ಕಛ್: ಗುಜರಾತ್ನ ಕಛ್ ಜಿಲ್ಲೆಯ ಭುಜ್-ಖಾವ್ಡಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸೇನಾ ಸಿಬ್ಬಂದಿಯ ಕುಟುಂಬಗಳಿಗೆ ಸೇರಿದ 7 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವೇಗವಾಗಿ ಬಂದ ಟ್ರೇಲರ್ ಟ್ರಕ್ ಮತ್ತು ಕಾರಿನ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯ ತೀವ್ರತೆಗೆ ಕಾರು ಎರಡು ಹೋಳಾಗಿದ್ದು, ಮೃತಪಟ್ಟವರಲ್ಲಿ ಇಬ್ಬರು ಪುರುಷರು, ಇಬ್ಬರು ಮಹಿಳೆಯರು ಹಾಗೂ ಮೂವರು ಮಕ್ಕಳು ಸೇರಿದ್ದಾರೆ.
ಪ್ರವಾಸ ಮುಗಿಸಿ ಮರಳುವಾಗ ಜವರಾಯನ ಅಟ್ಟಹಾಸ
ಮೃತರೆಲ್ಲರೂ ಮೂಲತಃ ಉತ್ತರಾಖಂಡದ ಗರ್ವಾಲ್ನವರಾಗಿದ್ದು, ಭುಜ್ನಲ್ಲಿ ನಿಯೋಜನೆಗೊಂಡಿದ್ದ ಸೇನಾ ಸಿಬ್ಬಂದಿಯ ಕುಟುಂಬ ಸದಸ್ಯರಾಗಿದ್ದರು. ಶನಿವಾರ ಕಛ್ನ ರಣ್ ಪ್ರವಾಸ ಮುಗಿಸಿ ಭುಜ್ಗೆ ಹಿಂತಿರುಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂದು ಕಛ್ ಪಶ್ಚಿಮ ಪೊಲೀಸ್ ನಿಯಂತ್ರಣ ಕೊಠಡಿಯ ಅಧಿಕಾರಿಗಳು ತಿಳಿಸಿದ್ದಾರೆ. ಅಪಘಾತದ ರಭಸ ಎಷ್ಟಿತ್ತೆಂದರೆ, ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಮೃತದೇಹಗಳು ಛಿದ್ರಗೊಂಡು ರಸ್ತೆಯೆಲ್ಲಾ ರಕ್ತಮಯವಾಗಿತ್ತು. ನಜ್ಜುಗುಜ್ಜಾದ ಕಾರಿನ ಅವಶೇಷಗಳಡಿಯಿಂದ ಮೃತದೇಹಗಳನ್ನು ಹೊರತೆಗೆಯಲು ಅಧಿಕಾರಿಗಳು ಗಂಟೆಗಟ್ಟಲೆ ಹರಸಾಹಸ ಪಡಬೇಕಾಯಿತು.
ಘಟನಾ ಸ್ಥಳಕ್ಕೆ ಹಾಗೂ ಆಸ್ಪತ್ರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕಾಸ್ ಸುಂದಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಈ ಭೀಕರ ದುರಂತದಲ್ಲಿ ಮೃತಪಟ್ಟವರನ್ನು ರಿಂಕಿ ನಿತಿನ್ ಗುಸೇನ್ (35), ಅವರ 4 ತಿಂಗಳ ಹಸುಗೂಸು ವಾಮಿಕಾ, ಸೌರಭ್ ಸಿಂಗ್ ನೇಗಿ (30), ಅವರ ಪತ್ನಿ ಸವಿತಾ ಸೌರಭ್ ಸಿಂಗ್ ನೇಗಿ (30), ಅವರ 3 ತಿಂಗಳ ಮಗು ಸಿವಿಕಾ, ರಾಜೇಶ್ ರಾವತ್ (35) ಹಾಗೂ ಅವರ 7 ವರ್ಷದ ಪುತ್ರಿ ರಕ್ಷಿತಾ ಎಂದು ಗುರುತಿಸಲಾಗಿದೆ.
ರಾಜಸ್ಥಾನದಲ್ಲೂ ಭೀಕರ ಅಪಘಾತ: ಒಂದೇ ಕುಟುಂಬದ 9 ಸಾವು
ಮತ್ತೊಂದೆಡೆ, ರಾಜಸ್ಥಾನದ ಕೋಟಾ-ಉದಯಪುರ ರಾಷ್ಟ್ರೀಯ ಹೆದ್ದಾರಿಯಲ್ಲೂ ಶನಿವಾರ ತಡರಾತ್ರಿ ಇದೇ ರೀತಿಯ ಭೀಕರ ಅಪಘಾತ ಸಂಭವಿಸಿದ್ದು, ಒಂದೇ ಕುಟುಂಬದ ಒಂಬತ್ತು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಮಹಾರಾಷ್ಟ್ರ ಮೂಲದ ಈ ಕುಟುಂಬವು ರಾಜಸ್ಥಾನದ ಖಾಟು ಶ್ಯಾಮ್ ದೇವಸ್ಥಾನದ ದರ್ಶನ ಪಡೆದು ಫೋರ್ಸ್ ಕ್ರೂಸರ್ ವಾಹನದಲ್ಲಿ ಮರಳುತ್ತಿದ್ದಾಗ, ಹೆದ್ದಾರಿಯಲ್ಲಿ ನಿಂತಿದ್ದ ಟ್ರಕ್ಗೆ ವಾಹನ ಡಿಕ್ಕಿ ಹೊಡೆದಿದೆ. ವಾಹನದಲ್ಲಿದ್ದ 15 ಮಂದಿಯ ಪೈಕಿ 9 ಮಂದಿ ಮೃತಪಟ್ಟಿದ್ದು, ಗಾಯಗೊಂಡಿರುವ ಆರು ಮಂದಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಧಾನಿ ಮೋದಿ ಸಂತಾಪ, ಪರಿಹಾರ ಘೋಷಣೆ
ಗುಜರಾತ್ನ ಕಛ್ ಮತ್ತು ರಾಜಸ್ಥಾನದ ಕೋಟಾದಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಉಂಟಾದ ಜೀವಹಾನಿಗೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಈ ಕುರಿತು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ದುಃಖ ಭರಿಸುವ ಶಕ್ತಿ ಸಿಗಲಿ ಹಾಗೂ ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿದ್ದಾರೆ. ಅಲ್ಲದೆ, ಎರಡೂ ದುರಂತಗಳಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 2 ಲಕ್ಷ ರೂಪಾಯಿ ಹಾಗೂ ಗಾಯಗೊಂಡವರಿಗೆ ತಲಾ 50,000 ರೂಪಾಯಿ ಪರಿಹಾರವನ್ನೂ ಘೋಷಿಸಿದ್ದಾರೆ.



















