ವಾಷಿಂಗ್ಟನ್: ಅಮೆರಿಕದ ವರ್ಜಿನಿಯಾದಲ್ಲಿ ನಡೆದಿದ್ದ 28 ವರ್ಷದ ಮಮತಾ ಕಾಫ್ಲೆ ಭಟ್ ಅವರ ನಿಗೂಢ ಕಣ್ಮರೆ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಎದುರಿಸುತ್ತಿರುವ ಭಾರತೀಯ ಮೂಲದ ಪತಿ ನರೇಶ್ ಭಟ್, ನ್ಯಾಯಾಲಯದ ಮುಂದೆ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ಆಕ್ರೋಶಗೊಂಡು ಆಕೆಯ ಮೃತದೇಹವನ್ನು ಗರಗಸದಿಂದ ಕತ್ತರಿಸಿ ವಿಲೇವಾರಿ ಮಾಡಿದ್ದಾಗಿ ನ್ಯಾಯಪೀಠಕ್ಕೆ ತಿಳಿಸಿದ್ದಾರೆ.
ವರ್ಜಿನಿಯಾ ನ್ಯಾಯಾಲಯದಲ್ಲಿ ನಡೆದ ಐದು ವಾರಗಳ ವಿಚಾರಣೆ ವೇಳೆ ಸಾಕ್ಷ್ಯ ನುಡಿದ ನರೇಶ್ ಭಟ್, ತಮ್ಮ ವಿರುದ್ಧ ಹೊರಿಸಲಾದ ಕೊಲೆ ಆರೋಪವನ್ನು ನಿರಾಕರಿಸಿದ್ದಾರೆ. ಜುಲೈ 29, 2024ರ ರಾತ್ರಿ ಪತ್ನಿ ಮಮತಾ ಮಾತ್ರೆಗಳು ಹಾಗೂ ಕೀಟನಾಶಕ ಸೇವಿಸಿ ಹಾಸಿಗೆಯ ಪಕ್ಕದಲ್ಲೇ ಸಾವನ್ನಪ್ಪಿದ್ದಳು. ಆಕೆಗೆ ಸಿಪಿಆರ್ (CPR) ನೀಡಿ ಬದುಕಿಸಲು ವಿಫಲ ಯತ್ನ ನಡೆಸಿದೆ. ಕೊನೆಗೆ ಭಯಗೊಂಡು, ಪೋಲಿಸರಿಗೆ ಕರೆ ಮಾಡದೆ ಮೃತದೇಹವನ್ನು ಮರೆಮಾಚಲು ನಿರ್ಧರಿಸಿದೆ ಎಂದು ನ್ಯಾಯಾಧೀಶರ ಮುಂದೆ ಹೇಳಿಕೊಂಡಿದ್ದಾರೆ.
ಪತ್ನಿ ಮೃತಪಟ್ಟಿದ್ದನ್ನು ಖಚಿತಪಡಿಸಿಕೊಂಡ ಬಳಿಕ ಮೃತದೇಹವನ್ನು ಬಾತ್ರೂಮ್ಗೆ ಒಯ್ದು, ಕಸದ ಚೀಲದಲ್ಲಿ ತುಂಬಲು ಯತ್ನಿಸಿದೆ. ಅದು ಸಾಧ್ಯವಾಗದಿದ್ದಾಗ ಮಾರುಕಟ್ಟೆಯಿಂದ ತಂದ ಗರಗಸದಿಂದ ಆಕೆಯ ಕಾಲುಗಳನ್ನು ಕತ್ತರಿಸಿ ದೇಹವನ್ನು ತುಂಡರಿಸಲು ಪ್ರಯತ್ನಿಸಿದೆ. ಆದರೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಅಸಹಾಯಕನಾಗಿ ಪೂರ್ಣವಾಗಿ ಕತ್ತರಿಸಲು ಸಾಧ್ಯವಾಗಲಿಲ್ಲ. ನಂತರ ದೇಹದ ಭಾಗಗಳನ್ನು ಬೇರೆ ಬೇರೆ ಪ್ಲಾಸ್ಟಿಕ್ ಚೀಲಗಳಲ್ಲಿ ಹಾಕಿ ಕಸದ ತೊಟ್ಟಿಗೆ ಎಸೆದಿದ್ದಾಗಿ ಒಪ್ಪಿಕೊಂಡಿದ್ದಾರೆ.
ಜುಲೈ 2024ರಲ್ಲಿ ಮಮತಾ ಕೊನೆಯ ಬಾರಿಗೆ ವಿಡಿಯೋ ಕರೆಯಲ್ಲಿ ಕಾಣಿಸಿಕೊಂಡಿದ್ದರು. ಕೆಲಸಕ್ಕೆ ಹಾಜರಾಗದಿದ್ದಾಗ ಆಗಸ್ಟ್ 5ರಂದು ಆಕೆ ಕಣ್ಮರೆಯಾಗಿರುವ ಬಗ್ಗೆ ದೂರು ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ದಂಪತಿಯ ಬೆಡ್ರೂಮ್ ಮತ್ತು ಬಾತ್ರೂಮ್ನಲ್ಲಿ ರಕ್ತದ ಕಲೆಗಳು ಹಾಗೂ ಕೂದಲಿನ ಎಳೆಗಳಿದ್ದ ಗರಗಸವನ್ನು ವಶಪಡಿಸಿಕೊಂಡು, ಆಗಸ್ಟ್ 22ರಂದು ನರೇಶ್ನನ್ನು ಬಂಧಿಸಿದ್ದರು. ಕೃತ್ಯ ನಡೆದು ಎರಡು ವರ್ಷಗಳಾಗುತ್ತಾ ಬಂದರೂ ಮಮತಾ ಅವರ ಮೃತದೇಹ ಇನ್ನೂ ಪತ್ತೆಯಾಗಿಲ್ಲ.
ಪ್ರಸ್ತುತ ನರೇಶ್ ಭಟ್ ವಿರುದ್ಧ ಪ್ರಥಮ ದರ್ಜೆ ಕೊಲೆ, ಮೃತದೇಹವನ್ನು ಮರೆಮಾಚಿದ ಹಾಗೂ ದೇಹಕ್ಕೆ ಹಾನಿ ಉಂಟುಮಾಡಿದ ಗಂಭೀರ ಆರೋಪಗಳನ್ನು ಹೊರಿಸಲಾಗಿದೆ. ಶಿಕ್ಷೆಯಿಂದ ತಪ್ಪಿಸಿಕೊಳ್ಳುವ ಅಥವಾ ಶಿಕ್ಷೆಯ ಪ್ರಮಾಣ ತಗ್ಗಿಸುವ ಉದ್ದೇಶದಿಂದ ಈ ಹೊಸ ಕಥೆ ಹೆಣೆದಿದ್ದಾನೆಯೇ ಎಂಬ ಕೋನದಲ್ಲಿಯೂ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

















