ಬೆಂಗಳೂರು : ಕಾಂಗ್ರೆಸ್ ಪಕ್ಷದಿಂದ ಅಮಾನತಾಗಿರುವ ಅಬ್ದುಲ್ ಜಬ್ಬಾರ್ ಅವರ ರಾಜಕೀಯ ಭವಿಷ್ಯ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ. ದಾವಣಗೆರೆ ದಕ್ಷಿಣ ಉಪಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ಆರೋಪ ಎದುರಿಸುತ್ತಿರುವ ಹಿನ್ನೆಲೆ, ಇದೀಗ ಅವರ ಎಂಎಲ್ಸಿ ಸ್ಥಾನಕ್ಕೂ ಕಂಟಕ ಎದುರಾಗುತ್ತದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ.
ಕೆಪಿಸಿಸಿ ಅಲ್ಪಸಂಖ್ಯಾತ ಘಟಕಕ್ಕೆ ರಾಜೀನಾಮೆ ನೀಡಿರುವ ಜೊತೆಗೆ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವದಿಂದಲೂ ವಜಾಗೊಂಡಿರುವ ಜಬ್ಬಾರ್, ಇದೀಗ ಕೇವಲ ವಿಧಾನ ಪರಿಷತ್ ಸದಸ್ಯರಾಗಿ ಉಳಿದಿದ್ದಾರೆ. ಇದೇ ವೇಳೆ, ಸ್ವಪಕ್ಷದ ನಾಯಕರೇ ಅವರ ವಿರುದ್ಧ ತಿರುಗಿಬಿದ್ದಿರುವುದು ಮತ್ತಷ್ಟು ಗಂಭೀರ ಚರ್ಚೆಗೆ ಎಡೆಮಾಡಿಕೊಟ್ಟಿದೆ.
ಕೆಪಿಸಿಸಿ ಅಲ್ಪಸಂಖ್ಯಾತ ನಾಯಕರಿಂದಲೇ ಜಬ್ಬಾರ್ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿದ್ದು, ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿರುವುದಕ್ಕೆ ದಾಖಲೆ ಸಮೇತ ದೂರು ಸಲ್ಲಿಸಲಾಗಿದೆ ಎಂದು ತಿಳಿದುಬಂದಿದೆ. ಇನ್ನೂ ಹೆಚ್ಚಿನ ದಾಖಲೆಗಳು ಹಾಗೂ ವರದಿಗಳನ್ನು ಶೀಘ್ರದಲ್ಲೇ ಪಕ್ಷದ ಅಧ್ಯಕ್ಷರ ಮುಂದಿಡಲಿರುವುದಾಗಿ ನಾಯಕರು ತಿಳಿಸಿದ್ದಾರೆ.
ಇದಕ್ಕೆ ಪ್ರತಿಯಾಗಿ, ನಾನು ಯಾವುದೇ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ ಎಂದು ಅಬ್ದುಲ್ ಜಬ್ಬಾರ್ ಸ್ಪಷ್ಟಪಡಿಸಿದ್ದಾರೆ. ಆರೋಪ-ಪ್ರತ್ಯಾರೋಪಗಳ ನಡುವೆಯೇ ಈ ಬೆಳವಣಿಗೆಗಳು ತೀವ್ರ ಕುತೂಹಲ ಮೂಡಿಸಿದ್ದು, ಮುಂದಿನ ದಿನಗಳಲ್ಲಿ ಈ ರಾಜಕೀಯ ಘರ್ಷಣೆ ಯಾವ ದಿಕ್ಕಿನಲ್ಲಿ ಸಾಗಲಿದೆ ಎಂಬುದನ್ನು ಕಾದುನೋಡಬೇಕಾಗಿದೆ.
ಇದನ್ನೂ ಓದಿ : ಲೆಬನಾನ್‌ನಲ್ಲಿ ಏಸುಕ್ರಿಸ್ತರ ಪ್ರತಿಮೆ ವಿರೂಪಗೊಳಿಸಿದ ಇಸ್ರೇಲ್ ಸೈನಿಕ : ವಿಶ್ವಾದ್ಯಂತ ಆಕ್ರೋಶ!


















