ಬೆಂಗಳೂರು: ದೇಶದಲ್ಲಿ ಕಾರು ಬಾಡಿಗೆ ಉದ್ಯಮವನ್ನು ಇನ್ನಷ್ಟು ಸುಲಭಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇರಿಸಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು (MoRTH) ಹೊಸದಾಗಿ ‘ದಿ ರೆಂಟ್-ಎ-ಕ್ಯಾಬ್ ಸ್ಕೀಮ್ 2026’ (The Rent-a-Cab Scheme 2026) ಕರಡನ್ನು ಬಿಡುಗಡೆ ಮಾಡಿದ್ದು, ಕಾರು ಬಾಡಿಗೆ ವ್ಯವಹಾರ ಆರಂಭಿಸಲು ಕಡ್ಡಾಯವಾಗಿ ಇರಬೇಕಾದ ಕನಿಷ್ಠ ವಾಹನಗಳ ಸಂಖ್ಯೆಯನ್ನು 50ರಿಂದ ಕೇವಲ 5 ವಾಹನಗಳಿಗೆ ತಗ್ಗಿಸಲು ಪ್ರಸ್ತಾಪಿಸಿದೆ.
37 ವರ್ಷಗಳ ಹಳೆಯದಾದ 1989ರ ನಿಯಮಗಳನ್ನು ಬದಲಾಯಿಸಿ, ಹೊಸ ಉದ್ಯಮಿಗಳು, ಸ್ಟಾರ್ಟ್ ಅಪ್ ಗಳು ಮತ್ತು ಸ್ಥಳೀಯ ಸಣ್ಣ ಆಪರೇಟರ್ ಗಳಿಗೆ ಮಾರುಕಟ್ಟೆ ಪ್ರವೇಶಿಸಲು ಅನುಕೂಲವಾಗುವಂತೆ ಹೊಸ ಸುಧಾರಣೆಗಳನ್ನು ತರಲಾಗುತ್ತಿದೆ.
ಹೊಸ ಕರಡಿನ ಮುಖ್ಯಾಂಶಗಳು
• ಕನಿಷ್ಠ ವಾಹನಗಳ ಮಿತಿ ಕಡಿತ: ಇದುವರೆಗೆ ಕಾರ್ ರೆಂಟಲ್ ವ್ಯವಹಾರ ಆರಂಭಿಸಲು ಕನಿಷ್ಠ 50 ವಾಹನಗಳನ್ನು ಹೊಂದಿರುವುದು ಕಡ್ಡಾಯವಾಗಿತ್ತು. ಆದರೆ ಇನ್ನುಮುಂದೆ ಕೇವಲ 5 ವಾಹನಗಳೊಂದಿಗೆ (ಪ್ರತಿ ಕಾರ್ಯಾಚರಣೆ ಸ್ಥಳದಲ್ಲಿ ಕನಿಷ್ಠ 2 ಕಾರುಗಳು) ಈ ವ್ಯವಹಾರ ಆರಂಭಿಸಬಹುದು.
• ಏಕರೂಪದ ಪರವಾನಗಿ: ಇನ್ನುಮುಂದೆ ಪ್ರತ್ಯೇಕ ಪರವಾನಗಿಗಳ ಬದಲಿಗೆ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದಾದ್ಯಂತ ಮಾನ್ಯವಾಗುವ ಒಂದೇ ಲೈಸೆನ್ಸ್ ನೀಡಲಾಗುತ್ತದೆ.
• ಪ್ರಯಾಣಿಕರ ಸುರಕ್ಷತೆ ಮತ್ತು ಸೌಲಭ್ಯಗಳು: ಬಾಡಿಗೆ ಕಾರುಗಳಲ್ಲಿ ಜಿಪಿಎಸ್ ಆಧಾರಿತ ಸ್ಥಳ ಟ್ರ್ಯಾಕಿಂಗ್ ಸಾಧನಗಳು, ಪ್ರಥಮ ಚಿಕಿತ್ಸಾ ಪೆಟ್ಟಿಗೆ ಕಡ್ಡಾಯಗೊಳಿಸಲಾಗಿದೆ. ಇದರೊಂದಿಗೆ ಗ್ರಾಹಕರಿಗೆ 24 ಗಂಟೆಗಳ ಸಹಾಯವಾಣಿ ಹಾಗೂ ತುರ್ತು ಸಂದರ್ಭಗಳಲ್ಲಿ ಟೋಯಿಂಗ್ ಸೇವೆ ಒದಗಿಸುವುದು ಕಡ್ಡಾಯವಾಗಿದೆ.
• ಚಾಲಕರ ಪೊಲೀಸ್ ಪರಿಶೀಲನೆ: ಆಪರೇಟರ್ ಗಳು ಒದಗಿಸುವ ಚಾಲಕರಿಗೆ ಕಡ್ಡಾಯವಾಗಿ ಪೊಲೀಸ್ ಪರಿಶೀಲನೆ ನಡೆಸಬೇಕು ಮತ್ತು ಅವರ ಸುರಕ್ಷತೆಗಾಗಿ ಸಾಮಾಜಿಕ ಭದ್ರತಾ ನಿಯಮಗಳನ್ನು ಅನ್ವಯಿಸಲಾಗುತ್ತದೆ.
ಸರ್ಕಾರದ ಹೊಸ ಪ್ರಸ್ತಾವನೆಯು ಸಣ್ಣ ಪ್ರಮಾಣದ ಉದ್ಯಮಿಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸುವುದಲ್ಲದೆ, ಗ್ರಾಹಕರಿಗೆ ಹೆಚ್ಚಿನ ಆಯ್ಕೆಗಳನ್ನು ಮತ್ತು ಸುರಕ್ಷಿತ ಪ್ರಯಾಣವನ್ನು ಒದಗಿಸುವ ನಿರೀಕ್ಷೆಯಿದೆ. ಈ ಕರಡಿನ ಕುರಿತು ಸಾರ್ವಜನಿಕರು ಹಾಗೂ ಭಾಗಿದಾರರು ಡಿಸೆಂಬರ್ 5ರವರೆಗೆ ತಮ್ಮ ಅಭಿಪ್ರಾಯಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದ್ದು, ಮುಂದಿನ ವರ್ಷದ ಜನವರಿಯಿಂದ ಇದು ಅಧಿಕೃತವಾಗಿ ಜಾರಿಗೆ ಬರುವ ನಿರೀಕ್ಷೆಯಿದೆ.



















