ಕರ್ನಾಟಕ ರತ್ನ ಪುನೀತ್ ರಾಜ್ಕುಮಾರ್ ಅಗಲಿ ಇಂದಿಗೆ ಐದು ವರ್ಷಗಳು ಉರುಳಿದ್ದು, ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸಮಾಧಿ ಮುಂದೆ ಅಭಿಮಾನಿಗಳ ಸಾಗರವೇ ಹರಿದು ಬರುತ್ತಿದೆ. ಪುನೀತ್ ಅವರ ಐದನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಅಶ್ವಿನಿ ಪುನೀತ್ ರಾಜ್ಕುಮಾರ್ ಹಾಗೂ ರಾಘವೇಂದ್ರ ರಾಜ್ಕುಮಾರ್ ಸೇರಿದಂತೆ ದೊಡ್ಮನೆ ಕುಟುಂಬಸ್ಥರು ಕೆಂಪು ಗುಲಾಬಿಗಳನ್ನಿಟ್ಟು ಸಮಾಧಿಗೆ ವಿಶೇಷ ಪೂಜೆ ಸಲ್ಲಿಸಿ ಭಾವುಕರಾಗಿದ್ದಾರೆ.
ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸುತ್ತಿರುವ ಅಭಿಮಾನಿಗಳು ರಾಜರತ್ನನ ನೆನಪಿನಲ್ಲಿ ಸಮಾಧಿ ಎದುರು ನಮಿಸುತ್ತಿದ್ದು, ಅಪ್ಪು ನೆನಪು ಶಾಶ್ವತ, ಅಭಿಮಾನ ಅಮರ ಎಂಬ ಘೋಷಣೆಗಳು ಮೊಳಗುತ್ತಿವೆ. ಅಪ್ಪು ತೋರಿಸಿಕೊಟ್ಟ ಹಾದಿಯಲ್ಲೇ ಸಾಗುತ್ತಿರುವ ಅಭಿಮಾನಿ ಬಳಗವು ಅವರ ಸ್ಮರಣಾರ್ಥ ರಕ್ತದಾನ, ಅನ್ನದಾನ ಹಾಗೂ ಉಚಿತ ಕಣ್ಣಿನ ತಪಾಸಣಾ ಶಿಬಿರಗಳಂತಹ ಸಮಾಜಮುಖಿ ಸೇವಾ ಕಾರ್ಯಗಳನ್ನು ಆಯೋಜಿಸಿದೆ.



















