದಾಗ, ಅದು ಸಹಜ ಸಾವಲ್ಲ ಬದಲಾಗಿ ಉಸಿರುಗಟ್ಟಿಸಿ ಮಾಡಿದ ಕೊಲೆ ಎಂಬುದು ಸಾಬೀತಾಗಿದೆ. ಸದ್ಯ ಇಬ್ಬರೂ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 103(1) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ಅಮೆರಿಕ ಅಧಿಕಾರಿಗಳಿಂದ 5 ವರ್ಷದ ಬಾಲಕನ ಬಂಧನ : ಭಾರೀ ಸಂಚಲನ



















