ವಯನಾಡು: ಕೇರಳದ ವಯನಾಡಿನಲ್ಲಿ ಭಾರೀ ಭೂಕುಸಿತ ಉಂಟಾಗಿದ್ದು, ನೂರಾರು ಜನರು ಸಾವನ್ನಪ್ಪಿ, ಸಾವಿರಾರು ಜನರು ಬೀದಿಗೆ ಬಂದಿದ್ದಾರೆ. ಈ ಸಂದರ್ಭದಲ್ಲಿ ಎಲ್ಲ ರಾಜಕಾರಣಿಗಳು ಒಗ್ಗಟ್ಟಾಗಿ ಜನರ ಕಣ್ಣೀರು ಒರೆಸಬೇಕಿದೆ. ಆದರೆ, ಈ ವಿಷಯವೂ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗುತ್ತಿರುವುದು ದುರ್ದೈವದ ಸಂಗತಿ. ಜನರ ಕಣ್ಣೀರಿನಲ್ಲಿಯೂ ರಾಜಕೀಯ ಮಾಡುವುದು ಎಷ್ಟು ಸರಿ ಎಂಬ ಪ್ರಶ್ನೆ ಈಗ ಮೂಡುತ್ತಿದೆ.
ಕೇಂದ್ರ ಸರ್ಕಾರ ಜುಲೈ 23ರಂದು ಮುನ್ನೆಚ್ಚರಿಕೆ ನೀಡಿದ್ದರೂ ಕೇರಳದ ಪಿಣರಾಯಿ ವಿಜಯನ್ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದರು. ಅದಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿರುಗೇಟು ನೀಡಿದ್ದು, ಭೂಕುಸಿತ ಪೀಡಿತ ವಯನಾಡಿಗೆ ಕೇಂದ್ರ ಸರ್ಕಾರ ಒಮ್ಮೆಯೂ IMD, GSI ಅಥವಾ CWC ರೆಡ್ ಅಲರ್ಟ್ ನೀಡಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಮಳೆಯಿಂದಾಗಿ ವಿನಾಶಕಾರಿ ಭೂಕುಸಿತಗಳು ಸಂಭವಿಸಿ ಹಲವಾರು ಜನರನ್ನು ಬಲಿತೆಗೆದುಕೊಳ್ಳುವ ಮುನ್ನವೇ ರಾಜ್ಯ ಸರ್ಕಾರಕ್ಕೆ ಹವಾಮಾನ ಮುನ್ನೆಚ್ಚರಿಕೆಗಳನ್ನು ನೀಡಲಾಗಿತ್ತು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಯನ್ನು ಕೇರಳ ಸಿಎಂ ಪಿಣರಾಯಿ ವಿಜಯನ್ ತಳ್ಳಿಹಾಕಿದ್ದಾರೆ.
ಭೂಕುಸಿತ ಸಂಭವಿಸುವ ಕನಿಷ್ಠ ಒಂದು ವಾರದ ಹಿಂದೆ ಕೇರಳದಲ್ಲಿ ಭಾರೀ ಮಳೆಯಾಗುವ ಬಗ್ಗೆ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಕೆ ನೀಡಿತ್ತು ಮತ್ತು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆಯ 8 ತಂಡಗಳನ್ನು ಕಳುಹಿಸಲಾಗಿತ್ತು ಎಂದು ಅಮಿತ್ ಶಾ ಹೇಳಿದ್ದಾರೆ. ಜುಲೈ 18ರಂದು ಕೇರಳದ ಪಶ್ಚಿಮ ಕರಾವಳಿಯು ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯನ್ನು ಅನುಭವಿಸುತ್ತದೆ ಎಂದು ಮುನ್ಸೂಚನೆ ನೀಡಲಾಗಿತ್ತು. ಜುಲೈ 25ರಂದು ಭಾರೀ ಮಳೆಯಾಗುವ ಮುನ್ಸೂಚನೆ ನೀಡಲಾಗಿತ್ತು ಎಂದು ಶಾ ಹೇಳಿದ್ದಾರೆ.
ಸ್ಪಷ್ಟನೆ ನೀಡಿರುವ ಪಿಣರಾಯಿ ವಿಜಯನ್, ಹವಾಮಾನ ಇಲಾಖೆಯ ಎಚ್ಚರಿಕೆಗಳ ಹೊರತಾಗಿಯೂ ಭೂಕುಸಿತಕ್ಕೂ ಮುನ್ನ ವಯನಾಡಿಗೆ ಯಾವುದೇ ರೆಡ್ ಅಲರ್ಟ್ ನೀಡಿರಲಿಲ್ಲ. ವಯನಾಡು ಜಿಲ್ಲೆಯಲ್ಲಿ 500 ಮಿಲಿಮೀಟರ್‌ಗೂ ಹೆಚ್ಚು ಮಳೆಯಾಗಿದ್ದು, ಭವಿಷ್ಯ ನುಡಿದಿದ್ದಕ್ಕಿಂತ ಹೆಚ್ಚು ತೀವ್ರ ಹವಾಮಾನವನ್ನು ಅನುಭವಿಸಿದೆ ಎಂದು ತಿರುಗೇಟು ನೀಡಿದ್ದಾರೆ.