ಬೆಂಗಳೂರು : ನಗರದಲ್ಲಿ ಅಂತರ್ ರಾಜ್ಯ ಕಳ್ಳರ ಗ್ಯಾಂಗ್ ವಿರುದ್ಧ ಕೊಡಿಗೇಹಳ್ಳಿ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ. ನಾಸಿಕ್ ಮೂಲದ ರೋಹನ್ ಮತ್ತು ಆಕಾಶ್ ಬಂಧಿತ ಆರೋಪಿಗಳಾಗಿದ್ದಾರೆ.
ಬೀಗ ಹಾಕಿದ ಮನೆಗಳನ್ನೇ ಟಾರ್ಗೆಟ್ ಮಾಡಿಕೊಂಡು ಈ ಗ್ಯಾಂಗ್ ಕಳ್ಳತನ ನಡೆಸುತ್ತಿತ್ತು. ಇತ್ತೀಚೆಗೆ ಸಹಕಾರ ನಗರದಲ್ಲಿ ಬೀಗ ಹಾಕಿದ ಮನೆಯ ಹಿಂಬದಿಯ ಗ್ರಿಲ್ ಮುರಿದು ಒಳಗೆ ನುಗ್ಗಿ ಸುಮಾರು 3 ಕೆಜಿ ಬೆಳ್ಳಿ ಮತ್ತು 250 ಗ್ರಾಂ ಚಿನ್ನಾಭರಣ ಕಳವು ಮಾಡಿದ್ದರು. ಕಳವಾದ ಆಭರಣಗಳನ್ನು ನಾಸಿಕ್‌ನಲ್ಲಿ ಮಾರಾಟ ಮಾಡಿರುವುದಾಗಿ ಮಾಹಿತಿ ಬಹಿರಂಗವಾಗಿದೆ.
ಈ ಗ್ಯಾಂಗ್ ರೈಲಿನ ಮೂಲಕ ಆಗಾಗ ಬೆಂಗಳೂರಿಗೆ ಬಂದು ಮೊದಲು ಏರಿಯಾಗಳಲ್ಲಿ ರೆಕ್ಕಿ ನಡೆಸಿ ಬೀಗ ಹಾಕಿದ ಮನೆಗಳನ್ನು ಗುರುತಿಸುತ್ತಿದ್ದರು. ನಂತರ ರಾತ್ರಿ ವೇಳೆ ರಾಡ್ ಮತ್ತು ಕಟರ್ ಬಳಸಿ ಲಾಕ್ ಒಡೆದು ಕಳ್ಳತನ ಮಾಡುತ್ತಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಈ ಸಂಬಂಧ ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಉಳಿದ ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ. ಬಂಧಿತರಿಂದ ಇನ್ನಷ್ಟು ಮಾಹಿತಿ ಕಲೆಹಾಕಲು ವಿಚಾರಣೆಗೊಳಪಡಿಸಲಾಗಿದೆ.
ಇದನ್ನೂ ಓದಿ : ದೈವದ ಭಂಡಾರ ಮೆರವಣಿಗೆ ವೇಳೆ ಕುಸಿದ ಕಿರು ಸೇತುವೆ.. 8 ಮಂದಿಗೆ ಗಾಯ, ವಿಡಿಯೋ ವೈರಲ್!


















