ನವದೆಹಲಿ: ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಗೃಹ ಸಚಿವ ಅಮಿತ್ ಶಾ ಅವರ ಹಳೆಯ ಮತ್ತು ಇತ್ತೀಚಿನ ಹೇಳಿಕೆಗಳ ವಿಡಿಯೋ ತುಣುಕುಗಳನ್ನು ಎಕ್ಸ್ (ಟ್ವಿಟರ್) ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ಆಡಳಿತಾರೂಢ ಬಿಜೆಪಿ ಸರ್ಕಾರದಲ್ಲಿ ಗೊಂದಲವಿದೆ ಎಂದು ಬಿಂಬಿಸಲು ಯತ್ನಿಸಿದ್ದಾರೆ. ಇದರ ಬೆನ್ನಲ್ಲೇ ಈ ವಿಡಿಯೋ ಪೋಸ್ಟ್ಗೆ ತಿರುಗೇಟು ನೀಡಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ರಾಹುಲ್ ಗಾಂಧಿ ಅವರು ಸಂಪೂರ್ಣ ಸಿದ್ಧತೆ (ಹೋಮ್ವರ್ಕ್) ಇಲ್ಲದೆ ಅರ್ಧಂಬರ್ಧ ಹಾಗೂ ಸಂದರ್ಭಕ್ಕೆ ಹೊರತಾದ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
‘ಎಸ್ಐಆರ್’ ಕುರಿತು ಅಮಿತ್ ಶಾ ವಿಡಿಯೋ ವಿವಾದ
ರಾಹುಲ್ ಗಾಂಧಿ ಹಂಚಿಕೊಂಡಿರುವ ವಿಡಿಯೋದಲ್ಲಿ ಅಮಿತ್ ಶಾ ಅವರ ಎರಡು ವಿಭಿನ್ನ ಹೇಳಿಕೆಗಳಿವೆ. ಕಳೆದ ಡಿಸೆಂಬರ್ನಲ್ಲಿ ಸಂಸತ್ತಿನಲ್ಲಿ ಮಾತನಾಡಿದ್ದ ಅಮಿತ್ ಶಾ, “ಎಸ್ಐಆರ್ (ವಿಶೇಷ ತೀವ್ರ ಪರಿಷ್ಕರಣೆ) ಪ್ರಕ್ರಿಯೆಯು ಚುನಾವಣಾ ಆಯೋಗಕ್ಕೆ ಒಳಪಟ್ಟಿರುವುದರಿಂದ ಸಂಸತ್ತಿನಲ್ಲಿ ಇದರ ಬಗ್ಗೆ ಚರ್ಚಿಸಲು ಸಾಧ್ಯವಿಲ್ಲ” ಎಂದು ಹೇಳಿದ್ದರು. ಆದರೆ ಇತ್ತೀಚೆಗೆ “ರಾಹುಲ್ ಗಾಂಧಿಯವರೇ, ಪ್ರಧಾನಿ ಮೋದಿಯವರ ಜೊತೆ ಚರ್ಚಿಸುವ ಅಗತ್ಯವಿಲ್ಲ, ಎಸ್ಐಆರ್ ಕುರಿತು ಸಂಸತ್ತಿನ ವಿಶೇಷ ಅಧಿವೇಶನ ಕರೆದು ಚರ್ಚಿಸಲು ನಾವು ಸಿದ್ಧರಿದ್ದೇವೆ” ಎಂದು ಹೇಳಿದ್ದರು. ಈ ಎರಡು ತುಣುಕುಗಳನ್ನು ಜೋಡಿಸಿ “ಬಿಜೆಪಿಯವರು ಗೊಂದಲದಲ್ಲಿದ್ದಾರೆ” ಎಂದು ರಾಹುಲ್ ಗಾಂಧಿ ಕಾಲೆಳೆದಿದ್ದಾರೆ.
ಅರ್ಧಂಬರ್ಧ ವೀಡಿಯೋ ಪೋಸ್ಟ್: ಜೋಶಿ ವಾಗ್ದಾಳಿ
ರಾಹುಲ್ ಗಾಂಧಿ ಅವರ ಈ ಆರೋಪಕ್ಕೆ ಎಕ್ಸ್ ಖಾತೆಯಲ್ಲಿ ತಿರುಗೇಟು ನೀಡಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, “ಅಮಿತ್ ಶಾ ಅವರ ವಿಡಿಯೋವನ್ನು ಕ್ರಾಪ್ ಮಾಡಿ, ಸಂದರ್ಭಕ್ಕೆ ಹೊರತಾಗಿ ಹಂಚಿಕೊಳ್ಳುತ್ತಿರುವುದು ರಾಹುಲ್ ಗಾಂಧಿಯವರ ವಿಷಯ ಗ್ರಹಿಕೆಯ ಕೊರತೆಯನ್ನು ತೋರಿಸುತ್ತದೆ. ಗೊಂದಲ ಇರುವುದು ನಮ್ಮಲ್ಲಿ ಅಲ್ಲ, ನಿಮ್ಮಲ್ಲಿ” ಎಂದಿದ್ದಾರೆ.
“ಚುನಾವಣೆಯಲ್ಲಿ ಗೆದ್ದಾಗ ವ್ಯವಸ್ಥೆ ಸರಿಯಾಗಿದೆ ಎನ್ನುವ ಕಾಂಗ್ರೆಸ್, ಸೋತಾಗ ಚುನಾವಣಾ ಪ್ರಕ್ರಿಯೆಯನ್ನೇ ಪ್ರಶ್ನಿಸುತ್ತದೆ. 2014, 2019 ಮತ್ತು 2024ರ ಲೋಕಸಭಾ ಚುನಾವಣೆಗಳಲ್ಲಿ ಎಸ್ಐಆರ್ ಪ್ರಕ್ರಿಯೆ ಇಲ್ಲದಿದ್ದಾಗಲೂ ಕಾಂಗ್ರೆಸ್ ಸೋಲನುಭವಿಸಿದೆ. ಆ ಸೋಲಿಗೆ ರಾಹುಲ್ ಗಾಂಧಿ ಹೊಣೆ ಹೊರುತ್ತಾರೆಯೇ? ರಾಜಕೀಯ ನಾಟಕಗಳನ್ನು ಬಿಟ್ಟು, ಧೈರ್ಯವಿದ್ದರೆ ಸಂಸತ್ತಿನಲ್ಲಿ ಬಂದು ಸಾಕ್ಷ್ಯಾಧಾರಗಳೊಂದಿಗೆ ಚರ್ಚೆ ಮಾಡಿ” ಎಂದು ಸವಾಲು ಹಾಕಿದ್ದಾರೆ.



















