ಸ್ಯಾನ್ ಫ್ರಾನ್ಸಿಸ್ಕೋ: ಅಮೆರಿಕದ ಚಿಪ್ ತಯಾರಿಕಾ ದೈತ್ಯ ಎನ್ವಿಡಿಯಾ (Nvidia) ಸಂಸ್ಥೆಯ ಸಂಸ್ಥಾಪಕ ಮತ್ತು ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೆನ್ಸನ್ ಹುವಾಂಗ್ ಮತ್ತೊಮ್ಮೆ ಸಂಸ್ಥೆಯ ಚುಕ್ಕಾಣಿ ಹಿಡಿಯಲು ಪ್ರಯತ್ನಿಸುತ್ತಿರುವ ಬೆನ್ನಲ್ಲೇ, ಸುಮಾರು ಎರಡು ದಶಕಗಳ ಹಿಂದೆ ಅವರ ವಿರುದ್ಧ ದಾಖಲಾಗಿದ್ದ ಗಂಭೀರ ಸ್ವರೂಪದ ದೂರುಗಳು ಇದೀಗ ಮುನ್ನೆಲೆಗೆ ಬಂದಿವೆ. ಹುವಾಂಗ್ ತಮ್ಮ ಸಿಬ್ಬಂದಿಗೆ ಬೆದರಿಕೆ ಹಾಕುತ್ತಿದ್ದರು, ನಿಂದಿಸುತ್ತಿದ್ದರು ಮತ್ತು ಅಶ್ಲೀಲ ಹಾಗೂ ಲೈಂಗಿಕವಾಗಿ ಪ್ರಚೋದನಕಾರಿ ವರ್ತನೆ ತೋರುತ್ತಿದ್ದರು ಎಂದು ಕಂಪನಿಯ ಇಬ್ಬರು ಮಾಜಿ ಉನ್ನತ ಅಧಿಕಾರಿಗಳು 2005 ಮತ್ತು 2007ರಲ್ಲಿ ಕ್ಯಾಲಿಫೋರ್ನಿಯಾ ನ್ಯಾಯಾಲಯದಲ್ಲಿ ದಾಖಲಿಸಿದ್ದ ದಾವೆಗಳಲ್ಲಿ ಆರೋಪಿಸಿರುವುದು ಬೆಳಕಿಗೆ ಬಂದಿದೆ.
ಏನೇನು ಆರೋಪ?
ಎನ್ವಿಡಿಯಾ ನೇಮಿಸಿಕೊಂಡಿದ್ದ ಮೊದಲ ಆಂತರಿಕ ವಕೀಲ (In-house lawyer) ಸ್ಟೀಫನ್ ಪೆಟಿಗ್ರೂ 2007ರಲ್ಲಿ ಕ್ಯಾಲಿಫೋರ್ನಿಯಾದ ಸುಪೀರಿಯರ್ ನ್ಯಾಯಾಲಯದಲ್ಲಿ ವಯಸ್ಸಿನ ತಾರತಮ್ಯ ಮತ್ತು ಅಕ್ರಮ ವಜಾ ವಿರುದ್ಧ ದಾವೆ ಹೂಡಿದ್ದರು. ಹುವಾಂಗ್ ನಿಯಮಿತವಾಗಿ ಉದ್ಯೋಗಿಗಳ ಮೇಲೆ ಕಿರುಚಾಡುತ್ತಿದ್ದರು, ದೈಹಿಕ ಹಾನಿ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದರು. ಲೈಂಗಿಕ ಕ್ರಿಯೆಯನ್ನು ಅನುಕರಿಸುವ ರೀತಿಯಲ್ಲಿ ಸೊಂಟವನ್ನು ಅಲುಗಾಡಿಸುತ್ತಾ ಅಶ್ಲೀಲ ಕಾಮೆಂಟ್ಗಳನ್ನು ಮಾಡುತ್ತಿದ್ದರು ಎಂದು ಪೆಟಿಗ್ರೂ ತಮ್ಮ ಅರ್ಜಿಯಲ್ಲಿ ಆರೋಪಿಸಿದ್ದರು. ಹಿರಿಯ ಕಾರ್ಯನಿರ್ವಾಹಕರ ಈ ನಡವಳಿಕೆಯನ್ನು ಪ್ರಶ್ನಿಸಿದ್ದಕ್ಕಾಗಿ ತನ್ನನ್ನು ಕೆಲಸದಿಂದ ತೆಗೆದುಹಾಕಲಾಯಿತು ಎಂದು ಅವರು ದೂರಿದ್ದರು. 2009ರ ಡಿಸೆಂಬರ್ನಲ್ಲಿ ಈ ಪ್ರಕರಣವು ಗೌಪ್ಯ ಒಪ್ಪಂದದ ಮೂಲಕ ಇತ್ಯರ್ಥಗೊಂಡಿತ್ತು.
ಇದಕ್ಕೂ ಮುನ್ನ, 2005ರಲ್ಲಿ ಎನ್ವಿಡಿಯಾದ ಮಾನವ ಸಂಪನ್ಮೂಲ ವಿಭಾಗದ ಹಿರಿಯ ಉಪಾಧ್ಯಕ್ಷರಾಗಿದ್ದ ಮೈಕೆಲ್ ವಿನ್ಸ್ಟನ್ ಕೂಡ ತಾರತಮ್ಯದ ದೂರು ದಾಖಲಿಸಿದ್ದರು. ಹುವಾಂಗ್ ಅವರ ನಿಂದನಾತ್ಮಕ ಮತ್ತು ಲೈಂಗಿಕ ಕಿರುಕುಳದ ವರ್ತನೆಯನ್ನು ವಿರೋಧಿಸಿದ್ದಕ್ಕಾಗಿ ತಾವು ಕೆಲಸಕ್ಕೆ ಸೇರಿದ ಕೇವಲ ನಾಲ್ಕು ವಾರಗಳಲ್ಲೇ ತಮ್ಮನ್ನು ವಜಾಗೊಳಿಸಲಾಯಿತು ಎಂದು ವಿನ್ಸ್ಟನ್ ಆರೋಪಿಸಿದ್ದರು. ನ್ಯೂಯಾರ್ಕ್ ಟೈಮ್ಸ್ ವರದಿಯ ಪ್ರಕಾರ, ಎನ್ವಿಡಿಯಾ ಸಂಸ್ಥೆಯು ವಿನ್ಸ್ಟನ್ ಅವರೊಂದಿಗೆ 1 ಮಿಲಿಯನ್ ಡಾಲರ್ಗೂ (ಸುಮಾರು 8 ಕೋಟಿ ರೂ.ಗೂ ಅಧಿಕ) ಹೆಚ್ಚಿನ ಮೊತ್ತಕ್ಕೆ ಗೌಪ್ಯ ರಾಜಿ ಒಪ್ಪಂದ ಮಾಡಿಕೊಂಡಿತ್ತು.
ಪುನರಾಗಮನದ ಪ್ರಯತ್ನದ ನಡುವೆ ಹೊಸ ಸಂಕಷ್ಟ
ತಮ್ಮ ಅಧೀನ ಅಧಿಕಾರಿ ಮತ್ತು ಶಂಕಿತ ಚೀನೀ ಗೂಢಚಾರಿಣಿ ಜತೆ ಅಕ್ರಮ ಸಂಬಂಧ ಸೇರಿದಂತೆ ಅನೇಕ ವಿವಾದಗಳು ಬಹಿರಂಗವಾದ ಹಿನ್ನೆಲೆಯಲ್ಲಿ 63 ವರ್ಷದ ಜೆನ್ಸನ್ ಹುವಾಂಗ್ ಇತ್ತೀಚೆಗೆ ಸಿಇಒ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕದ ನ್ಯಾಯಾಂಗ ಇಲಾಖೆಯು ತನಿಖೆ ನಡೆಸುತ್ತಿದೆ. ಇದೀಗ ಹುವಾಂಗ್ ಮತ್ತೆ ಸಿಇಒ ಹುದ್ದೆಗೆ ಮರಳಲು ಕಂಪನಿಯ ಆಡಳಿತ ಮಂಡಳಿಗೆ ಮನವಿ ಮಾಡುತ್ತಿದ್ದು, ಸಿಲಿಕಾನ್ ವ್ಯಾಲಿಯ ಕೆಲವು ಮಿತ್ರರು ಮತ್ತು ಉದ್ಯೋಗಿಗಳ ಬೆಂಬಲವೂ ಅವರಿಗಿದೆ. ಆದರೆ, ಸಂಸ್ಥೆಯ ಆಡಳಿತ ಮಂಡಳಿ ಮತ್ತು ಹಿರಿಯ ವ್ಯವಸ್ಥಾಪಕರು ಅವರ ಪುನರಾಗಮನವನ್ನು ಸಾರ್ವಜನಿಕವಾಗಿ ತಳ್ಳಿಹಾಕಿದ್ದಾರೆ.
ಆರೋಪಗಳನ್ನು ತಳ್ಳಿಹಾಕಿದ ಹುವಾಂಗ್ ಪ್ರತಿನಿಧಿ
ಈ ಹಳೆಯ ಆರೋಪಗಳ ಕುರಿತು ಪ್ರತಿಕ್ರಿಯಿಸಿರುವ ಹುವಾಂಗ್ ಅವರ ಪ್ರತಿನಿಧಿ, “ಇವು 20 ವರ್ಷಗಳಿಗೂ ಹಿಂದೆ ಕೆಲಸದಿಂದ ವಜಾಗೊಂಡ ಇಬ್ಬರು ಉದ್ಯೋಗಿಗಳು ಮಾಡಿರುವ ಸುಳ್ಳು ಆರೋಪಗಳಾಗಿವೆ. ಕಳೆದ ಒಂದು ವಾರದಿಂದ ಸಾವಿರಾರು ಉದ್ಯೋಗಿಗಳು ಜೆನ್ಸನ್ ಅವರಿಗೆ ತೋರಿಸುತ್ತಿರುವ ಬೆಂಬಲವೇ ಈ ಆರೋಪಗಳು ಸುಳ್ಳು ಎಂಬುದನ್ನು ಸಾಬೀತುಪಡಿಸುತ್ತದೆ” ಎಂದು ಸಮರ್ಥಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ದೂರು ನೀಡಿದ್ದ ಪೆಟಿಗ್ರೂ ಮತ್ತು ವಿನ್ಸ್ಟನ್ ಇಬ್ಬರೂ ಇದೀಗ ಮೃತಪಟ್ಟಿದ್ದಾರೆ. ತಾವು ಕೆಲಸದ ವಿಚಾರದಲ್ಲಿ ಕಠಿಣವಾಗಿದ್ದೆ ಎಂಬುದನ್ನು ಹುವಾಂಗ್ ಈ ಹಿಂದೆ ಒಪ್ಪಿಕೊಂಡಿದ್ದರೂ, ತಂತ್ರಜ್ಞಾನ ಕ್ಷೇತ್ರದ ವೇಗಕ್ಕೆ ತಕ್ಕಂತೆ ಸಾಗಲು ಅದು ಅನಿವಾರ್ಯವಾಗಿತ್ತು ಎಂದು ಸಮರ್ಥಿಸಿಕೊಂಡಿದ್ದರು.


















