ವಾಷಿಂಗ್ಟನ್: ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಕ್ಷೇತ್ರದ ದೈತ್ಯ ಕಂಪನಿ ಗೂಗಲ್ ವಿರುದ್ಧ ಈಗ ಅಮೆರಿಕದಲ್ಲಿ ಅತ್ಯಂತ ಗಂಭೀರ ಸ್ವರೂಪದ ಕಾನೂನು ಸಮರ ಆರಂಭವಾಗಿದೆ. 13 ವರ್ಷದ ಬಾಲಕಿಯೊಬ್ಬಳಿಗೆ ಆಕೆಯ ಆತ್ಮಹತ್ಯೆಯ ಯೋಜನೆ ರೂಪಿಸಲು ಮತ್ತು ಅಂತ್ಯಕ್ರಿಯೆಯ ವಿವರಗಳನ್ನು ಸಿದ್ಧಪಡಿಸಲು ಗೂಗಲ್ನ ‘ಜೆಮಿನಿ’ ಎಐ ಚಾಟ್ಬಾಟ್ ನೆರವಾಗಿದೆ ಎಂದು ಆರೋಪಿಸಿ ಬಾಲಕಿಯ ಪೋಷಕರು ನ್ಯಾಯಾಲಯದ ಬಾಗಿಲು ತಟ್ಟಿದ್ದಾರೆ.
ನ್ಯಾಯಾಲಯಕ್ಕೆ ಸಲ್ಲಿಕೆಯಾಗಿರುವ ದೂರಿನ ಪ್ರಕಾರ, ಬಾಲಕಿ (ದೂರಿನಲ್ಲಿ ಎಮ್ಮಾ ಎಂದು ಉಲ್ಲೇಖಿಸಲಾಗಿದೆ) ತನ್ನ ಶಾಲೆಯಲ್ಲಿ ನೀಡಲಾಗಿದ್ದ ಕ್ರೋಮ್ಬುಕ್ ಸಾಧನದ ಮೂಲಕ ಗೂಗಲ್ನ ‘ಜೆಮಿನಿ’ ಎಐ ಬಳಕೆಗೆ ಚಾಲನೆ ನೀಡಿದ್ದಳು. ಆರಂಭದಲ್ಲಿ ಸಾಮಾನ್ಯ ಸಂಭಾಷಣೆಯಂತೆ ಕಂಡರೂ, ತದನಂತರ ಬಾಲಕಿಯ ಮಾನಸಿಕ ಖಿನ್ನತೆಯ ಸ್ಥಿತಿಯನ್ನು ಬಳಸಿಕೊಂಡ ಚಾಟ್ಬಾಟ್, ಆಕೆಯೊಂದಿಗೆ ಜೀವ ಕೊನೆಗೊಳಿಸುವ ವಿವಿಧ ಮಾರ್ಗಗಳ ಕುರಿತು ಚರ್ಚಿಸಿದೆ. ಅಲ್ಲದೆ, ಬಾಲಕಿ ತನ್ನ ಅಂತ್ಯಕ್ರಿಯೆಯ ಯೋಜನೆಗಳನ್ನು ರೂಪಿಸಲು ಹಾಗೂ ತನ್ನ ಮಾನಸಿಕ ಸ್ಥಿತಿಯನ್ನು ಕುಟುಂಬದಿಂದ ಮುಚ್ಚಿಡಲು ಸಹಾಯ ಮಾಡಿದೆ ಎಂದು ಆರೋಪಿಸಲಾಗಿದೆ.
ಶಾಲೆಯ ತಂತ್ರಜ್ಞಾನದಿಂದ ಬಯಲಾದ ಸತ್ಯ
ಬಾಲಕಿ ತನ್ನ ಅಂತ್ಯಕ್ರಿಯೆಗೆ ಸಂಬಂಧಿಸಿದಂತೆ ಸಿದ್ಧಪಡಿಸುತ್ತಿದ್ದ ಡಾಕ್ಯುಮೆಂಟ್ ಒಂದನ್ನು ಶಾಲೆಯ ಭದ್ರತಾ ತಂತ್ರಜ್ಞಾನ (Monitoring Software) ಪತ್ತೆಹಚ್ಚಿದಾಗ ಈ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ತಕ್ಷಣವೇ ಶಾಲಾ ಆಡಳಿತ ಮಂಡಳಿಯು ಪೋಷಕರನ್ನು ಎಚ್ಚರಿಸಿದ್ದು, ಘಟನೆಯಿಂದ ಆಘಾತಗೊಂಡ ಪೋಷಕರು ಗೂಗಲ್ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಮಕ್ಕಳಿಗೆ ಇಂತಹ ಎಐ ಉಪಕರಣಗಳನ್ನು ನೀಡುವಾಗ ಸಂಭವಿಸಬಹುದಾದ ಅಪಾಯಗಳ ಬಗ್ಗೆ ಗೂಗಲ್ ಸೂಕ್ತ ಮುನ್ನೆಚ್ಚರಿಕೆ ನೀಡಲು ವಿಫಲವಾಗಿದೆ ಹಾಗೂ ‘ಜೆಮಿನಿ 3 ಫ್ಲ್ಯಾಶ್’ ಮಾದರಿಯು ಮಾನಸಿಕ ಆರೋಗ್ಯದ ವಿಚಾರಗಳನ್ನು ಸರಿಯಾಗಿ ನಿರ್ವಹಿಸುವುದಿಲ್ಲ ಎಂಬುದು ಗೊತ್ತಿದ್ದರೂ ನಿರ್ಲಕ್ಷ್ಯ ವಹಿಸಿದೆ ಎಂದು ಪೋಷಕರು ಆರೋಪಿಸಿದ್ದಾರೆ.
ಗೂಗಲ್ ಸ್ಪಷ್ಟನೆ
ಕ್ಯಾಲಿಫೋರ್ನಿಯಾ ನ್ಯಾಯಾಲಯದಲ್ಲಿ ಸಲ್ಲಿಕೆಯಾಗಿದ್ದ ಈ ದೂರನ್ನು ಗೂಗಲ್ ಸಂಸ್ಥೆಯು ಫೆಡರಲ್ ನ್ಯಾಯಾಲಯಕ್ಕೆ ವರ್ಗಾಯಿಸಿದೆ. ಈ ಆರೋಪಗಳ ಕುರಿತು ಪ್ರತಿಕ್ರಿಯಿಸಿರುವ ಗೂಗಲ್ ವಕ್ತಾರ ಜೋಸ್ ಕ್ಯಾಸ್ಟನೆಡಾ, “ನಾವು ಈ ಆರೋಪಗಳನ್ನು ಕೂಲಂಕಶವಾಗಿ ಪರಿಶೀಲಿಸುತ್ತಿದ್ದೇವೆ. ಯುವ ಬಳಕೆದಾರರು ಸಂಕಷ್ಟದ ಸಮಯದಲ್ಲಿ ಅಗತ್ಯ ಬೆಂಬಲ ಮತ್ತು ನಂಬಿಕಸ್ಥ ಸಂಪನ್ಮೂಲಗಳನ್ನು ಕಂಡುಕೊಳ್ಳಲು ಸಹಾಯ ಮಾಡುವಂತಹ ವೈಶಿಷ್ಟ್ಯಗಳನ್ನು ವೈದ್ಯಕೀಯ ಮತ್ತು ಶೈಕ್ಷಣಿಕ ತಜ್ಞರ ಸಲಹೆಯೊಂದಿಗೆ ಅಭಿವೃದ್ಧಿಪಡಿಸಿದ್ದೇವೆ,” ಎಂದು ತಿಳಿಸಿದ್ದಾರೆ.
ಈ ಕಾನೂನು ಸವಾಲಿನ ನಡುವೆಯೇ, ಗೂಗಲ್ ಸಂಸ್ಥೆಯು ಎಐ ಕ್ಷೇತ್ರಕ್ಕೆ ಹೆಚ್ಚಿನ ಹೂಡಿಕೆ ಮಾಡುತ್ತಿದ್ದು, ಸಿಬ್ಬಂದಿ ವೆಚ್ಚವನ್ನು ಸರಿದೂಗಿಸಲು ಕೆನಡಾ, ಫ್ರಾನ್ಸ್, ಜರ್ಮನಿ, ಜಪಾನ್ ಮತ್ತು ಸ್ವಿಟ್ಜರ್ಲೆಂಡ್ ಸೇರಿದಂತೆ ಐದು ದೇಶಗಳಲ್ಲಿ ಉದ್ಯೋಗಿಗಳಿಗೆ ಸ್ವಯಂ ನಿವೃತ್ತಿ (Voluntary Exit Program) ಯೋಜನೆಗಳನ್ನು ವಿಸ್ತರಿಸುತ್ತಿದೆ. ಎಐ ಮತ್ತು ಕ್ಲೌಡ್ ಕಂಪ್ಯೂಟಿಂಗ್ ವಿಭಾಗಗಳಿಗೆ ಆದ್ಯತೆ ನೀಡುತ್ತಿರುವ ಕಂಪನಿಯು, ಈ ಯೋಜನೆಗಳ ಮೂಲಕ ತನ್ನ ವೆಚ್ಚ ನಿಯಂತ್ರಣಕ್ಕೆ ಮುಂದಾಗಿದೆ.


















