ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶ್ವೇತಭವನದ ಓವಲ್ ಆಫೀಸ್ನಲ್ಲಿ ಭಾರತೀಯ ಅಮೆರಿಕನ್ನರು, ಉದ್ಯಮಿಗಳು ಹಾಗೂ ಗಣ್ಯರೊಂದಿಗೆ ವಿಜೃಂಭಣೆಯಿಂದ ದೀಪಾವಳಿ ಹಬ್ಬವನ್ನು ಆಚರಿಸಿದ್ದಾರೆ. ದೀಪ ಬೆಳಗಿಸುವ ಮೂಲಕ ಶುಭಾರಂಭಗೊಂಡ ಈ ಕಾರ್ಯಕ್ರಮದಲ್ಲಿ ಅಮೆರಿಕಕ್ಕೆ ಭಾರತದ ರಾಯಭಾರಿಯಾಗಿರುವ ವಿನಯ್ ಮೋಹನ್ ಕ್ವಾತ್ರಾ ಸೇರಿದಂತೆ ಹಲವು ಪ್ರಮುಖ ಭಾರತೀಯ-ಅಮೆರಿಕನ್ ನಾಯಕರು ಭಾಗವಹಿಸಿದ್ದರು.
ಈ ಆಚರಣೆಯ ಸಂದರ್ಭದಲ್ಲಿ ಜಿಒಕ್ಯೂಐಐ (GOQii) ತಂತ್ರಜ್ಞಾನ ಸಂಸ್ಥೆಯ ಸಂಸ್ಥಾಪಕ ವಿಶಾಲ್ ಗೊಂಡಲ್ ಅವರು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ತುಳಸಿದಾಸರು ರಚಿಸಿದ ‘ಹನುಮಾನ್ ಚಾಲೀಸಾ’ ಪ್ರತಿಯನ್ನು ಪ್ರೀತಿಯಿಂದ ಕೊಡುಗೆಯಾಗಿ ನೀಡಿದರು. ಈ ಕುರಿತು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಅವರು, “ಧೈರ್ಯ, ಭಕ್ತಿ ಮತ್ತು ಶಕ್ತಿಯ ಸಂಕೇತವಾಗಿರುವ ಹನುಮಾನ್ ಚಾಲೀಸಾವನ್ನು ಟ್ರಂಪ್ ಅವರಿಗೆ ನೀಡಲು ಹೆಮ್ಮೆಯಾಗುತ್ತಿದೆ. ದೀಪ ಬೆಳಗುತ್ತಿದ್ದಂತೆ, ಭಾರತ ಮತ್ತು ಅಮೆರಿಕ ನಡುವಿನ ಮೈತ್ರಿ ಬಲಗೊಳ್ಳಲಿ ಹಾಗೂ ಕತ್ತಲೆಯ ಮೇಲೆ ಬೆಳಕಿನ ವಿಜಯವಾಗಲಿ ಎಂದು ಪ್ರಾರ್ಥಿಸಿದೆ” ಎಂದು ಬರೆದುಕೊಂಡಿದ್ದಾರೆ.
ಪ್ರಮುಖ ಭಾರತೀಯ-ಅಮೆರಿಕನ್ ಉದ್ಯಮಿಗಳ ಉಪಸ್ಥಿತಿ
ಈ ಬಾರಿಯ ದೀಪಾವಳಿ ಸಂಭ್ರಮದಲ್ಲಿ ಐಬಿಎಂ ಸಿಇಒ ಅರವಿಂದ್ ಕೃಷ್ಣ, ಮೈಕ್ರಾನ್ ಟೆಕ್ನಾಲಜಿಯ ಸಂಜಯ್ ಮೆಹ್ರೋತ್ರಾ, ಪ್ರಸಿದ್ಧ ಶೆಫ್ ವಿಕಾಸ್ ಖನ್ನಾ, ಎಫ್ಬಿಐ ನಿರ್ದೇಶಕ ಕಾಶ್ ಪಟೇಲ್, ಎಸ್ಎಸ್ಎ ಉಪ ಆಯುಕ್ತ ಅರ್ಜುನ್ ಮೋದಿ ಹಾಗೂ ಅಮೆರಿಕದ ವಿದೇಶಾಂಗ ಸಚಿವ ಮಾರ್ಕೊ ರೂಬಿಯೋ ಭಾಗವಹಿಸಿದ್ದರು. ಭಾರತೀಯ ಮೂಲದ ಉದ್ಯಮಿಗಳು, ಅಧಿಕಾರಿಗಳ ಉಪಸ್ಥಿತಿಯು ಭಾರತ-ಅಮೆರಿಕ ನಡುವಿನ ಬಾಂಧವ್ಯದ ಆಳವನ್ನು ಎತ್ತಿಹಿಡಿಯಿತು.
ಶ್ವೇತಭವನದಲ್ಲಿ ದೀಪಾವಳಿ ಆಚರಣೆಯ ಪರಂಪರೆ
ಶ್ವೇತಭವನದಲ್ಲಿ ದೀಪಾವಳಿ ಆಚರಿಸುವ ಸಂಪ್ರದಾಯವನ್ನು 2003ರಲ್ಲಿ ಮಾಜಿ ಅಧ್ಯಕ್ಷ ಜಾರ್ಜ್ ಡಬ್ಲ್ಯೂ ಬುಷ್ ಅವರು ಮೊದಲು ಪ್ರಾರಂಭಿಸಿದ್ದರು. ಆ ನಂತರ, 2009ರಲ್ಲಿ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರು ಶ್ವೇತಭವನದಲ್ಲಿ ಸ್ವತಃ ದೀಪ ಬೆಳಗಿಸುವ ಮೂಲಕ ಈ ಆಚರಣೆಗೆ ಹೊಸ ಕಳೆ ನೀಡಿದ್ದರು. ಅಂದಿನಿಂದ ಪ್ರತಿವರ್ಷ ಶ್ವೇತಭವನದ ಓವಲ್ ಆಫೀಸ್ ಸೇರಿದಂತೆ ಪ್ರಮುಖ ಸಭಾಂಗಣಗಳಲ್ಲಿ ಈ ಸಾಂಪ್ರದಾಯಿಕ ದೀಪೋತ್ಸವವು ನಿರಂತರವಾಗಿ ನಡೆದುಕೊಂಡು ಬಂದಿದೆ.


















