ಬೆಳಗಾವಿ : ಜಿಲ್ಲೆಯ ಹುಕ್ಕೇರಿ ತಾಲೂಕಿನ ಘೋಡಗೇರಿ ಗ್ರಾಮದಲ್ಲಿ ಮಾಜಿ ಸೈನಿಕನ ಸಾವಿನ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, 2 ಕೋಟಿ ರೂಪಾಯಿ ವಿಮೆ ಹಣಕ್ಕಾಗಿ ಸಂಚು ರೂಪಿಸಿ ಕೊಲೆ ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಮೂರು ತಿಂಗಳ ಹಿಂದೆ ಮೃತಪಟ್ಟಿದ್ದ ಮಾಜಿ ಸೈನಿಕ ಸಂದೀಪ್ ಮಂಜರಗಿ (45) ಅವರ ಶವವನ್ನು ಇದೀಗ ಅಧಿಕಾರಿಗಳು ಹೊರತೆಗೆದು ಮರು ತನಿಖೆ ಆರಂಭಿಸಿದ್ದಾರೆ.
ಸಂದೀಪ್ ಮಂಜರಗಿ ಅವರು ಹುಕ್ಕೇರಿಯಲ್ಲಿ ನಡೆದ ಲಕ್ಷ್ಮೀದೇವಿ ಜಾತ್ರೆ ಮುಗಿಸಿಕೊಂಡು ಮನೆಗೆ ವಾಪಸಾಗುವ ವೇಳೆ ರಸ್ತೆ ಅಪಘಾತಕ್ಕೀಡಾಗಿದ್ದರು. ಗಾಯಗೊಂಡಿದ್ದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಅನುಮಾನಾಸ್ಪದವಾಗಿ ಮೃತಪಟ್ಟಿದ್ದರು.
ಮೃತನ ಕುಟುಂಬಸ್ಥರ ಆರೋಪದ ಪ್ರಕಾರ, ಸಂದೀಪ್ ಅವರ ಪತ್ನಿ ಸುಮಾ ಮಂಜರಗಿ ಹಾಗೂ ಆಕೆಯ ಪ್ರಿಯಕರ ಪುಂಡಲೀಕ ಸೇರಿ ಕೊಲೆ ಸಂಚು ರೂಪಿಸಿದ್ದರು. ಅನೈತಿಕ ಸಂಬಂಧ ಬಹಿರಂಗವಾಗುವ ಭಯ ಹಾಗೂ ಗಂಡ ಮೃತಪಟ್ಟರೆ ವಿಮೆ ಹಣ ದೊರೆಯುತ್ತದೆ ಎಂಬ ಉದ್ದೇಶದಿಂದ ಈ ಕೃತ್ಯ ಎಸಗಲಾಗಿದೆ ಎಂದು ಆರೋಪಿಸಲಾಗಿದೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂದೀಪ್ ಅವರಿಗೆ ನೀಡಲಾಗುತ್ತಿದ್ದ ಗ್ಲೂಕೋಸ್ ಬಾಟಲಿಗೆ ವಿಷ ಬೆರೆಸಿ ಕೊಲೆ ಮಾಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ಆರಂಭದಲ್ಲಿ ಸಹಜ ಸಾವು ಎಂದು ಕಂಡುಬಂದಿದ್ದ ಪ್ರಕರಣದಲ್ಲಿ ಬಳಿಕ ಅನುಮಾನಗಳು ಮೂಡಿದ ಹಿನ್ನೆಲೆಯಲ್ಲಿ ಪೊಲೀಸರು ಮರು ತನಿಖೆ ಆರಂಭಿಸಿದ್ದರು.
ತನಿಖೆಯ ವೇಳೆ ಹಲವು ಮಹತ್ವದ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಬೆಳಗಾವಿ ಎಸಿ ಶ್ರವಣಕುಮಾರ್ ಅವರ ಸಮ್ಮುಖದಲ್ಲಿ ಹೂತಿದ್ದ ಶವವನ್ನು ಹೊರತೆಗೆದು ಪರಿಶೀಲನೆ ನಡೆಸಲಾಗಿದೆ. ಶವದಲ್ಲಿನ ಅವಶೇಷಗಳನ್ನು ಮತ್ತೊಮ್ಮೆ ಎಫ್‌ಎಸ್‌ಎಲ್ ಪರೀಕ್ಷೆಗೆ ರವಾನಿಸಲಾಗಿದ್ದು, ವರದಿ ಬಂದ ಬಳಿಕ ಸಾವಿನ ನಿಖರ ಕಾರಣ ತಿಳಿಯುವ ಸಾಧ್ಯತೆ ಇದೆ.
ಈ ನಡುವೆ ಪತ್ನಿ ಸುಮಾ ಮಂಜರಗಿ ಹಾಗೂ ಆಕೆಯ ಪ್ರಿಯಕರ ಪುಂಡಲೀಕ ಅವರನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಎಫ್‌ಎಸ್‌ಎಲ್ ವರದಿ ಬಂದ ಬಳಿಕ ಪ್ರಕರಣದ ನಿಜಾಂಶ ಮತ್ತಷ್ಟು ಸ್ಪಷ್ಟವಾಗುವ ನಿರೀಕ್ಷೆಯಿದೆ. ಮೂರು ತಿಂಗಳ ಕಾಲ ಮುಚ್ಚಿಹೋಗಿದ್ದ ಈ ಪ್ರಕರಣ ಇದೀಗ ಕೊಲೆ ಶಂಕೆಯ ಹಿನ್ನೆಲೆಯಲ್ಲಿ ಮತ್ತೆ ಸುದ್ದಿಯಲ್ಲಿದ್ದು, ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಇದನ್ನೂ ಓದಿ : ಧರ್ಮಸ್ಥಳ ಕೇಸಲ್ಲಿ ಪ್ರಕಾಶ್ ರಾಜ್ ಹೆಸರು ತಳುಕು – ಚಿನ್ನಯ್ಯ ಆರೋಪಕ್ಕೆ ಪ್ರಿಯಾಂಕ್ ಖರ್ಗೆ ಹೇಳಿದ್ದೇನು?



















