ದೇಶಾದ್ಯಂತ ಇಂದು 25ನೇ ಕಾರ್ಗಿಲ್ ವಿಜಯ್ ದಿವಸ ಆಚರಿಸಲಾಗುತ್ತಿದೆ. ಹೀಗಾಗಿ ಪ್ರಧಾನಿ ಮೋದಿ ಇಂದು ದ್ರಾಸ್ ನಲ್ಲಿನ ಯುದ್ಧ ಸ್ಮಾರಕಕ್ಕೆ ತೆರಳಿ ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದ್ದಾರೆ. ಅವರ ಬಲಿದಾನವನ್ನು ಕೊಂಡಾಡಿದ್ದಾರೆ.
ಕಾರ್ಗಿಲ್ ವಿಜಯ್ ದಿವಸ್ ನ 25 ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ದ್ರಾಸ್ ನಲ್ಲಿ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಕಾರ್ಗಿಲ್ ಯುದ್ಧವೀರರ ಬಲಿದಾನ ನೆನೆಯಲಾಯಿತು. ಜುಲೈ 26, 1999 ರಂದು, ಪಾಕಿಸ್ತಾನಿ ಸೇನೆಯನ್ನು ಓಡಿಸುವಾಗ ಭಾರತೀಯ ಸೇನೆಯು ಕಾರ್ಗಿಲ್ ನಲ್ಲಿ ವಿಜಯದ ತ್ರಿವರ್ಣ ಧ್ವಜ ಹಾರಿಸಿತು. ಅಂದಿನಿಂದ, ಪ್ರತಿ ವರ್ಷ ಜುಲೈ 26 ರಂದು ಭಾರತವು “ಕಾರ್ಗಿಲ್ ವಿಜಯ್ ದಿವಸ್” ಆಚರಿಸುತ್ತಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಲೇಹ್ ಹೆದ್ದಾರಿಯಲ್ಲಿರುವ ದ್ರಾಸ್‌ನಲ್ಲಿರುವ ಕಾರ್ಗಿಲ್ ಯುದ್ಧ ಸ್ಮಾರಕಕ್ಕೆ ತೆರಳಿ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಕಾರ್ಗಿಲ್ ಯುದ್ಧ ಸ್ಮಾರಕವನ್ನು ನೋಡಲು ಪ್ರವಾಸಿಗರು ದೇಶ- ವಿದೇಶಗಳಿಂದ ಆಗಮಿಸುತ್ತಾರೆ. ದೇಶದ ವೀರರು ಹೇಗೆ ಶೌರ್ಯ ಪ್ರದರ್ಶಿಸಿ ಹುತಾತ್ಮರಾದರು. ಇಲ್ಲಿ ಯಾರೇ ಬಂದರೂ ಅವರ ಕಣ್ಣುಗಳು ತೇವವಾಗುತ್ತವೆ. ಕಾರ್ಗಿಲ್ ಯುದ್ಧ ಸ್ಮಾರಕದ ಬಳಿ ಮ್ಯೂಸಿಯಂ ಇದೆ. ಇದರಲ್ಲಿ ಯುದ್ಧದ ಸಮಯದಲ್ಲಿ ತೆಗೆದ ಛಾಯಾಚಿತ್ರಗಳು, ಸೇನೆಯ ಚಿಹ್ನೆಗಳು, ಯುದ್ಧ ದಾಖಲೆಗಳು, ಹಿಮಾಲಯ ಪರ್ವತ ಶ್ರೇಣಿಯ ಚಿಕಣಿ ಚಿತ್ರಗಳನ್ನು ಇಡಲಾಗಿದೆ. ಈ ಯುದ್ಧ ಸ್ಮಾರಕದ ಗೋಡೆಗಳ ಮೇಲೆ ತಮ್ಮ ಪ್ರಾಣ ತ್ಯಾಗ ಮಾಡಿದ ಸೈನಿಕರು ಮತ್ತು ಅಧಿಕಾರಿಗಳ ಹೆಸರುಗಳನ್ನು ಕೆತ್ತಲಾಗಿದೆ. ಈ ಸ್ಥಳದಲ್ಲಿ ನಿಂತು ಪ್ರಧಾನಿ ಮೋದಿ ಅವರು ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದ್ದಾರೆ. ಇಡೀ ದೇಶವೇ ಇಂದು ನಮನ ಸಲ್ಲಿಸುತ್ತಿದೆ.


















