ಬೀದರ್ : ಜಿಲ್ಲೆಯಲ್ಲಿ ಮಾದಕ ವಸ್ತುಗಳ ಅಕ್ರಮ ಸಾಗಾಟದ ವಿರುದ್ಧ ಪೊಲೀಸ್ ಇಲಾಖೆ ಯಶಸ್ವಿ ಕಾರ್ಯಾಚರಣೆ ನಡೆಸಿದೆ. ಖಚಿತ ಮಾಹಿತಿಯ ಮೇರೆಗೆ ಬೀದರ್ ಗ್ರಾಮೀಣ ಪೊಲೀಸ್ ಠಾಣೆ ಅಧಿಕಾರಿಗಳು ಬೀದರ್ ತಾಲೂಕಿನ ಮರ್ಜಾಪೂರ ಗ್ರಾಮದ ಅರಣ್ಯ ಪ್ರದೇಶದ ಬಳಿ ದಾಳಿ ನಡೆಸಿ, ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿತರನ್ನು ಬಂಧಿಸಿದ್ದಾರೆ.
ದ್ವಿಚಕ್ರ ವಾಹನದಲ್ಲಿ ಗೋಣಿ ಚೀಲದ ಮೂಲಕ ಗಾಂಜಾ ಸಾಗಿಸಲಾಗುತ್ತಿತ್ತು. ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ಆರೋಪಿತರನ್ನು ತಡೆದು ಪರಿಶೀಲಿಸಿದ ವೇಳೆ ಆರಂಭದಲ್ಲಿ ಚೀಲದಲ್ಲಿ ಬೀಜದ ಪಾಕೀಟಗಳಿವೆ ಎಂದು ಅವರು ಹೇಳಿದ್ದರು. ಆದರೆ ಪೊಲೀಸರು ಪರಿಶೀಲನೆ ನಡೆಸಿದಾಗ ಖಾಕಿ ಬಣ್ಣದ ಪ್ಲಾಸ್ಟಿಕ್ ಪಾಕೀಟಗಳಲ್ಲಿ ಗಾಂಜಾ ಇರುವುದನ್ನು ಪತ್ತೆಹಚ್ಚಿದ್ದಾರೆ.
ತನಿಖೆ ವೇಳೆ ಆರೋಪಿತರು ಹೆಚ್ಚಿನ ಹಣ ಗಳಿಸುವ ಉದ್ದೇಶದಿಂದ ಗಾಂಜಾವನ್ನು ಖರೀದಿಸಿ ಮಾರಾಟ ಮಾಡಲು ಸಾಗಿಸುತ್ತಿದ್ದುದಾಗಿ ಒಪ್ಪಿಕೊಂಡಿರುವುದು ತಿಳಿದುಬಂದಿದೆ. ಈ ಮೂಲಕ ಅಕ್ರಮ ಮಾದಕ ವಸ್ತು ಜಾಲದ ಮತ್ತೊಂದು ಕೊಂಡಿಯನ್ನು ಪೊಲೀಸರು ಭೇದಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಆರೋಪಿತರ ವಶದಿಂದ 5 ಲಕ್ಷ 88 ಸಾವಿರ 750 ರೂಪಾಯಿ ಮೌಲ್ಯದ 11 ಕೆಜಿ 775 ಗ್ರಾಂ ಗಾಂಜಾವನ್ನು ಜಪ್ತಿ ಮಾಡಲಾಗಿದೆ. ಅಲ್ಲದೆ ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನವನ್ನು ಸಹ ವಶಪಡಿಸಿಕೊಳ್ಳಲಾಗಿದೆ.
ಗಾಂಜಾ ಹಾಗೂ ವಾಹನ ಸೇರಿ ಒಟ್ಟು 6 ಲಕ್ಷ 38 ಸಾವಿರ 750 ರೂಪಾಯಿ ಮೌಲ್ಯದ ಮುದ್ದೆಮಾಲನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಐವರು ಆರೋಪಿತರ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಬಂಧಿತ ಇಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಉಳಿದ ಮೂವರು ಆರೋಪಿತರ ಪತ್ತೆಗಾಗಿ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
ಇದನ್ನೂ ಓದಿ : ಡೆಡ್ಲಿ ವೀಲ್ಹಿಂಗ್ ಮಾಡಿ ಪೊಲೀಸರ ಕೈಗೆ ತಗ್ಲಾಕೊಂಡ ಯುವಕ!


















