ಬೆಂಗಳೂರು : ವಿಶ್ವದ ಅತಿದೊಡ್ಡ ಮಹಿಳಾ ಸ್ವಯಂಸೇವಾ ಸೇವಾ ಸಂಘಟನೆಗಳಲ್ಲಿ ಒಂದಾದ Association of Inner Wheel Clubs in Indiaದ 51ನೇ ರಾಷ್ಟ್ರೀಯ ಅಧ್ಯಕ್ಷೆಯಾಗಿ ವಿನುತಾ ಹರೀಶ್ ಅವರು ಇಂದು (ಜೂನ್ 12) ಬೆಂಗಳೂರಿನ ಗಾಯತ್ರಿ ಗ್ರ್ಯಾಂಡ್‌ನಲ್ಲಿ ನಡೆದ ಸಮಾರಂಭದಲ್ಲಿ ಅಧಿಕಾರ ಸ್ವೀಕರಿಸಿದರು. ಇದೇ ವೇಳೆ 2026-27ನೇ ಸಾಲಿನ ಅಸೋಸಿಯೇಷನ್ ಕಾರ್ಯಕಾರಿ ಸಮಿತಿ ಹಾಗೂ ಕೌನ್ಸಿಲ್ ಸದಸ್ಯರ ಪದಗ್ರಹಣ ಕಾರ್ಯಕ್ರಮವೂ ನೆರವೇರಿತು.
ಈ ವರ್ಷ ಇನ್ನರ್ ವೀಲ್ ಡಿಸ್ಟ್ರಿಕ್ಟ್ 319 ತನ್ನ ಸುವರ್ಣ ಮಹೋತ್ಸವ (Golden Jubilee) ಆಚರಿಸುತ್ತಿದ್ದು, ಕರ್ನಾಟಕದಿಂದ 21 ವರ್ಷಗಳ ಬಳಿಕ 5ನೇ ಬಾರಿಗೆ ರಾಷ್ಟ್ರೀಯ ಅಧ್ಯಕ್ಷೆಯಾಗಿ ವಿನುತಾ ಹರೀಶ್ ಆಯ್ಕೆಯಾಗಿರುವುದು ವಿಶೇಷವಾಗಿದೆ.
ಅಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿದ ವಿನುತಾ ಹರೀಶ್ ಅವರು ಹಲವು ಮಹತ್ವಾಕಾಂಕ್ಷಿ ಯೋಜನೆಗಳನ್ನು ಘೋಷಿಸಿದ್ದಾರೆ. “FIT GIRL” ಅವರ ಪ್ರಮುಖ ಯೋಜನೆಯಾಗಿದ್ದು, “ದೈಹಿಕವಾಗಿ ಸದೃಢಳಾದ ಬಾಲಕಿ ಮಾನಸಿಕವಾಗಿ ಬಲಿಷ್ಠ ಮಹಿಳೆಯಾಗುತ್ತಾಳೆ” ಎಂಬ ಪರಿಕಲ್ಪನೆಯೊಂದಿಗೆ ಕಾರ್ಯಕ್ರಮ ಜಾರಿಗೊಳ್ಳಲಿದೆ.
“ಜೀವನಧಾರಾ” ಯೋಜನೆಯಡಿ ದೇಶದ 1,755 ಇನ್ನರ್ ವೀಲ್ ಕ್ಲಬ್‌ಗಳು ತಲಾ ಒಂದು ಡಯಾಲಿಸಿಸ್ ಚಿಕಿತ್ಸೆಗೆ ಪ್ರಾಯೋಜಕತ್ವ ನೀಡಲಿವೆ. ಆರ್ಥಿಕವಾಗಿ ಹಿಂದುಳಿದ ಮೂತ್ರಪಿಂಡ ರೋಗಿಗಳಿಗೆ ನೆರವು ನೀಡುವುದು ಇದರ ಉದ್ದೇಶವಾಗಿದೆ.
ಮಾನಸಿಕ ಆರೋಗ್ಯದ ಕುರಿತು ಜಾಗೃತಿ ಮೂಡಿಸಲು “ಸಂಬಂಧ” ಯೋಜನೆಯಡಿ ಆನ್‌ಲೈನ್ ಕೌನ್ಸೆಲಿಂಗ್ ಮತ್ತು ವೆಬಿನಾರ್‌ಗಳನ್ನು ಆಯೋಜಿಸಲಾಗುವುದು. ಮಹಿಳೆಯರು ಮತ್ತು ಯುವಜನರಲ್ಲಿ ಹೆಚ್ಚುತ್ತಿರುವ ಮಾನಸಿಕ ಒತ್ತಡ, ಖಿನ್ನತೆ ಹಾಗೂ ಆತಂಕದ ಸಮಸ್ಯೆಗಳ ಕುರಿತು ಮಾರ್ಗದರ್ಶನ ನೀಡಲಾಗುತ್ತದೆ.
ಇದೇ ವೇಳೆ ದೇಶಾದ್ಯಂತ ಇನ್ನರ್ ವೀಲ್ ಸದಸ್ಯರಿಗಾಗಿ “ಕ್ರೀಡಾ ಉತ್ಸವ” ಆಯೋಜಿಸಲಾಗುತ್ತಿದ್ದು, ಆರೋಗ್ಯಕರ ಜೀವನಶೈಲಿ ಹಾಗೂ ಸಂಘಟನಾ ಬಾಂಧವ್ಯವನ್ನು ಬಲಪಡಿಸುವ ಉದ್ದೇಶದಿಂದ ರಾಷ್ಟ್ರಮಟ್ಟದ ಕ್ರೀಡಾಕೂಟ ನಡೆಸಲಾಗುತ್ತದೆ. ಮಹಿಳಾ ಸಬಲೀಕರಣ, ಆರೋಗ್ಯ ಮತ್ತು ಸಮಾಜಸೇವೆಗೆ ಹೊಸ ಆಯಾಮ ನೀಡುವ ಗುರಿಯೊಂದಿಗೆ ವಿನುತಾ ಹರೀಶ್ ಅವರ ನೇತೃತ್ವದಲ್ಲಿ ಇನ್ನರ್ ವೀಲ್ ಅಸೋಸಿಯೇಷನ್ ಆಫ್ ಇಂಡಿಯಾ ಮುಂದಿನ ವರ್ಷದಲ್ಲಿ ಹಲವು ಜನಪರ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಿದೆ.
ಇನ್ನರ್ ವೀಲ್ ಅಸೋಸಿಯೇಷನ್ ಆಫ್ ಇಂಡಿಯಾದ ಇತಿಹಾಸ
1924ರಲ್ಲಿ ಇಂಗ್ಲೆಂಡ್‌ನ ಮ್ಯಾಂಚೆಸ್ಟರ್‌ನಲ್ಲಿ ಮಾರ್ಗರೆಟ್ ಒಲಿವರ್ ಗೋಲ್ಡಿಂಗ್ ಸ್ಥಾಪಿಸಿದ ಇನ್ನರ್ ವೀಲ್ ಚಳವಳಿ ಇಂದು ವಿಶ್ವದಾದ್ಯಂತ ಮಹಿಳಾ ಸೇವಾ ಸಂಘಟನೆಯಾಗಿ ಬೆಳೆದಿದೆ. ಭಾರತದಲ್ಲಿ 1955ರಲ್ಲಿ ಅಹಮದಾಬಾದ್‌ನಲ್ಲಿ ಮೊದಲ ಇನ್ನರ್ ವೀಲ್ ಕ್ಲಬ್ ಸ್ಥಾಪನೆಯಾಗಿದ್ದು, ಇಂದು 27 ಜಿಲ್ಲೆಗಳಲ್ಲಿ 1,755ಕ್ಕೂ ಹೆಚ್ಚು ಕ್ಲಬ್‌ಗಳು ಹಾಗೂ 60 ಸಾವಿರಕ್ಕೂ ಅಧಿಕ ಸದಸ್ಯರೊಂದಿಗೆ ಭಾರತ ವಿಶ್ವದ ಅತಿದೊಡ್ಡ ಇನ್ನರ್ ವೀಲ್ ಅಸೋಸಿಯೇಷನ್ ಆಗಿದೆ.
1976ರ ಜುಲೈ 1ರಂದು ಅಸೋಸಿಯೇಷನ್ ಅಧಿಕೃತವಾಗಿ ಸ್ಥಾಪನೆಯಾಗಿದ್ದು, 1985ರಿಂದ Association of Inner Wheel Clubs in India ಎಂಬ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಮಹಿಳಾ ಸಬಲೀಕರಣ, ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ಸೇವೆಯಲ್ಲಿ ಸಂಘಟನೆ ಮಹತ್ವದ ಪಾತ್ರ ವಹಿಸಿದೆ.
ಇದನ್ನೂ ಓದಿ : ಪೆಟ್ರೋಲ್ ಬಂಕ್‌ಗಳಲ್ಲಿ ಕೈಗಾರಿಕಾ ಸಂಸ್ಥೆಗಳಿಗೆ ಇಂಧನ ಮಾರಾಟ ನಿಷೇಧ : ಕೇಂದ್ರ ಸರ್ಕಾರದಿಂದ ದಿಢೀರ್ ಆದೇಶ!


















