ಬೆಂಗಳೂರು: ಉದ್ಯೋಗಿಗಳ ವೇತನದಿಂದ ಪ್ರತಿ ತಿಂಗಳು ಭವಿಷ್ಯ ನಿಧಿ (PF) ಹಣವನ್ನು ಕಡಿತಗೊಳಿಸಲಾಗುತ್ತದೆ. ಆದರೆ, ಸ್ಯಾಲರಿ ಸ್ಲಿಪ್ ನಲ್ಲಿ (Salary Slip) ಹಣ ಕಡಿತವಾಗಿರುವುದನ್ನು ಕಂಡ ಮಾತ್ರಕ್ಕೆ, ಆ ಹಣವು ನಿಮ್ಮ ಪಿಎಫ್ ಖಾತೆಗೆ ಸರಿಯಾಗಿ ಜಮೆಯಾಗುತ್ತಿದೆ ಎಂದರ್ಥವಲ್ಲ. ಹಲವು ಸಂದರ್ಭಗಳಲ್ಲಿ ಕಂಪನಿಗಳು ಕಡಿತಗೊಳಿಸಿದ ಹಣವನ್ನು ಇಪಿಎಫ್ಒ ಖಾತೆಗೆ ಜಮಾ ಮಾಡದಿರುವ ಉದಾಹರಣೆಗಳಿವೆ. ಹಾಗಾಗಿ, ಈ ಕುರಿತು ಖಾಸಗಿ ಕಂಪನಿಗಳ ಉದ್ಯೋಗಿಗಳು ಎಚ್ಚರಿಕೆಯಿಂದ ಇರುವುದು ಒಳಿತು ಎಂದು ಹಣಕಾಸು ತಜ್ಞರು ತಿಳಿಸಿದ್ದಾರೆ.
ಪಿಎಫ್ ಜಮಾ ಮಾಡಲು ಇರುವ ನಿಯಮಗಳೇನು?
ಇಪಿಎಫ್ಒ ನಿಯಮಗಳ ಪ್ರಕಾರ, ಕಂಪನಿಗಳು ಪ್ರತಿ ತಿಂಗಳು ಮುಕ್ತಾಯವಾದ 15 ದಿನಗಳ ಒಳಗೆ ಪಿಎಫ್ ಕೊಡುಗೆಯನ್ನು ಕಡ್ಡಾಯವಾಗಿ ಜಮಾ ಮಾಡಬೇಕು. ಉದಾಹರಣೆಗೆ, ಅಕ್ಟೋಬರ್ ತಿಂಗಳ ವೇತನದಿಂದ ಕಡಿತಗೊಳಿಸಿದ ಪಿಎಫ್ ಮೊತ್ತವನ್ನು ನವೆಂಬರ್ 15ರೊಳಗೆ ಜಮಾ ಮಾಡುವುದು ಕಡ್ಡಾಯವಾಗಿದೆ. ಕಂಪನಿಗಳು ಪಿಎಫ್ ಖಾತೆಗೆ ಜಮೆ ಮಾಡದೆಯೂ ಇರಬಹುದು. ಇದರಿಂದ ಉದ್ಯೋಗಿಗಳಿಗೆ ನಷ್ಟವಾಗುತ್ತದೆ. ತಡವಾಗಿ ಜಮೆ ಮಾಡಿದರೆ ಬಡ್ಡಿ ನಷ್ಟವಾಗುತ್ತದೆ. ಹಾಗಾಗಿ, ನಿಯಮಿತವಾಗಿ ಪಿಎಫ್ ಖಾತೆಗೆ ಹಣ ಜಮೆಯಾಗಿರುವುದನ್ನು ಉದ್ಯೋಗಿಗಳು ಪರಿಶೀಲಿಸಬೇಕು.
ಪಿಎಫ್ ಜಮಾ ಆಗಿದೆಯೆಂಬುದನ್ನು ಪರಿಶೀಲಿಸುವುದು ಹೇಗೆ?
- ಇಪಿಎಫ್ಒ ಸದಸ್ಯರ ಪಾಸ್ ಬುಕ್ ಪೋರ್ಟಲ್ ಗೆ ಭೇಟಿ ನೀಡಿ.
- ನಿಮ್ಮ ಯುಎಎನ್ ಮತ್ತು ಪಾಸ್ ವರ್ಡ್ ಬಳಸಿ ಲಾಗಿನ್ ಆಗಿ.
- ನಿಮ್ಮ ಕಂಪನಿಗೆ ಸಂಬಂಧಿಸಿದ ಮೆಂಬರ್ ಐಡಿ ಆಯ್ಕೆಮಾಡಿ.
- ಪ್ರತಿ ತಿಂಗಳು ಜಮೆ ಆಗಿರುವ ವಿವರಕ್ಕಾಗಿ ಪಾಸ್ ಬುಕ್ ತೆರೆಯಿರಿ. ಇದರಲ್ಲಿ ಉದ್ಯೋಗಿ ಮತ್ತು ಉದ್ಯೋಗದಾತ ಇಬ್ಬರ ಕೊಡುಗೆಯೂ ಜಮೆಯಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.
ಇದರ ಜತೆಗೆ, ಉದ್ಯೋಗಿಗಳು ತಮ್ಮ ವೇತನ ಸ್ಲಿಪ್ ನಲ್ಲಿರುವ ಕಡಿತದ ಮೊತ್ತವನ್ನು ಪಿಎಫ್ ಪಾಸ್ ಬುಕ್ ನೊಂದಿಗೆ ಕಾಲಕಾಲಕ್ಕೆ ಹೋಲಿಸಿ ನೋಡುವುದು ಉತ್ತಮ.
ಪಿಎಫ್ ಹಣ ಜಮೆಯಾಗದಿದ್ದರೆ ಏನು ಮಾಡಬೇಕು?
ಪಾಸ್ ಬುಕ್ ನಲ್ಲಿ ಹಣ ಕಾಣಿಸದಿದ್ದ ಮಾತ್ರಕ್ಕೆ ಕಂಪನಿಯು ವಂಚಿಸಿದೆ ಎಂದರ್ಥವಲ್ಲ. ಕೆಲವೊಮ್ಮೆ ಪ್ರಕ್ರಿಯೆ ಅಥವಾ ಅಪ್ ಡೇಟ್ ಆಗಲು ಸ್ವಲ್ಪ ಕಾಲಾವಕಾಶ ತೆಗೆದುಕೊಳ್ಳಬಹುದು. ಆದರೂ ನಿಗದಿತ ಗಡುವು ಮುಗಿದ ನಂತರವೂ ಹಣ ಜಮೆಯಾಗದಿದ್ದರೆ ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳಿ:
• ನಿಮ್ಮ ಕಂಪನಿಯ ಎಚ್.ಆರ್ ಅಥವಾ ವೇತನ ವಿಭಾಗವನ್ನು ಸಂಪರ್ಕಿಸಿ. ಇದರ ಬಗ್ಗೆ ಮಾತನಾಡಿ ಸ್ಪಷ್ಟನೆ ಪಡೆದುಕೊಳ್ಳಿ.
• ಇಪಿಎಫ್ಒಗೆ ದೂರು ದಾಖಲಿಸಿ: ಸಮಸ್ಯೆ ಬಗೆಹರಿಯದಿದ್ದರೆ, ಅಧಿಕೃತ EPFiGMS ಪೋರ್ಟಲ್ (https://epfigms.gov.in) ಮೂಲಕ ದೂರು ದಾಖಲಿಸಬಹುದು. ದೂರಿನ ಪ್ರಗತಿಯನ್ನು ಟ್ರ್ಯಾಕ್ ಮಾಡಲು ಅಲ್ಲಿ ನೋಂದಣಿ ಸಂಖ್ಯೆ ಲಭ್ಯವಿರುತ್ತದೆ.
ನಿಯಮ ಉಲ್ಲಂಘಿಸುವ ಕಂಪನಿಗಳ ವಿರುದ್ಧ ಕ್ರಮವೇನು?
ನಿಗದಿತ ಅವಧಿಯೊಳಗೆ ಪಿಎಫ್ ಜಮಾ ಮಾಡದ ಉದ್ಯೋಗದಾತರ ವಿರುದ್ಧ ಇಪಿಎಫ್ಒ ಕಠಿಣ ಕ್ರಮ ಕೈಗೊಳ್ಳಲಿದೆ. ವಿಳಂಬ ಪಾವತಿಗೆ ಸೆಕ್ಷನ್ 7Q ಅಡಿಯಲ್ಲಿ ಬಡ್ಡಿ ಮತ್ತು ಸೆಕ್ಷನ್ 14B ಅಡಿಯಲ್ಲಿ ದಂಡ ವಿಧಿಸಲು ಅವಕಾಶವಿದೆ. ಉದ್ಯೋಗಿಗಳ ವೇತನದಿಂದ ಹಣ ಕಡಿತಗೊಳಿಸಿ ಅದನ್ನು ಜಮಾ ಮಾಡದ ಕಂಪನಿಗಳ ವಿರುದ್ಧ ಕಾನೂನು ಕ್ರಮಕ್ಕೂ ಅವಕಾಶವಿರುತ್ತದೆ.



















