ಬೆಂಗಳೂರು: ಹಿಂದುಳಿದ ವರ್ಗ, ದಲಿತ ಹಾಗೂ ಶೋಷಿತ ಸಮುದಾಯಗಳ ಸ್ವಾಮೀಜಿಗಳ ಒಕ್ಕೂಟದಿಂದ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ತಮ್ಮ ನೈತಿಕ ಬೆಂಬಲ ಘೋಷಿಸಿದ್ದಾರೆ.
ಮುಡಾ ಹಗರಣ ಮತ್ತು ವಾಲ್ಮೀಕಿ ಹಗರಣ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯಿಸಿರುವ ವಿಪಕ್ಷಗಳ ನಿಲುವನ್ನು ಸ್ವಾಮೀಜಿಗಳು ಖಂಡಿಸಿದ್ದಾರೆ. ಕೇಂದ್ರ ಸರ್ಕಾರದ ಮತ್ತು ರಾಜಭವನದ ಷಡ್ಯಂತ್ರ ಮಾಡುತ್ತಿರುವುದಾಗಿ ತೀವ್ರವಾಗಿ ಖಂಡಿಸಿದ ಸ್ವಾಮೀಜಿಗಳು ಈ ಷಡ್ಯಂತ್ರದ ವಿರುದ್ಧ ಒಕ್ಕೊರಲಿನಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ನಿಂತು ಹೋರಾಟ ನಡೆಸುವುದಾಗಿ ಭರವಸೆ ನೀಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಸಿಎಂ ಸಿದ್ದರಾಮಯ್ಯ, ಎಲ್ಲ ಸ್ವಾಮೀಜಿಗಳಿಗೆ ಧನ್ಯವಾದ ಸಮರ್ಪಿಸಿದ್ದಾರೆ. ಮುಡಾ ವಿಚಾರದಲ್ಲಿ ನನ್ನ ವಿರುದ್ಧ ಷಡ್ಯಂತ್ರ ರೂಪಿಸಿ, ನನ್ನನ್ನು ರಾಜಕೀಯವಾಗಿ ಮುಗಿಸಲು ಹೊರಟಿರುವ ಎದುರಾಳಿಗಳ ಕುಟಿಲ ಕಾರಸ್ಥಾನವನ್ನು ಅರ್ಥಮಾಡಿಕೊಂಡು ನೈತಿಕವಾಗಿ ನನ್ನ ಬೆಂಬಲಕ್ಕೆ ನಿಂತಿರುವ ಮೇಲ್ನೋಟಕ್ಕೆ ಇದು ರಾಜಕೀಯ ಸಂಘರ್ಷವೆನಿಸಿದರೂ ಆಂತರ್ಯದಲ್ಲಿ ಹಿಂದುಳಿದ ಜಾತಿಗೆ ಸೇರಿದ ನಾಯಕನೊಬ್ಬನ ಏಳಿಗೆ ಸಹಿಸದ ಪಟ್ಟಭದ್ರರು ಕುತಂತ್ರದಿಂದ ಹೆಣೆದ ಷಡ್ಯಂತ್ರ ಎಂಬುದು ಸೂರ್ಯ ಚಂದ್ರರಷ್ಟೇ ಸತ್ಯ ಎಂದು ಬರೆದುಕೊಂಡಿದ್ದಾರೆ.
ಬುದ್ಧ, ಬಸವ, ಬಾಬಾ ಸಾಹೇಬ್, ಕನಕದಾಸರು, ನಾರಾಯಣ ಗುರುಗಳ ಆಶಯದಂತೆ ಸಮಸಮಾಜದ ಸ್ಥಾಪನೆಗಾಗಿ, ಶೋಷಿತ, ಅವಕಾಶ ವಂಚಿತ, ದೀನ ದಲಿತ, ಬಡಜನರ ಕಲ್ಯಾಣಕ್ಕಾಗಿ ದುಡಿಯುತ್ತಿರುವ ನಾನು ಪಟ್ಟಭದ್ರ ಹಿತಾಸಕ್ತಿಗಳಿಗೆ ಕಳೆದ 40 ವರ್ಷಗಳಿಂದ ಬಹುದೊಡ್ಡ ಸವಾಲಾಗಿದ್ದೇನೆ. ನನ್ನನ್ನು ಮೂಲೆಗೆ ಸರಿಸುವ ಮೂಲಕ ಸಮಾಜದ ಬಹುಸಂಖ್ಯಾತ ಜನರ ಧ್ವನಿಯನ್ನು ಅಡಗಿಸುವ ಪ್ರಯತ್ನ ಇಂದು ನಡೆಯುತ್ತಿದೆ. ಬಹಳಷ್ಟು ಮಂದಿ ಪೂಜ್ಯ ಸ್ವಾಮೀಜಿಗಳು ಇದನ್ನು ಅರಿತು ನನ್ನ ಬೆಂಬಲಕ್ಕೆ ನಿಂತು, ಇಡೀ ಸಮಾಜಕ್ಕೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಸತ್ಯ ನನ್ನ ಜತೆ ಇದೆ, ನಾನು ಸತ್ಯದ ಜತೆ ನಾನಿದ್ದೇನೆ. “ಸತ್ಯಮೇವ ಜಯತೇ” ಎಂದು ಸಿದ್ದರಾಮಯ್ಯ ಬರೆದುಕೊಂಡಿದ್ದಾರೆ.


















