ಮಂಗಳೂರು : ದೈವದ ಭಂಡಾರ ಮೆರವಣಿಗೆಯ ವೇಳೆ ಸಣ್ಣ ಸೇತುವೆ (ಕಾಲು ಸಂಕ) ಮುರಿದು ಬಿದ್ದು ಭಾರಿ ಅವಘಡ ಸಂಭವಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ತಾಲ್ಲೂಕಿನ ಪುಚ್ಚೆಮೊಗರು ಗ್ರಾಮದಲ್ಲಿ ನಡೆದಿದೆ.
ಪಲ್ಲಕ್ಕಿಯಲ್ಲಿ ದೈವದ ಭಂಡಾರವನ್ನು ಹೊತ್ತಿದ್ದವರು ಸಾಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಪುಚ್ಚೆಮೊಗರು ಬಾವದಬೈಲು ನಿಲಯದಿಂದ ದೈವದ ಭಂಡಾರವನ್ನು ತಾಕೋಡೆ ಬರ್ಕೆ ಧರ್ಮನೇಮೋತ್ಸವದ ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುತ್ತಿತ್ತು. ಕೊಂಬು ಮತ್ತು ಬ್ಯಾಂಡ್ ವಾದ್ಯಗಳೊಂದಿಗೆ ಭಕ್ತಿ-ಸಂಭ್ರಮದಿಂದ ಮೆರವಣಿಗೆ ಸಾಗುತ್ತಿತ್ತು.
ಈ ವೇಳೆ ಹಳ್ಳವೊಂದರ ಮೇಲೆ ಅಡ್ಡಲಾಗಿ ನಿರ್ಮಿಸಲಾದ ಕಿರು ಸೇತುವೆಯನ್ನು ದಾಟುತ್ತಿದ್ದಾಗ ಪಲ್ಲಕ್ಕಿ ಹೊತ್ತವರು, ಜನದಟ್ಟಣೆಯ ತೂಕವನ್ನು ತಾಳಲಾರದೆ ಸಂಕವು ಏಕಾಏಕಿ ಕುಸಿದು ಬಿದ್ದಿದೆ. ಸಂಕದ ಮೇಲ್ಭಾಗದ ಬೀಮ್ (ತೊಲೆ) ಪಲ್ಲಕ್ಕಿ ಹೊತ್ತವರ ಮೇಲೆಯೇ ಬಿದ್ದ ಪರಿಣಾಮವಾಗಿ ಮಾರೂರಿನ ಸುನಿಲ್ ಶೆಟ್ಟಿ ಮುಕಾಲ್ದಿ, ಲೋಕೇಶ್ ಭಂಡಾರಿ ಸೇರಿದಂತೆ ಒಟ್ಟು ಎಂಟು ಮಂದಿ ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವಘಡದ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ದೈವದ ಪಲ್ಲಕ್ಕಿ ಉರುಳಿ ಬಿದ್ದ ಪರಿಣಾಮ ಅದರಲ್ಲಿದ್ದ ಮೊಗಮೂರ್ತಿ ಮತ್ತು ಇತರ ಪವಿತ್ರ ಧಾರ್ಮಿಕ ಪರಿಕರಗಳಿಗೆ ಹಾನಿಯಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ : ಬಿರಾದಾರ್ ಮಿತ್ರ ಮಂಡಳಿಯಿಂದ ಸಂಪನ್ನಗೊಂಡಿತು ನಾಟಕೋತ್ಸವ


















