ಬೆಂಗಳೂರು: ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಯುವಕನೋರ್ವ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸಿರುವ ಘಟನೆಯೊಂದು ಬೆಳಕಿಗೆ ಬಂದಿದೆ.
ರಸ್ತೆ ಕಾಮಗಾರಿಗಾಗಿ ಬಿಬಿಎಂಪಿ ಬೇಕಾಬಿಟ್ಟಿಯಾಗಿ ರಸ್ತೆ ಅಗೆದಿದ್ದರಿಂದಾಗಿ ಅಪಘಾತವೊಂದು ಸಂಭವಿಸಿದೆ. ಈ ಅಪಘಾತದಲ್ಲಿ ಯುವಕನೋರ್ವ ಗಂಭೀರವಾಗಿ ಗಾಯಗೊಂಡಿದ್ದು, ಆತನ ಸ್ಥಿತಿ ಚಿಂತಾಜನಕವಾಗಿದೆ.
ಘಟನೆ ಜೂ. 8ರಂದು ನಡೆದಿದ್ದು, ಯುವಕನ ತಂದೆಯು ಬಿಬಿಎಂಪಿ, ಜಲಮಂಡಳಿ ಹಾಗೂ ಗೂತ್ತಿಗೆದಾನ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ. ಯುವಕನ ತಂದೆ ಕೊಟ್ಟ ದೂರಿನ ಅನ್ವಯ ರಾಜಾಜಿನಗರ ಸಂಚಾರ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿದೆ.
ರಾಜ್ ಕುಮಾರ್ ರಸ್ತೆಯ ಕಾಫಿ ಡೇ ಮುಂಭಾಗ ಬಿಬಿಎಂಪಿ ಕಾಮಗಾರಿಯಿಂದಾಗಿ ಅನಾಹುತ ಸಂಭವಿಸಿದೆ. ರಸ್ತೆ ಪಕ್ಕದಲ್ಲಿ ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೆ ಪಾಲಿಕೆ ಕಾಮಗಾರಿ ಕೈಗೊಂಡಿದೆ. ಘಟನೆಯಲ್ಲಿ ಮಂಜುನಾಥ್ ಬಿ.ಜಿ (28) ಗಾಯಗೊಂಡಿರುವ ಯುವಕ. ಯುವಕನನ್ನು ತೀವ್ರ ನಿಗಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆಗೆ ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷವೇ ಕಾರಣ ಎಂದು ಮಂಜುನಾಥ್ ಬಿ.ಜಿ ಅವರ ತಂದೆ ಗಣೇಶ್ ದೂರು ನೀಡಿದ್ದಾರೆ.



















